ಬೆಂಗಳೂರು[ಫೆ.21]: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿರುವ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಮತ್ತೊಂದು ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿದೆ. ಇದರಿಂದಾಗಿ ಪೂರ್ವಸಿದ್ಧತಾ ಪರೀಕ್ಷೆಯ ಎಲ್ಲಾ ಆರು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. ತನ್ಮೂಲಕ ಕಳೆದ ವರ್ಷ ನಡೆದಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಈ ಬಾರಿಯೂ ಯಾವುದೇ ತೊಂದರೆಯಿಲ್ಲದಂತೆ ಮುಂದುವರೆದಿದ್ದು, ಶೀಘ್ರವೇ ನಡೆಯಲಿರುವ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಎಷ್ಟುಸುರಕ್ಷಿತ ಎಂಬ ಭೀತಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಲುಕುವಂತೆ ಮಾಡಿದೆ.

ಕಳೆದ ಸೋಮವಾರದಿಂದ ಆರಂಭವಾದ ಪೂರ್ವ ಸಿದ್ಧತಾ ಪರೀಕ್ಷೆಯ ಪೈಕಿ ಈಗಾಗಲೇ ಗಣಿತ ಹಾಗೂ ಇಂಗ್ಲೀಷ್‌ ಪತ್ರಿಕೆಗಳು ಸೋರಿಕೆಯಾಗಿದ್ದವು. ಗುರುವಾರ ನಡೆದ ಹಿಂದಿ ಪ್ರಶ್ನೆ ಪತ್ರಿಕೆಯೂ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡಿದೆ ಎಂದು ಮೂಲಗಳು ತಿಳಿಸಿವೆ. ತನ್ಮೂಲಕ ಕಳೆದ ಮೂರು ದಿನಗಳಿಂದ ನಡೆದ ಮೂರು ವಿಷಯಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಸೋರಿಕೆಯಾದಂತಾಗಿದೆ. ಅಷ್ಟೇ ಅಲ್ಲ, ಶನಿವಾರ ನಡೆಯಲಿರುವ ಸಮಾಜ ವಿಜ್ಞಾನ ವಿಷಯದ್ದು ಎನ್ನಲಾದ ಪ್ರಶ್ನೆ ಪತ್ರಿಕೆಯೊಂದು ಗುರುವಾರವೇ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡಿದೆ. ಇದರಿಂದಾಗಿ ಪೂರ್ವಸಿದ್ಧತಾ ಪರೀಕ್ಷೆಯ ಎಲ್ಲ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆಯೇ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ವಾಟ್ಸಪ್‌ನಲ್ಲಿ ಸೋರಿಕೆ

ಇದರ ಜತೆಗೆ, ಕೆಲ ಟ್ಯುಟೋರಿಯಲ್ಸ್‌ಗಳು ತಮ್ಮ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆಗೂ ಮುನ್ನವೇ ಒದಗಿಸುವುದಾಗಿ ಭರವಸೆ ನೀಡಿವೆ ಎಂಬ ವದಂತಿಯೂ ತೀವ್ರವಾಗಿ ಹಬ್ಬುವ ಮೂಲಕ ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿಚಾರದಲ್ಲೂ ಈಗಲೇ ಶಂಕೆ ಮೂಡುವಂತೆ ಮಾಡಿದೆ.

ಆತಂಕ ಬೇಡ- ಮಂಡಳಿ:

ಸತತವಾಗಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾರಿಕೊಳ್ಳಲು ಮುಂದಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ, ಇದು ಶಾಲಾ ಮಟ್ಟದ ಪರೀಕ್ಷೆಯಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ನಾಲ್ಕು ದಿನಗಳ ಮೊದಲೇ ಪ್ರಶ್ನೆಪತ್ರಿಕೆಗಳನ್ನು ಶಾಲೆಗಳಿಗೆ ಕಳುಹಿಸಿರುವುದರಿಂದ ಸೋರಿಕೆಯಾಗಿರುವ ಸಾಧ್ಯತೆಗಳಿರುತ್ತವೆ. ಆದರೆ, ವಾರ್ಷಿಕ ಪರೀಕ್ಷೆಯಲ್ಲಿ ಬೇರೆಯದೇ ರೀತಿಯಲ್ಲಿ ಪ್ರಕ್ರಿಯೆಗಳು ನಡೆಯಲಿವೆ. ಪರೀಕ್ಷೆ ನಡೆಯುವ ದಿನವೇ ಪ್ರಶ್ನೆಪತ್ರಿಕೆಗಳನ್ನು ಶಾಲೆಗಳಿಗೆ ಕಳುಹಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ ಪಡಬೇಡಿ ಎಂದು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿವೆ. ಆದರೆ, ಈ ಜಾರಿಕೆ ಉತ್ತರಕ್ಕೆ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರ ಹೇಳುವ ಹಾಗೆ ಶಾಲಾ ಹಂತದ ಪರೀಕ್ಷೆಯಾಗಿದ್ದೇ ಆದಲ್ಲಿ ಮಂಡಳಿ ವತಿಯಿಂದ ಪರೀಕ್ಷೆ ನಡೆಸುವ ಅವಶ್ಯಕತೆ ಏನಿದೆ? ಶಾಲಾ ಹಂತದಲ್ಲಿಯೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಆಯಾ ಶಾಲಾ ಶಿಕ್ಷಕರೇ ಪರೀಕ್ಷೆ ನಡೆಸುತ್ತಿದ್ದರು. ಇದರ ಹೊಣೆಗಾರಿಕೆಯನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವಹಿಸಿಕೊಂಡಿದ್ದು ಏಕೆ ಎಂಬುದು ಪೋಷಕರು, ವಿದ್ಯಾರ್ಥಿಗಳು ಹಾಗೂ ಖಾಸಗಿ ಶಾಲಾ ಮಂಡಳಿಗಳ ಪ್ರಶ್ನೆಯಾಗಿದೆ.

ಹಿಂದಿನ ವರ್ಷಗಳಲ್ಲಿ ಶಿಕ್ಷಕರ ಸಂಘದಿಂದ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದಲೇ ಈ ಬಾರಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷೆ ನಡೆಸುತ್ತಿದೆ. ಈ ಪರೀಕ್ಷೆಯಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ ಇನ್ನು ಪರೀಕ್ಷೆ ನಡೆಸುವ ಉದ್ದೇಶವಾದರೂ ಏನು? ಇದರಿಂದ ಯಾವುದೇ ಉಪಯೋಗವಿಲ್ಲ. ನಾಲ್ಕು ದಿನಗಳ ಮೊದಲೇ ಪ್ರಶ್ನೆಪತ್ರಿಕೆ ವಿತರಿಸಿ ಸೋರಿಕೆಯಾದ ಬಳಿಕ, ಇದು ಶಾಲಾ ಹಂತದ ಪರೀಕ್ಷೆ ಆತಂಕ ಪಡಬೇಡಿ ಎಂಬುದರಲ್ಲಿ ಅರ್ಥವಿಲ್ಲ. ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಅದರಲ್ಲೂ ಶಿಕ್ಷಣ ಸಚಿವರು ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಬಾಯಿ ಬಿಡುತ್ತಿಲ್ಲ. ಹೀಗಾದರೆ, ವರ್ಷಪೂರ್ತಿ ಶಿಸ್ತುಬದ್ಧವಾಗಿ ಪಠ್ಯ ಬೋಧನೆ ಮಾಡಿರುವ ಶಿಕ್ಷಕರಿಗೆ ಅನ್ಯಾಯವಾಗಲಿದೆ ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೂರ್ವ ಸಿದ್ಧತಾ ಪರೀಕ್ಷೆಗೂ ಅಂತಿಮ ಪರೀಕ್ಷೆಗೂ ವ್ಯತ್ಯಾಸವಿದೆ

ಪೂರ್ವ ಸಿದ್ಧತಾ ಪರೀಕ್ಷೆಗಳಿಗೂ ಮತ್ತು ಅಂತಿಮ ಪರೀಕ್ಷೆಗಳಿಗೂ ಸಂಬಂಧವಿಲ್ಲ. ಅಂತಿಮ ಪರೀಕ್ಷೆಯಲ್ಲಿ ಪರೀಕ್ಷಾ ಮಾದರಿ, ಪ್ರಶ್ನೆಗಳನ್ನು ಕೇಳುವ ಮಾದರಿ ತಿಳಿಸುವುದಕ್ಕಾಗಿ ಹಾಗೂ ವಿದ್ಯಾರ್ಥಿಗಳ ಸಿದ್ಧತೆಗಾಗಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಎರಡೂ ಪರೀಕ್ಷೆಗಳಿಗೂ ಸಂಬಂಧ ಕಲ್ಪಿಸುವುದು ಬೇಡ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ಮನವಿ ಮಾಡಿದ್ದಾರೆ.

ಈಗ 14,600 ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಅಂತಿಮ ಪರೀಕ್ಷೆಯಲ್ಲಿ ಕೇವಲ 2,700 ಪರೀಕ್ಷಾ ಕೇಂದ್ರಗಳು ಮಾತ್ರ ಇರಲಿವೆ. ಪರೀಕ್ಷೆ ನಡೆಸುವ ಅರ್ಧ ಗಂಟೆ ಮುಂಚೆ ಮಾತ್ರ ಖಜಾನೆಗಳಿಂದ ಪ್ರಶ್ನೆಪತ್ರಿಕೆಗಳು ರವಾನೆಯಾಗಲಿವೆ. ಸಿಸಿಟಿವಿ ಕ್ಯಾಮರಾ ಸೇರಿದಂತೆ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಆದ್ದರಿಂದ ಪೋಷಕರು ಆತಂಕ ಮಾಡಿಕೊಳ್ಳಬೇಡಿ. ಮುಂದಿನ ಎರಡು ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿವೆ. ಅಂತಿಮ ಪರೀಕ್ಷೆಯಲ್ಲಿಯೂ ಇದೇ ರೀತಿಯಲ್ಲಿಯೇ ಪ್ರಶ್ನೆಪತ್ರಿಕೆಗಳು ಸಿಗಲಿವೆ ಎಂಬ ವದಂತಿಗಳನ್ನು ನಂಬಿಕೊಂಡು ವಿದ್ಯಾರ್ಥಿಗಳು ಮೋಸ ಹೋಗಬೇಡಿ ಎಂದು ತಿಳಿಸಿದ್ದಾರೆ.