Asianet Suvarna News Asianet Suvarna News

ಗದಗ: ಮುಂಡರಗಿ ತಾಲೂಕಿನಲ್ಲಿ ಮತ್ತೆ ಮಳೆ ಅಭಾವ

* ಒಣಗುತ್ತಿರುವ ಹೆಸರು, ಶೇಂಗಾ, ಗೋವಿನಜೋಳ ಬೆಳೆಗಳು
* ಗದಗ ಜಿಲ್ಲೆಯ ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ತೇವಾಂಶ ಕೊರತೆ
* ಮಳೆ ಅಭಾವದಿಂದ ಹೆಚ್ಚಿನ ಪ್ರಮಾಣದಲ್ಲಿ ನಡೆಯದ ಬಿತ್ತನೆ ಕಾರ್ಯ
 

Again Rain Deprivation at Mundargi in Gadag grg
Author
Bengaluru, First Published Jun 27, 2021, 1:32 PM IST | Last Updated Jun 27, 2021, 1:32 PM IST

ಶರಣು ಸೊಲಗಿ

ಮುಂಡರಗಿ(ಜೂ.27): ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ತೇವಾಂಶ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಬರದ ಛಾಯೆ ಆವರಿಸಿದೆ. ರೈತರು ವರುಣನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಡಂಬಳ, ಕದಾಂಪುರ, ವೆಂಕಟಾಪುರ, ಹೈತಾಪುರ, ಹಳ್ಳಿಗುಡಿ, ಪೇಟಾಲೂರು, ಹಾರೋಗೇರಿ, ಬಸಾಪುರ, ಬಾಗೇವಾಡಿ, ಜಾಲವಾಡಗಿ, ಹಮ್ಮಿಗಿ ಮೊದಲಾದ ಕಡೆಗಳಲ್ಲಿ ಪ್ರಾರಂಭದಲ್ಲಿ ಅಲ್ಪಸ್ವಲ್ಪ ಮಳೆಯಾಗಿತ್ತು. ಹೀಗಾಗಿ ರೈತರು ಧೈರ್ಯಮಾಡಿ ಹೆಸರು, ಶೇಂಗಾ, ಗೋವಿನಜೋಳ ಮೊದಲಾದವುಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಬಿತ್ತನೆ ಮಾಡಿದ್ದ ಬೀಜವು ಚಿಗುರೊಡೆದಿದ್ದು, ತೇವಾಂಶ ಕೊರತೆಯಿಂದ ಒಣಗುತ್ತಿವೆ.

ಈಗಾಗಲೇ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ಮೃಗಶಿರಾ ಐದು ಮಳೆಗಳು ಹೋಗಿದ್ದು, ಇದೀಗ ಆರಿದ್ರಾ ಮಳೆಯೂ ಸಹ ಕೂಡಿಕೊಂಡು 6 ದಿನ ಆಗಿದೆ. ಇವೆಲ್ಲವೂ ರೈತನ ಕೃಷಿ ಚಟುವಟಿಕೆಗಳಿಗೆ ಅತ್ಯಂತ ಅವಶ್ಯವಾಗಿರುವ ಮಳೆಗಳಾಗಿದ್ದರೂ ಇವ್ಯಾವು ಸರಿಯಾಗಿ ಆಗಿಲ್ಲ. ಅಶ್ವಿನಿ, ಭರಣಿ ಮಳೆಯಾದರೆ ರೈತ ಭೂಮಿಯನ್ನು ಸಂಪೂರ್ಣವಾಗಿ ಹದ ಮಾಡಿಕೊಳ್ಳುತ್ತಾನೆ. ಕೃತಿಕಾ ಮಳೆಗೆ ಹೆಸರು, ಸೂರ್ಯಕಾಂತಿ, ಜೋಳ, ಶೇಂಗಾ, ಎಳ್ಳು ಸೇರಿದಂತೆ ಅನೇಕ ಬೆಳೆಗಳಿಗಾಗಿ ಬಿತ್ತನೆ ಕಾರ್ಯ ನಡೆಯುತ್ತದೆ. ಆದರೆ ಮಳೆ ಅಭಾವದಿಂದ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ನಡೆದಿಲ್ಲ.

ರಾಜ್ಯದಲ್ಲಿ 3.06 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣ

ಮುಂಗಾರು ಹಂಗಾಮಿನಲ್ಲಿ ಒಟ್ಟು 48,500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆಯ ಕೊರತೆಯಿಂದಾಗಿ ಈ ಬಾರಿ ನೀರಾವರಿ ಪ್ರದೇಶದಲ್ಲಿ 7110 ಹೆಕ್ಟೇರ್‌, ಖುಷ್ಕಿ ಜಮೀನಿನಲ್ಲಿ 4880 ಹೆಕ್ಟೇರ್‌ ಸೇರಿ ಒಟ್ಟು 11,990 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅದರಲ್ಲಿ ಭತ್ತ 2700 ಆಗಬೇಕಾಗಿದ್ದು, 350 ಹೆಕ್ಟೇರ್‌ ಬಿತ್ತನೆ ಆಗಿದೆ. ಹೈಬ್ರೀಡ್‌ ಜೋಳ 600 ಹೆಕ್ಟೇರ್‌ ಆಗಬೇಕಿತ್ತು, 350 ಹೆಕ್ಟೇರ್‌ ಬಿತ್ತನೆ ಆಗಿದೆ.

ಗೋವಿನಜೋಳ 17600 ಹೆಕ್ಟೇರ್‌ ಆಗಬೇಕಿತ್ತು, 3810 ಹೆಕ್ಟೇರ್‌ ಬಿತ್ತನೆ ಆಗಿದೆ. ಹೆಸರು ಕಾಳು 12000 ಹೆಕ್ಟೇರ್‌ ಆಗಬೇಕಿತ್ತು, 3680 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ, ಶೇಂಗಾ 6000 ಹೆಕ್ಟೇರ್‌ ಆಗಬೇಕಿತ್ತು, 410 ಹೆಕ್ಟೇರ್‌ ಮಾತ್ರ ಆಗಿದೆ. ಸೂರ್ಯಕಾಂತಿ 6000 ಆಗಬೇಕಿತ್ತು, ಆದರೆ 2140 ಹೆಕ್ಟೇರ್‌ ಮಾತ್ರ ಆಗಿದೆ. ಹತ್ತಿ 2000 ಹೆಕ್ಟೇರ್‌ ಆಗಬೇಕಿತ್ತು, ಆದರೆ 810 ಹೆಕ್ಟೇರ್‌ ಆಗಿದೆ. ಕಬ್ಬು 1000 ಹೆಕ್ಟೇರ್‌ ಆಗಬೇಕಾಗಿದ್ದು, ಕೇವಲ 400 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ತಾಲೂಕಿನಲ್ಲಿ ಸುಮಾರು 30ರಿಂದ 36 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭೂಮಿ ಬಿತ್ತನೆಯಾಗದೇ ಹಾಗೇ ಉಳಿದಿವೆ.

‘ನಿಮ್ಮೂರಾಗ ಮಳಿಯಾಗೈತೇನ್ರಿ, ಇಲ್ಲ ಬಿಡ್ರಿ, ನಿಮ್ಮ ಊರಾಗರ ಆಗೈತೇನ್ರಿ? ನಮ್ಮೂರಾಗೂ ಆಗಿಲ್‌ ಬಿಡ್ರಿ. ಕೆಟ್‌ ಗಾಳಿ ಹಚ್ಚಿ ಹೊಡಿಯಾಕತೈತಿ. ಆದ್ರ ಮಳೆ ಮಾತ್ರ ಇಲ್ಲಾ. ನಾವ್‌ ನೋಡಿದ್ರ ಕೈಯಾಗಿದ್ದ ರೊಕ್ಕಾ ಖರ್ಚುಮಾಡಿ ಮಣ್ಣಾಗ ಹಾಕಿ ಕುಂತೀವಿ. ಕಲ್ಲೂ ಹೋತು ಕಲ್ಲಿಗೆ ಹತ್ತಿದ ಬೆಲ್ಲಾನೂ ಹೋತು ಅನ್ನುವಂಗಾಗೈತಿ ನಮ್‌ ಬಾಳೇವು. ಹಿಂಗ್‌ ಆದ್ರ ರೈತ್ರ ಬದ್ಕೂದಾದ್ರೂ ಹ್ಯಾಂಗ್ರಿ’ ಎಂದು ಮುಂಡರಗಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ರೈತರು ಮಾತನಾಡಿಕೊಳ್ಳುತ್ತಿದ್ದಾರೆ.

ಮಳಿಗಾಲ ಚಾಲೂಆದ್‌ ಕೂಡ್ಲೆ ನಮ್ಗ ಸ್ವಲ್ಪ ಮಳಿ ಆತು. ಕೈಯಾಗಿದ್ದ ರೊಕ್ಕಾ ಖಚ್‌ರ್‍ ಮಾಡಿ ಬೀಜಾ, ಗೊಬ್ರಾ ತಂದು ಹೆಸರು, ಸೂರ್ಯಕಾಂತಿ, ಮೆಣಸಿನಬೀಜಾ ಎಲ್ಲಾ ಭೂಮ್ಯಾಗ್‌ ಹಾಕಿದ್ವಿ. ನಂತ್ರ ಒಟ್ಟಬೆಳಿಗೆ ಅನ್ಕೂಲಾಗುವಂಗ್‌ ಮಳೀನ ಆಗ್ಲಿಲ್ಲ. ಹಿಂಗಾಗಿ ಬಿತ್ತಿದ್‌ ಪೀಕ್‌ ಹುಟ್ಟಿದ್ವು, ಹೊಳ್ಳಿ ಒಣಗಾಕತ್ಯಾವು. ಹಿಂಗ್‌ ಇನ್ನೊಂದ ವಾರ ಮಳಿ ಹೋದ್ರ ಎಲ್ಲಾ ಬೆಳಿನೂ ಸಂಪೂರ್ಣವಾಗಿ ಕಮರಿ ಹೊಕ್ಕಾವು. ಹಿಂಗಾದ್ರ ರೈತ್ರ ಹ್ಯಾಂಗ್‌ ಬದತ್ಕಾರಿ ಎಂದು ವೆಂಕಟಾಪುರ ರೈತರು ಕಳಕಪ್ಪ ಕರವೀರಪ್ಪ ತುಪ್ಪದ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios