ಸೋಮರಡ್ಡಿ ಅಳವಂಡಿ

ಕೊಪ್ಪಳ(ಫೆ.18): ಒಸಿಯಾಟದ ಹಾವಳಿ ಕೊಪ್ಪಳ ಜಿಲ್ಲಾದ್ಯಂತ ಮತ್ತೆ ಸಪ್ಪಳ ಮಾಡುತ್ತಿದೆ. ಅನೇಕರು ಇದರ ಹಳ್ಳಕ್ಕೆ ಬಿದ್ದು ನಷ್ಟ ಅನುಭವಿಸುತ್ತಿದ್ದಾರೆ. ಯುವಕರು ದಾರಿ ತಪ್ಪುತ್ತಿದ್ದಾರೆ. ಇಷ್ಟಾದರೂ ಪೊಲೀಸ್‌ ಇಲಾಖೆ ಕಣ್ಮುಚ್ಚಿ ಕುಳಿತಿದ್ದು ಯಾಕೆ? ಎನ್ನುವುದು ಯಕ್ಷ ಪ್ರಶ್ನೆ.

ಬೆಲೆ ಏರಿಕೆಯ ವಿರುದ್ಧ ಕಾರಟಗಿಯಲ್ಲಿ ಪ್ರತಿಭಟನೆ ಮಾಡಿದ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರ ಬಹಿರಂಗ ಭಾಷಣ ಇದೆಲ್ಲವನ್ನು ಬಯಲು ಮಾಡಿದೆ. ತಂಗಡಗಿ ಅವರು ನನ್ನ ಬಳಿ ದಾಖಲೆ ಇದ್ದು, ಅವುಗಳನ್ನು ಶೀಘ್ರದಲ್ಲಿಯೇ ಸಂಬಂಧಪಟ್ಟವರಿಗೆ ತಲುಪಿಸುವುದಾಗಿಯೂ ಹೇಳಿದ್ದಾರೆ.

ಅವರ ಭಾಷಣ ಈಗ ಫುಲ್‌ ವೈರಲ್‌ ಆಗುತ್ತಿದೆ. ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು ಇಂಥ ಗಂಭೀರ ಆರೋಪ ಮಾಡಿರುವುದು ವ್ಯಾಪಕ ಚರ್ಚೆಗೆ ಇಂಬು ನೀಡಿದೆ. ಪೊಲೀಸ್‌ ಇಲಾಖೆಯ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ.
ಕನಕಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಟ್ಕಾ, ಕ್ಲಬ್‌ ಹಾವಳಿ ವಿಪರೀತವಾಗಿದೆ ಎನ್ನುವುದು ಅವರ ವಾದ. ಈಗ ಅದಕ್ಕೆ ಪೂರಕ ಎನ್ನುವಂತೆ ಕನಕಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಅಧಿಕಾರಿಯೊಬ್ಬರು ‘ಶ್ರೀದೇವಿ’ ಹೆಸರಿನಲ್ಲಿ ಒಸಿ ಕಂಪನಿ ನಡೆಸುತ್ತಿದ್ದಾರೆ. ಈ ಕಂಪನಿ ಓಸಿ ಆಡುವವರಿಗೆ ಯಾವುದೇ ಅಡ್ಡಿ ಇಲ್ಲ ಎನ್ನುವಂತೆ ಇದೆ. ಇದರ ಹಿಂದೆ ಯಾರಾರ‍ಯರು ಇದ್ದಾರೆ? ಎನ್ನುವುದು ಪತ್ತೆಯಾಗಬೇಕಾಗಿದೆ ಎಂದು ಸವಾಲು ಎಸೆದಿದ್ದಾರೆ.

'ಕಾಂಗ್ರೆಸ್‌ ಇಷ್ಟವಿಲ್ಲ, ಬಿಜೆಪಿ ಸೇರೋದಕ್ಕೆ ತುದಿಗಾಲ ಮೇಲೆ ನಿಂತ 'ಕೈ' ಶಾಸಕ'

ಜಿಲ್ಲಾದ್ಯಂತ ಬಿಸಿಬಿಸಿ ಚರ್ಚೆ:

ತಂಗಡಗಿ ಮಾತನಾಡಿರುವ ವೀಡಿಯೋ ಇದೀಗ ಫುಲ್‌ ವೈರಲ್‌ ಆಗಿದೆ. ಅದರಲ್ಲೂ ಒಸಿಯಾಟದ ಕುರಿತು ಎಳೆ ಎಳೆಯಾಗಿ ಮಾತನಾಡಿರುವುದನ್ನು ಶೇರ್‌ ಮಾಡಿ, ಅಯ್ಯೋ ಎನ್ನುವ ಕಮೆಂಟ್‌ ಹಾಕುತ್ತಿದ್ದಾರೆ. ಹಾಗಾದರೆ ಅಧಿಕಾರಿಯೊಬ್ಬ​ರು ಜಿಲ್ಲೆಯಲ್ಲಿ ​ಒಸಿ ಕಂಪನಿ ನಡೆಸುತ್ತಿದ್ದಾರೆಯೇ? ಆ ಕಂಪನಿಯ ಹೆಸರು ಶ್ರೀದೇವಿಯೇ? ಇಂಥದ್ದೊಂದು ಚರ್ಚೆ ನಡೆಯುತ್ತಿದೆ.

ಪೊಲೀಸರ ಮೌನ:

ಇಷ್ಟಾದರೂ ಪೊಲೀಸರು ಮೌನ ವಹಿಸಿದ್ದು ಯಾಕೆ? ಈ ರೀತಿಯ ಮಾಹಿತಿಯನ್ನು ಬಹಿರಂಗವಾಗಿಯೇ ನೀಡಿದಾಗ ಅದನ್ನು ತನಿಖೆ ಯಾಕೆ ಮಾಡುತ್ತಿಲ್ಲ? ಪೊಲೀಸರಿಗೆ ಗೊತ್ತಿದ್ದರೂ ಮೌನ ವಹಿಸಿದ್ದಾರೆಯೇ? ಆ ಅಧಿಕಾರಿ ಪೊಲೀಸ್‌ ಅಧಿಕಾರಿಯೋ ಅಥವಾ ಬೇರೆ ಇಲಾಖೆಯ ಅಧಿಕಾರಿಯೋ? ಇದೆಲ್ಲವೂ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದರೂ ಪೊಲೀಸ್‌ ಇಲಾಖೆ ನನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಇಂಥದ್ದೊಂದು ಗಂಭೀರ ಆರೋಪ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಇದುವರೆಗೂ ಉತ್ತರ ನೀಡಿಲ್ಲ. ಅಲ್ಲದೆ ಒಸಿ, ಕ್ಲಬ್‌ ನಡೆಯುತ್ತಿದ್ದರೂ ಅದಕ್ಕೆ ಯಾಕೆ ಕಡಿವಾಣ ಹಾಕುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಜಿಲ್ಲಾದ್ಯಂತ ಅವ್ಯಾಹತ:

ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಒಸಿ, ಮಟ್ಕಾ ಅವ್ಯಾಹತವಾಗಿ ನಡೆಯುತ್ತಿದೆ. ಕಡಿವಾಣವೇ ಇಲ್ಲದಂತಾಗಿದೆ. ಹೀಗಾಗಿ, ಅನೇಕರು ಅಡ್ಡ ಹಾದಿ ತುಳಿಯುತ್ತಿದ್ದಾರೆ. ಇದುವರೆಗೂ ಕದ್ದು ಮುಚ್ಚಿ ನಡೆಯುತ್ತಿರುವುದು ಈಗ ಬಹಿರಂಗವಾಗಿಯೇ ನಡೆಯುತ್ತಿದೆ. ಚಾರ್ಟ್‌ಗಳು ಎಲ್ಲೆಂದರಲ್ಲಿ ಸಿಗುತ್ತಿವೆ. ಇವುಗಳ ಮಾರಾಟವೂ ಜೋರಾಗಿಯೇ ಸಾಗಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಜನಪ್ರತಿನಿಧಿಗಳು ಈ ದಿಸೆಯಲ್ಲಿ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಇದರಲ್ಲಿ ಇರುವ ಕುಳಗಳನ್ನು ಬಂಧಿಸಿ, ಜೈಲಿಗೆ ಅಟ್ಟಬೇಕು ಎನ್ನುವ ಆಗ್ರಹ ಜೋರಾಗಿದೆ.

ಒಸಿ ಕಂಪನಿ ಮಾಡಿಕೊಂಡು ದಂಧೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಪೊಲೀಸ್‌ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ನಿಯಂತ್ರಣ ಮಾಡದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಕೊಪ್ಪಳ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದ್ದಾರೆ.