ಕೇಂದ್ರದ ಪ್ರತಿಷ್ಠಿತ ಸಂಸ್ಥೆಗಳನ್ನು ರಾಯಚೂರು ಜಿಲ್ಲೆ ಮಂಜೂರು ಮಾಡುವುದಕ್ಕೆ ಅದ್ಯಾಕೋ ರಾಜ್ಯ ಸರ್ಕಾರಕ್ಕೆ ಅದರಲ್ಲಿಯೂ ಬಿಜೆಪಿಗೆ ಸುತರಾಮ್‌ ಮನಸ್ಸಿಲ್ಲ ಎನ್ನುವುದು ಪದೇ ಪದೆ ಬಹಿರಂಗವಾಗುತ್ತಿದೆ. 

ರಾಮಕೃಷ್ಣ ದಾಸರಿ

ರಾಯಚೂರು(ಸೆ.24): ಜಿಲ್ಲೆಗೆ ಸದಾ ಅನ್ಯಾಯ ಮಾಡುತ್ತಲೇ ಬರುತ್ತಿರುವ ರಾಜ್ಯ ಬಿಜೆಪಿ ಸರ್ಕಾರದಿಂದ ಮತ್ತೊಂದು ದೋಖಾ ನಡೆಯು ಇದೀಗ ಬಹಿರಂಗಗೊಂಡಿದೆ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌)ಯನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಲೇಬೇಕು ಎನ್ನುವ ಜಿಲ್ಲೆ ಬಹುದಿನಗಳ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸುವ ಕೆಲಸವನ್ನು ಇಲ್ಲಿ ತನಕ ಮಾಡದ ರಾಜ್ಯ ಬಿಜೆಪಿ ಸರ್ಕಾರವು ಮತ್ತೆ ಅದೇ ರೀತಿಯ ನಿರ್ಲಕ್ಷ್ಯತೆಯನ್ನೇ ಮುಂದುವರೆಸುತ್ತಿದೆ.

ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡುವುದರ ಕುರಿತು ವಿಧಾನಸಭೆಯಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಕೇಳಿದ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಅವರು ಅಡ್ಡಗೋಡೆಯ ಮೇಲೆ ದೀಪ ಇಡುವಂತಹ ರೀತಿಯಲ್ಲಿ ಉತ್ತರಿಸಿರುವುದು ಜಿಲ್ಲೆ ಜನಸಾಮಾನ್ಯರನ್ನು ಕೆರಳಿಸುವಂತೆ ಮಾಡಿದೆ.

ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಸೋಲಿಸುವುದು ಶತಸಿದ್ಧ: ಆಪ್‌ ಮುಖಂಡ ಅರವಿಂದ

ರಾಯಚೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದ ಗಾಂಧಿ ಪುತ್ಥಳಿ ಮುಂದೆ ರಾಯಚೂರು ಏಮ್ಸ್‌ ಹೋರಾಟ ಸಮಿತಿ ನೇತೃತ್ವದಲ್ಲಿ ಕಳೆದ 134 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಶಾಸಕರು, ಸಂಸದರು, ಸಚಿವರು ಹಾಗೂ ಮುಖ್ಯಮಂತ್ರಿ ಅವರ ಗಮನಕ್ಕು ಇದೆ. ಈ ನಡುವೆ ವಿಧಾನಸಭೆಯಲ್ಲಿ ಏಮ್ಸ್‌ ಕುರಿತ ಪ್ರಶ್ನೆಗೆ ಉತ್ತರಿಸಿರುವ ಪತ್ರದಲ್ಲಿ ಸರ್ಕಾರವು ಜಿಲ್ಲೆಗೆ ಮತ್ತೊಂದು ಅನ್ಯಾಯವನ್ನು ಮಾಡುವ ಹುನ್ನಾರ ಹೂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

ಪತ್ರದಲ್ಲಿ ಬಹಿರಂಗ:

ಏಮ್ಸ್‌ ಆರಂಭ ವಿಚಾರವಾಗಿ ರಾಜ್ಯ ಸರ್ಕಾರದ ನಿಲುವು, ಜಿಲ್ಲೆಯ ಮೇಲಿನ ಒಲವು ಪತ್ರದಲ್ಲಿ ಬಹಿರಂಗಗೊಂಡಿದ್ದು, ಸಚಿವರು ನೀಡಿದ ಉತ್ತರ ಪತ್ರದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷ ಯೋಜನೆಯಡಿ ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ’ (ಆಲ್‌ ಇಂಡಿಯಾ ಇನ್ಸ್‌ಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌) ಸೂಪರ್‌ ಸ್ಪೆಷಾಲಿಟಿ ಬೋಧಕ ಸಂಸ್ಥೆಯನ್ನು ವಿವಿಧ ರಾಜ್ಯಗಳಲ್ಲಿ ಪ್ರಾರಂಭಿಸುವ ಹೊಣೆ ಭಾರತ ಸರ್ಕಾರದ್ದಾಗಿರುತ್ತದೆ. ಅದರಂತೆ ಇಂತಹ ಸಂಸ್ಥೆಗಳನ್ನು ಹೊಂದುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿರುತ್ತದೆ. ಈ ಯೋಜನೆಯ ಮಾನದಂಡಗಳನ್ವಯ 200 ಎಕರೆ ಜಮೀನು, 4 ಪಥಗಳ ಸಾರಿಗೆ ಸಂಪರ್ಕ, ನೀರು, ವಿದ್ಯುತ್‌ ಸಂಪರ್ಕ ಮತ್ತು ಇತರೆ ಸಂಸ್ಥೆಗಳನ್ನು ಹೊಂದಿರುವ ಸ್ಥಳಗಳನ್ನು ರಾಜ್ಯ ಸರ್ಕಾರ ಗುರುತಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಪ್ರಾರಂಭಿಕವಾಗಿ ರಾಮನಗರ ಧಾರವಾಡ, ಬಿಜಾಪುರ, ಕಲಬುರಗಿ ಜಿಲ್ಲೆಗಳಲ್ಲಿ ಏಮ್ಸ್‌ ಸಂಸ್ಥೆ ಸ್ಥಾಪಿಸಲು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. 2020 ಸೆ.18ರಂದು ಧಾರವಾಡ ಜಿಲ್ಲಾಧಿಕಾರಿಯ ಕಾರ್ಯಾಲಯದಿಂದ ಧಾರವಾಡ ತಾಲೂಕಿನ ಇಟಗಟ್ಟಿಗ್ರಾಮದ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭೂ ಸ್ವಾಧೀನ ಪಡೆಸಿಕೊಂಡಿರುವ ಜಾಗವೂ ಏಮ್ಸ್‌ ಸಂಸ್ಥೆಯನ್ನು ಪ್ರಾರಂಭಿಸುವುದಕ್ಕೆ ಹಾಗೂ ಕೇಂದ್ರ ಸರ್ಕಾರವೂ ನಿಗದಿ ಪಡಿಸಿರುವ ಮಾನದಂಡಗಳನ್ವಯ ಪೂರೈಸಲು ಸದರಿ ಸ್ಥಳವೂ ಸೂಕ್ತವಾಗಿದೆ ಎಂಬ ನಿರ್ಣಯಕ್ಕೆ ಬಂದು ಹುಬ್ಬಳ್ಳಿ, ಧಾರವಾಡ ಜಾಗ ಮತ್ತು ಇತರೆ ಮಾಹಿತಿಯೊಂದಿಗೆ ಕೇಂದ್ರ ಸರ್ಕಾರಕ್ಕೆ 2020 ಸೆ.29 ರಂದು ಪತ್ರ ಬರೆಯಲಾಗಿದೆ.

Raichur: ಅರಕೇರಾದಲ್ಲಿ ಅ.15ಕ್ಕೆ ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ

ಕೇಂದ್ರದ ತಪಾಸಣೆ ತಂಡವೂ ಈಗಾಗಲೇ ಗುರುತಿಸಲ್ಪಟ್ಟ ಹುಬ್ಬಳ್ಳಿ-ಧಾರವಾಡ ಸ್ಥಳಕ್ಕೆ ಡಿ.02 ರಂದು ಭೇಟಿ ನೀಡಿ, ಪರಿಶೀಲಿಸಿತ್ತು. ತದನಂತರ ಜಿಲ್ಲೆಯಲ್ಲಿ ಏಮ್ಸ್‌ ಮಾದರಿ ಸಂಸ್ಥೆಯನ್ನು ಮಂಜೂರಿ ಮಾಡುವಂತೆ ಹಿಂದಿನ ಮುಖ್ಯಮಂತ್ರಿ ಕರ್ನಾಟಕ ಸರ್ಕಾರದಿಂದ ಪ್ರಧಾನಮಂತ್ರಿಗಳಿಗೆ ಕಳೆದ 2021 ಮಾ.09 ರಂದು ಪತ್ರ ಬರೆದಿದ್ದಾರೆ. ಏಮ್ಸ್‌ ಸಂಸ್ಥೆ ಪ್ರಾರಂಭಿಸುವ ಯೋಜನೆಯೂ ಕೇಂದ್ರ ಸರ್ಕಾರದ್ದಾಗಿದ್ದರಿಂದ ಇದುವರೆಗೆ ಯಾವುದೇ ಸ್ಥಳದಲ್ಲಿ ಏಮ್ಸ್‌ ಸಂಸ್ಥೆ ಆರಂಭಿಸಿರುವುದಿಲ್ಲ ಎಂದು ತಿಳಿಸಿದೆ.

ಐಐಟಿ ಅನ್ಯಾಯವೇ ರಿಪೀಟ್‌?:

ಕೇಂದ್ರದ ಪ್ರತಿಷ್ಠಿತ ಸಂಸ್ಥೆಗಳನ್ನು ರಾಯಚೂರು ಜಿಲ್ಲೆ ಮಂಜೂರು ಮಾಡುವುದಕ್ಕೆ ಅದ್ಯಾಕೋ ರಾಜ್ಯ ಸರ್ಕಾರಕ್ಕೆ ಅದರಲ್ಲಿಯೂ ಬಿಜೆಪಿಗೆ ಸುತರಾಮ್‌ ಮನಸ್ಸಿಲ್ಲ ಎನ್ನುವುದು ಪದೇ ಪದೆ ಬಹಿರಂಗವಾಗುತ್ತಿದೆ. ಐಐಟಿ ವಿಷಯದಲ್ಲಿ ರಾಜಕೀಯ ಮಾಡಿ, ಪ್ರಭಾವ ಬಳಿಸಿ ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದವರೇ ಇದೀಗ ಏಮ್ಸ್‌ನಲ್ಲೂ ಮೋಸ ಮಾಡಿದ್ದಾರೆ ಎನ್ನುವುದಕ್ಕೆ ಸಚಿವ ಡಾ. ಸುಧಾರ್‌ ನೀಡಿದ ಉತ್ತರದ ಪತ್ರವು ಸಾಕ್ಷಿಯಾಗಿ ನಿಂತಿದ್ದು, ಯಾವುದೇ ಜಿಲ್ಲೆಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕಳೆದ ಆ.27 ರಂದು ಹೇಳಿಕೆ ನೀಡಿದ್ದರು. ಇದೀಗ ನಾಡಪ್ರಭುಗಳೇ ಸುಳ್ಳು ನುಡಿದು ಹೋಗಿದ್ದಾರೆಯೇ ಎನ್ನುವ ಬೇಸರವು ಜಿಲ್ಲೆ ಮಂದಿಯ ಮನದಲ್ಲಿ ಮನೆಮಾಡಿದೆ.

ಏಮ್ಸ್‌ ಕುರಿತು ಸಚಿವ ಡಾ.ಸುಧಾಕರ ನೀಡಿರುವ ಉತ್ತರದಲ್ಲಿ ಯಾವುದೇ ಸ್ಥಳದಲ್ಲಿ ಸಂಸ್ಥೆ ಆರಂಭಿಸಿರುವುದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಏಮ್ಸ್‌ನ್ನು ಜಿಲ್ಲೆಗೆ ತರುವುದೊಂದೇ ಗುರಿಯಾಗಿದ್ದು ಆ ನಿಟ್ಟಿನಲ್ಲಿ ನಿರಂತರ ಹೋರಾಟವನ್ನು ಮುಂದುವರೆಸಿಕೊಂಡು ಹೋಗಲಾಗುವುದು ಅಂತ ರಾಯಚೂರು ಏಮ್ಸ್‌ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ತಿಳಿಸಿದ್ದಾರೆ.