Earthquake : ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ
- ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ
- ಬೆಳ್ಳಂ ಬೆಳಗ್ಗೆ 3.15ರಲ್ಲಿ ಎರಡು ಬಾರಿ ಭೂಮಿ ಕಂಪಿಸಿತು
- ರಿಕ್ಟರ್ ಮಾನದಲ್ಲಿ 2.6 ತೀವ್ರತೆ ದಾಖಲು
- 3ನೇ ಬಾರಿ ಭೂ ಕಂಪನಕ್ಕೆ ನಡುಗಿದ ಶೆಟ್ಟಿಗೆರೆ
- ಸಮುದಾಯಕ್ಕೆ ಅಪಾಯವಿಲ್ಲ ಎಂದ ವಿಪತ್ತು ನಿರ್ವಹಣಾ ಕೇಂದ್ರ
ಚಿಕ್ಕಬಳ್ಳಾಪುರ (ಜ.06) : ಜಿಲ್ಲೆಯ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನಲ್ಲಿ ಮತ್ತೆ ಭೂ ಕಂಪಿಸಿದ ಅನುಭವ ಆಗಿದ್ದು ಮಂಡಿಲ್ಲು ಹೋಬಳಿಯ ಶೆಟ್ಟಿ ಗೆರೆ ಗ್ರಾಮದಲ್ಲಿ ಬುಧವಾರ ಮುಂಜಾನೆ ಪದೇ ಪದೇ ಎರಡು ಬಾರಿ ಭೂಮಿ ನಡುಗಿದ್ದಕ್ಕೆ (Earthquake) ಇಡೀ ಊರಿಗೆ ಊರೇ ಬೆಚ್ಚಿ ಬಿದ್ದು ಮನೆಗಳಿಂದ ಹೊರ ಬಂದು ಜನ ದಿಕ್ಕಪಾಲಾಗಿ ಓಡಿದ್ದಾರೆ.
ರಿಕ್ಟರ್ ಮಾಪನದಲ್ಲಿ ಭೂ ಕಂಪನದ ತೀವ್ರತೆಯು ಬರೋಬರಿ 2.6 ರಷ್ಟು ದಾಖಲಾಗಿದೆಯೆಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಭೂ ಕಂಪನದ (Earthquake) ತೀವ್ರತೆಗೆ ಶೆಟ್ಟಿಗೆರೆಯಲ್ಲಿ ಸುಮಾರು ಆರೇಳು ಮನೆಗಳಿಗೆ ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು ಗ್ರಾಮಸ್ಥರನ್ನು (Villagers) ಚಿಂತೆಗೀಡು ಮಾಡಿದೆ. ಉಳಿದಂತೆ ಅದೃಷ್ಠ ವಶಾತ್ ಯಾವುದೇ ರೀತಿ ಸಾವು, ನೋವು ಸಂಭವಿಸಿಲ್ಲ.
ಎಲ್ಲರೂ ನಿದ್ದೆಯಲ್ಲಿದ್ದರು:
ಭೂ ಕಂಪನ ಸದ್ದು ಜೋರಾಗಿಯೆ ಕೇಳಿ ಬಂದಾಗ ಇಡೀ ಶೆಟ್ಟಿಗೆರೆ ಗ್ರಾಮವೇ ನಿದ್ದೆಗೆ ಜಾರಿದ್ದರು. ನಿಗೂಢ ಶಬ್ದ ಜೋರಾಗಿ ಕೇಳಿ ಬರುತ್ತಿದ್ದಂತೆ ಗಾಢ ನಿದ್ದೆಯಲ್ಲಿದ್ದವರು ಗಾಬರಿಯಿಂದ ಎದ್ದು ಬಿದ್ದು ಅಂಗೈಯಲ್ಲಿ ಜೀವ ಹಿಡಿದು ಮನೆಗಳಿಂದ (House) ಹೊರಗೆ ಚೀರಾಡಿಕೊಂಡು ಬಂದಿದ್ದಾರೆ. ಕೆಲ ಕ್ಷಣಗಳ ಕಾಲ ಭೂಮಿ ನಡುಗಿದೆ. ಅಷ್ಟರಲ್ಲಿಯೆ ನಾವು ಮನೆಯಿಂದ ಹೊರಗೆ ಬಂದವು. ಮನೆಯಲ್ಲಿದ್ದ ಎಲ್ಲಾ ಪಾತ್ರೆ ಸಾಮಾನು, ದೇವರ ಪೋಟೋಗಳು ಅಲುಗಾಡಿ ಕೆಳಗೆ ಬಿದ್ದಿವೆಯೆಂದು ಗ್ರಾಮಸ್ಥರು ಮಾಧ್ಯಮಗಳಿಗೆ (Media) ಹೇಳಿಕೆ ನೀಡಿದ್ದಾರೆ.
ಅಪಾಯಕಾರಿ ಅಲ್ಲ : ಇನ್ನೂ ಶೆಟ್ಟಿಗೆರೆ ಗ್ರಾಮದಲ್ಲಿ ಸಂಭವಿಸಿರುವ ಭೂ ಕಂಪನ (Earthquake) ಸಮುದಾಯಕ್ಕೆ ಯಾವುದೇ ರೀತಿ ಅಪಾಯವಲ್ಲ. ಇದರಿಂದ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿವರ್ವಹಣಾ (KSNDMC) ಕೇಂದ್ರದ ಭೂ ವಿಜ್ಞಾನಿಗಳು ಅಭಯ ನೀಡಿದ್ದಾರೆ. ರಿಕ್ಟರ್ ಮಾಪನದಲ್ಲಿ 2.6 ದಾಖಲಾಗಿದೆ. ಆದರೂ ಜಿಲ್ಲೆಯ ಭೂಮಿಯ ಶಿಲಪದರ ಗಟ್ಟಿಯಾಗಿದೆ. ಭೂ ಕಂಪನ ಸಾಧ್ಯತೆ ತೀರಾ ಕಡಿಮೆ. ಇತ್ತೀಚೆಗೆ ಬಿದ್ದ ಮಳೆಯಿಂದ ಭೂ ಗರ್ಭದೊಳಗೆ ಗಾಳಿ ಸ್ಫೋಟ ಅಷ್ಟೇ ಎಂದು ಭೂ ವಿಜ್ಞಾನಿಗಳು (Scientist) ಹೇಳುತ್ತಿದ್ದಾರೆ.
3ನೇ ಬಾರಿ ಈ ಗ್ರಾಮದಲ್ಲಿ ಭೂ ಕಂಪನ ಸದ್ದು!
ಈ ಹಿಂದೆ ಡಿಸೆಂಬರ್ 22, 23 ರಂದು ಸತತ ಎರಡು ದಿನಗಳ ಕಾಲವು ಇದೇ ಗ್ರಾಮದಲ್ಲಿ ಭೂ ಕಂಪನದ ಸುದ್ದು ಭಾರೀ ಪ್ರಮಾಣದಲ್ಲಿ ಕೇಳಿ ಬಂದಿತ್ತು. ಈ ಹಿಂದೆ ಮದ್ಯಾಹ್ನದ ಅವಧಿಯಲ್ಲಿ ಹಾಗೂ ಬೆಳಗಿನ ಅವಧಿಯಲ್ಲಿ ಭೂ ಕಂಪನ ಆಗಿ ಶಾಲಾ ಮಕ್ಕಳು ಓಡಿ ಹೋಗಿದ್ದರು. ಇದೀಗ ಇದೇ ಗ್ರಾಮದಲ್ಲಿ ಮೂರನೇ ಬಾರಿ ಭೂಮಿ ನಡುಗಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಗ್ರಾಮದಲ್ಲಿ ಬೆಳಗಿನ ಜಾವ ಸುಮಾರು 3:16 ನಿಮಿಷದ ಅವಧಿಯಲ್ಲಿ ಭೂ ಕಂಪಿಸಿರುವುದು ಕಂಡು ಬಂದಿದೆ. ಶೆಟ್ಟಿಗೆಗೆ ಗ್ರಾಮ ಗ್ರಾಪಂ ಕೇಂದ್ರ ಅಡ್ಡಗಲ್‌ಗೆ ಸುಮಾರು 1.5 ಕಿಮೀ ದೂರದಲ್ಲಿದ್ದು ಶೆಟ್ಟಿಗೆರೆ ಗ್ರಾಮದಲ್ಲಿ ಸುಮಾರು 12 ಕಿಮೀ ಅಳದ ಭೂ ಗರ್ಭದೊಳಗೆ ಭೂ ಕಂಪನ ಆಗಿರುವುದು ಭೂ ಕಂಪನ ಮಾಪನದಲ್ಲಿ ಕೇಂದ್ರೀಕೃತವಾಗಿದೆ.
- ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ
- ಬೆಳ್ಳಂ ಬೆಳಗ್ಗೆ 3.15ರಲ್ಲಿ ಎರಡು ಬಾರಿ ಭೂಮಿ ಕಂಪಿಸಿತು
- ರಿಕ್ಟರ್ ಮಾನದಲ್ಲಿ 2.6 ತೀವ್ರತೆ ದಾಖಲು
- 3ನೇ ಬಾರಿ ಭೂ ಕಂಪನಕ್ಕೆ ನಡುಗಿದ ಶೆಟ್ಟಿಗೆರೆ
- ಸಮುದಾಯಕ್ಕೆ ಅಪಾಯವಿಲ್ಲ ಎಂದ ವಿಪತ್ತು ನಿರ್ವಹಣಾ ಕೇಂದ್ರ