ಗದಗ ಜಿಲ್ಲೆಯಲ್ಲಿ ಮತ್ತೆ ಗೊಬ್ಬರದ ಕೃತಕ ಅಭಾವ: ಆತಂಕದಲ್ಲಿ ಅನ್ನದಾತ..!
* ಕೃಷಿ ಇಲಾಖೆ ಹೇಳುವಷ್ಟು ಗೊಬ್ಬರ ವಾಸ್ತವದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ
* ಗದಗ ಜಿಲ್ಲೆಯಾದ್ಯಂತ ಡಿಎಪಿ ಸೇರಿದಂತೆ ವಿವಿಧ ಗೊಬ್ಬರಗಳ ತೀವ್ರ ಕೊರತೆ
* 2 ಲಕ್ಷ 73 ಸಾವಿರ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ
ಶಿವಕುಮಾರ ಕುಷ್ಟಗಿ
ಗದಗ(ಅ.06): ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಗೆ ಮಳೆ(Rain) ಉತ್ತಮ ವೇದಿಕೆ ಕಲ್ಪಿಸಿದೆ, ಆದರೆ ಹಿಂಗಾರು ಬಿತ್ತನೆಗೆ ಬೇಕಾಗುವ ರಸಗೊಬ್ಬರದ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಈ ಬಗ್ಗೆ ಕೃಷಿ ಇಲಾಖೆ ಹೇಳುವಷ್ಟು ಗೊಬ್ಬರ ವಾಸ್ತವದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ, ಇಲಾಖೆ ನೀಡುವ ಮಾಹಿತಿ ಆಧಾರದಲ್ಲಿ ಮಾರುಕಟ್ಟೆಗೆ ರಸಗೊಬ್ಬರ(Fertilizer) ತರಲು ಹೋದರೆ ಗೊಬ್ಬರ ಅಂಗಡಿಯವರು ಮಾತ್ರ ಸ್ಟಾಕ್ ಇಲ್ಲ ಎನ್ನುವ ಮಾಹಿತಿ ನೀಡುತ್ತಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ.
ಕೃಷಿ ಇಲಾಖೆ ಏನು ಹೇಳುತ್ತದೆ?
ಕೃಷಿ ಇಲಾಖೆಯ ಮಾಹಿತಿ ಆಧಾರದಲ್ಲಿ 2021-22 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಜೋಳ, ಗೋವಿನ ಜೋಳ, ಗೋಧಿ, ದ್ವಿದಳ ಧಾನ್ಯಗಳಾದ ಕಡಲೆ, ಹುರುಳಿ, ಸೂರ್ಯಕಾಂತಿ, ಕುಸುಬೆ, ಸುಧಾರಿತ ಹತ್ತಿ, ಕಬ್ಬು ಸೇರಿ ನೀರಾವರಿಯಲ್ಲಿ 31100, ಖುಷ್ಕಿ 242500 ಸೇರಿ ಒಟ್ಟು ಜಿಲ್ಲೆಯಲ್ಲಿ 273600 ಹೆಕ್ಟೆರ್ ಬಿತ್ತನೆ ಗುರಿ ಇದೆ, ಜೋಳ, ಗೋಧಿ, ಕಡಲೆ, ಕುಸುಬೆ, ಸೂರ್ಯಕಾಂತಿ, ಶೇಂಗಾ ಬೀಜಗಳನ್ನು 121175 ಕ್ವಿಂ. ಬೇಡಿಕೆಯಿದ್ದು, ಈಗಾಗಲೇ 25491 ಕ್ವಿಂ. ಬಿತ್ತನೆ ಬೀಗ ಹಂಚಿಕೆಯಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಯೂರಿಯಾ(Urea) 23105 ಮೆ.ಟನ್ ಇದ್ದು ಅದರಲ್ಲಿ 21488 ಮೆ.ಟನ್ ವಿತರಣೆಯಾಗಿ 1617 ಮೆ.ಟನ್ ಉಳಿದಿದೆ, ಡಿಎಪಿ 11422 ಮೆ.ಟನ್. ದಾಸ್ತಾನು ಇದ್ದು, 10737 ಮೆ.ಟನ್ ವಿತರಣೆಯಾಗಿ 685 ಮೆ.ಟನ್ ಉಳಿದಿದೆ. ಎಮ್‌ಪಿಓ ಗೊಬ್ಬರವು 5002 ಮೆ.ಟನ್ ದಾಸ್ತಾನು ಇದ್ದು, 4290 ಮೆ.ಟನ್ ವಿತರಣೆಯಾಗಿ 712 ಮೆ.ಟನ್ ಉಳಿದಿದೆ, ಕಾಂಪ್ಲೆಕ್ಸ್ನಲ್ಲಿ 22633 ಮೆ.ಟನ್ ದಾಸ್ತಾನು ಇದ್ದು, 18559 ಮೆ.ಟನ್ ವಿತರಣೆಯಾಗಿ 4077 ಮೆ.ಟನ್ ಉಳಿದಿದೆ ಎಂದು ಸರ್ಕಾರಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳು ಹಿಂಗಾರು ಬಿತ್ತನೆ ಪೂರ್ವದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.
ಗದಗ: ಸಮರ್ಪಕ ಹನಿ ನೀರಾವರಿಗೆ ಅಗತ್ಯ ಕ್ರಮ
ಹೆಚ್ಚಿನ ಬೇಡಿಕೆ ಇರುವ ಡಿಎಪಿ ಕಡಿಮೆ ದಾಸ್ತಾನು.
ಗದಗ ಜಿಲ್ಲೆಯ ರೈತರು ಹಿಂಗಾರು ಹಂಗಾಮಿನ ಬಿತ್ತನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದು ಡಿಎಪಿ(DAP) ಮತ್ತು ಕಾಂಪ್ಲೆಕ್ಸ್ ಗೊಬ್ಬರವನ್ನು ಆದರೆ ಕೃಷಿ ಇಲಾಖೆ ಮಾಹಿತಿ ಆಧಾರದಲ್ಲಿ ಉಳಿದಿರುವುದು ಒಟ್ಟು 7091 ಮೆಟ್ರಿಕ್ ಟನ್ ಗೊಬ್ಬರ ಅದರಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ಡಿಎಪಿ ದಾಸ್ತಾನಿರುವುದು ಕೇವಲ 685 ಮೆಟ್ರಿಕ್ ಟನ್ ಮಾತ್ರ, ಅದು ಈಗಾಗಲೇ ಖಾಲಿಯಾಗಿದ್ದು ರೈತರು ನಿತ್ಯವೂ ರಸಗೊಬ್ಬರ ಅಂಗಡಿಗಳಿಗೆ ನಿತ್ಯವೂ ಅಲೆದರೂ ಡಿಎಪಿ ಮಾತ್ರ ಸಿಗುತ್ತಿಲ್ಲ. ಅತೀ ಹೆಚ್ಚು ಬೇಡಿಕೆ ಇರುವ ಗೊಬ್ಬರವನ್ನೇ ಬೇಡಿಕೆ ಆಧಾರದಲ್ಲಿ ತರಿಸಿಟ್ಟುಕೊಳ್ಳದ ಕೃಷಿ ಇಲಾಖೆಯ ನಡೆಯಿಂದ ರೈತರಿಗೆ ತೀವ್ರ ತೊಂದರೆಯಾಗಿದೆ.
ಪ್ರಸಕ್ತ ಸಾಲಿನಲ್ಲಿಯೂ ಉತ್ತಮ ಮಳೆಯಾಗಿತ್ತು, ಈ ಬಾರಿಯ ಹಿಂಗಾರು ಹಂಗಾಮಿನಲ್ಲಿಯೂ ಅತ್ಯುತ್ತಮವಾದ ರೀತಿಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ 2 ಲಕ್ಷ 73 ಸಾವಿರ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಹೇಳುತ್ತದೆ, ಇಷ್ಟೊಂದು ಬಿತ್ತನೆ ಕ್ಷೇತ್ರಕ್ಕೆ ಬೇಕಾಗುವಷ್ಟು ಗೊಬ್ಬರ ದಾಸ್ತಾನಿಗೆ ವ್ಯವಸ್ಥೆ ಮಾಡಬೇಕಿತ್ತು. ಆದರೆ ಅಂತಾ ಪ್ರಯತ್ನಗಳು ನಡೆದಿಲ್ಲ ಎನ್ನುವುದು ಈಗಿನ ಸ್ಥಿತಿ ನೋಡಿದರೆ ಸ್ಪಷ್ಟವಾಗುತ್ತದೆ.
ಒಂದೆಡೆ ಕೃಷಿ ಇಲಾಖೆ(Agriculture Department) ಜಿಲ್ಲೆಯಲ್ಲಿ ಸಾಕಷ್ಟು ಗೊಬ್ಬರ ದಾಸ್ತಾನಿದೆ ಎಂದು ಹೇಳಿಕೆ ನೀಡುತ್ತಿದೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ರೈತರಿಗೆ ಮಾತ್ರ ಡಿಎಪಿ ಸಿಗುತ್ತಿಲ್ಲ, ಇದರಿಂದಲೇ ಸ್ಪಷ್ಟವಾಗುತ್ತಿದ್ದು, ಜಿಲ್ಲೆಯಲ್ಲಿ ಮತ್ತೆ ರಸಗೊಬ್ಬರದ ಕೃತಕ ಅಭಾವ ಸೃಷ್ಠಿಯಾಗುತ್ತಿದ್ದು, ಯಾವುದೇ ರಸಗೊಬ್ಬರ ಮಾರಾಟಗಾರರ ಅಂಗಡಿಗಳಿಗೆ ತೆರಳಿದರೆ ಗೊಬ್ಬರವೇ ಇಲ್ಲ ಎನ್ನುತ್ತಾರೆ, ಹಾಗಾದರೆ ಬಂದ ಗೊಬ್ಬರ ಎಲ್ಲಿ ಹೋಯಿತು, ಅಥವಾ ಕೃಷಿ ಇಲಾಖೆ ರೈತರನ್ನು ದಾರಿ ತಪ್ಪಿಸುತ್ತಿದೆಯೋ, ನಿಜವಾಗಿಯೂ ಕೃತಕ ಅಭಾವ ಸೃಷ್ಟಿ ಸಂಚು ನಡೆದಿದೆಯೋ ಈ ಕುರಿತು ಸಮಗ್ರ ತನಿಖೆ ನಡೆಸಬೇಕಿದೆ.
ಜಿಲ್ಲೆಯಾದ್ಯಂತ ಡಿಎಪಿ ಸೇರಿದಂತೆ ವಿವಿಧ ಗೊಬ್ಬರಗಳ ಕೊರತೆ ತೀವ್ರವಾಗಿದೆ, ಕೃಷಿ ಇಲಾಖೆಯವರು ಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎನ್ನುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ರೈತರಿಗೆ ಒಂದು ಚೀಲ ಗೊಬ್ಬರ ಸಿಗುತ್ತಿಲ್ಲ, ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಸ್ಪಷ್ಟಣೆ ನೀಡಬೇಕು, ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ರೈತರಿಗೆ ಗೊಬ್ಬರ ಅಭಾವವಾದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಸಜ್ಜನರ ತಿಳಿಸಿದ್ದಾರೆ.