Asianet Suvarna News Asianet Suvarna News

ಗದಗ: ಸಮರ್ಪಕ ಹನಿ ನೀರಾವರಿಗೆ ಅಗತ್ಯ ಕ್ರಮ

*  ಹನಿ ನೀರಾವರಿ ತಂದ ಸಂಕಟ
*  ಸಧ್ಯ ಪ್ರಾಯೋಗಿಕವಾಗಿ ನಡೆಯುತ್ತಿದೆ, ಸಮರ್ಪಕ ಹನಿ ನೀರಾವರಿ ಅಗತ್ಯ ಕ್ರಮ
*  15 ನೀರು ಬಳಕೆದಾರ ಸಂಘ ರಚನೆ
 

Necessary Action for Adequate Drip Irrigation in Gadag  grg
Author
Bengaluru, First Published Oct 3, 2021, 10:31 AM IST

ಶಿವಕುಮಾರ ಕುಷ್ಟಗಿ

ಗದಗ(ಅ.03):  ಬೃಹತ್ ಹನಿ ನೀರಾವರಿ(Drip Irrigation) ಮಂಜೂರಿ ಪಡೆದ ದೇಶದ ಮೊದಲ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮೂಲಕ ಗದಗ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನ ಮಾಡುತ್ತಿರುವ ಮೇಘಾ ಇಂಜನೀಯರಿಂಗ್ಸ್ ಮತ್ತು ಇಸ್ರೈಲ್ ಮೂಲದ ನೆಟಾಫಿಮ್ ಕಂಪನಿಯ ಅಧಿಕಾರಿಗಳು ಯೋಜನೆ ರೈತರಿಗೆ ತಲುಪಿಸುವಲ್ಲಿ ವಿಶೇಷ ಗಮನ ನೀಡುತ್ತಿದ್ದು ಇನ್ನು ಹೆಚ್ಚಿನ ಆದ್ಯತೆ ಮೇರೆಗೆ ಕಾರ್ಯ ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ. 

ಈ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಆಗಿರುವ ತೊಡಕು ಸೇರಿದಂತೆ ಅಗತ್ಯ ಮಾಹಿತಿಯುಳ್ಳ 8 ಸರಣಿ ವರದಿಗಳನ್ನು ಕನ್ನಡಪ್ರಭ ಪ್ರಕಟಿಸಿದ ಬೆನ್ನಲ್ಲಿಯೇ ಎಚ್ಚತ್ತ ಅಧಿಕಾರಿಗಳು ಯೋಜನೆ ರೂಪರೇಷೆ, ಆಗಿರುವ ಕಾಮಗಾರಿಯ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ರೈತರು ಸೇರಿದಂತೆ ರೈತ ಮುಖಂಡರ ಮುಂದೆ ಹಂಚಿಕೊಂಡರು.

ಪ್ರಾಯೋಗಿಕವಾಗಿ ಅನುಷ್ಠಾನ ನಡೆಯುತ್ತಿದೆ

ಈ ಯೋಜನೆ ವ್ಯಾಪ್ತಿಯಲ್ಲಿ ಒಟ್ಟು 10080 ಹೆಕ್ಟೇರ್ ಪ್ರದೇಶವನ್ನು ಹನಿ ನೀರಾವರಿ ಸೌಲಭ್ಯಕ್ಕೆ ಒಳಪಡಿಸಲಾಗುತ್ತಿದ್ದು, ಅದರಲ್ಲಿ 9750 ಹೆಕ್ಟೇರ್ ಹೊಲಗಳಿಗೆ ಪೈಪ್ ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 6709 ರೈತರ ಇದರ ಫಲಾನುಭವಿಗಳಾಗಿದ್ದು ಅವರಲ್ಲಿ 6201 ರೈತರ ಜಮೀನುಗಳಲ್ಲಿ ಈಗಾಗಲೇ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇನ್ನುಳಿದ ಕೆಲವಾರು ರೈತರ ಜಮೀನು ಮತ್ತು ಆರ್‌ಟಿಸಿಗಳಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳಿಂದ ಮಾತ್ರ ಬಾಕಿ ಉಳಿದಿವೆ, ಸಧ್ಯ ನೀರಾವರಿ ಸೌಲಭ್ಯ ನೀಡಿರುವುದು ಪ್ರಾಯೋಗಿಕ ಹಂತದಲ್ಲಿದ್ದು ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಾದಲ್ಲಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ನೀರು ಪೂರೈಕೆಯಾಗಲಿದೆ. 

ಗದಗ: ಹನಿ ನೀರಾವರಿ ಪೈಪ್‌ಗಳೀಗ ರೈತರ ಹೊಲಕ್ಕೆ ಬೇಲಿ..!

ನಂಬಿಕೆ ಇರಲಿ

ನೀರಾವರಿ ಇಲಾಖೆ ನೂರಾರು ಕೋಟಿ ಖರ್ಚು ಮಾಡಿ ಮಹತ್ತರವಾದ ಯೋಜನೆ ಜಾರಿ ಮಾಡಲಾಗುತ್ತಿದೆ, ಒಟ್ಟು 17 ಜೋನ್ ಗಳನ್ನಾಗಿ ವಿಂಗಡಿಸಿ ಆ ಮೂಲಕ ರೈತರ ಜಮೀನುಗಳಿಗೆ ತಂತ್ರಜ್ಞಾನ ಆಧಾರದಲ್ಲಿ ನೀರು ಪೂರೈಕೆ ಮಾಡಲಾಗುವುದು. ಒಟ್ಟು 1000 ಸಾವಿರ ಜನರಿಗೆ ಉದ್ಯೋಗ ಸೃಷ್ಠಿಯಾಗಿದೆ. ಈ ಪ್ರದೇಶದಲ್ಲಿನ ಕೊಳವೆಬಾವಿಗಳಲ್ಲಿನ ನೀರು ಸಾಕಷ್ಟು ಗಡಸಾಗಿದ್ದು ರೈತರೇ ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಕೊಳವೆಬಾವಿ ನೀರಾವರಿ ನಿಲ್ಲಿಸಿ ಒಣಬೇಸಾಯ ಪದ್ದತಿ ಅಳವಡಿಸಿಕೊಳ್ಳುತ್ತಾರೆ. ನಮ್ಮ ಯೋಜನೆ ವ್ಯಾಪ್ತಿಯಲ್ಲಿ ಒಟ್ಟು 560 ಕೊಳವೆಬಾವಿಗಳಿದ್ದು ಅವುಗಳಲ್ಲಿ ಕಳೆದ ಸಾಲಿನಿಂದ ನಾವು ಹನಿ ನೀರಾವರಿ ಸೌಜನ ಲಭ್ಯ ಪ್ರಾರಂಭಿಸಿದ ನಂತರ 320 ಜನರು ಮಾತ್ರ ಕೊಳವೆ ಬಾವಿಯನ್ನು ಬಳಸುತ್ತಿದ್ದು ಇನ್ನುಳಿದ 240 ಜನರು ತಮ್ಮ ಕೊಳವೆಬಾವಿಗಳನ್ನು ಸ್ಥಗಿತಗೊಳಿಸಿದ್ದಾರೆ. 

Necessary Action for Adequate Drip Irrigation in Gadag  grg

15 ನೀರು ಬಳಕೆದಾರ ಸಂಘ ರಚನೆ

ಯೋಜನೆ ವ್ಯಾಪ್ತಿಯ ಒಟ್ಟು 12 ಹಳ್ಳಿಗಳಿದ್ದು, ಅವುಗಳಲ್ಲಿ ಒಟ್ಟು 15 ನೀರು ಬಳಕೆದಾರರ ಸಂಘಗಳನ್ನು ರಚಿಸಿದ್ದು ಪ್ರತಿ ಸಂಘದಲ್ಲಿ ಕನಿಷ್ಠ 100 ಸದಸ್ಯರನ್ನು ಒಳಗೊಂಡಂತೆ ರಚಿತವಾಗಿದ್ದು ಅವರಿಗೆ ಹನಿ ನೀರಾವರಿ ಯೋಜನೆಯಿಂದ ಆಗುವ ಲಾಭಗಳು, ಕಡಿಮೆ ನೀರಿನಲ್ಲಿ ಹೇಗೆ ಉತ್ತಮ ಬೆಳೆಗಳನ್ನು ಬೆಳೆಯಲು ಸಾಧ್ಯ ಎನ್ನುವ ಕುರಿತು ಧಾರವಾಡ ವಾಲ್ಮಿ ಹಾಗೂ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ವಿಶೇಷ ತರಬೇತಿಯನ್ನು ನೀಡಲು ಪ್ರಾರಂಭಿಸಲಾಗಿದೆ. ಆ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ವಿಶೇಷ ಗಮನ ನೀಡಲಾಗಿದೆ.

ಈ ಯೋಜನೆಯ ಬಗ್ಗೆ ಕೆಲ ಗ್ರಾಮಗಳ ರೈತರಲ್ಲಿ ಹನಿ ನೀರಾವರಿ ಯೋಜನೆ ಬಗ್ಗೆ ತಪ್ಪು ಕಲ್ಪನೆ ಮೂಡಿಸಲಾಗಿದೆ. ಈಗಾಗಲೇ ಕಂಪನಿ ಯೋಜನೆ ಪೂರ್ಣಗೊಳಿಸಿದೆ, ಸಧ್ಯದಲ್ಲಿಯೇ ಅವರು ಇಲ್ಲಿಂದ ಹೋಗುತ್ತಾರೆ. ಇದೊಂದು ವಿಫಲ ಯೋಜನೆ ಎಂದು ಬಿಂಬಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದರೆ ಇದಕ್ಕೆ ಸತ್ಯಕ್ಕೆ ದೂರವಾದದ್ದು, ಮುಂದಿನ ನಾಲ್ಕು ವರ್ಷಗಳ ಕಾಲ ಕಂಪನಿ ಇಲ್ಲಿಯೇ ಇದ್ದು ರೈತರಿಗೆ ನಿರಂತರ ಮಾರ್ಗದರ್ಶನ ಮಾಡುವುದಲ್ಲದೇ ಯಶಸ್ವಿ ನೀರಾವರಿ ಯೋಜನೆಯನ್ನಾಗಿ ಪರಿವರ್ತಿಸಾಗುವುದು, ರೈತರು ಯಾರದೋ ಮಾತಿಗೆ ಕಿವಿಗೊಡದೇ ಯೋಜನೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳು ತೊಂದರೆ, ತೊಡಕು ಇದ್ದರೆ ಅದಕ್ಕಾಗಿ ಟೋಲ್ ಪ್ರೀ ನಂಬರ್ ಸೇವೆಯನ್ನು ಪ್ರಾರಂಭಿಸಲಾಗಿದೆ. ದಯವಿಟ್ಟು ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆಯಬೇಕು, ಏನೇ ಸಮಸ್ಯೆಗಳಿದ್ದರೂ ನೇರವಾಗಿ ಕಂಪನಿಯೊಂದಿಗೆ ಚರ್ಚಿಸಿ ಪರಿಹಾರ ಮಾಡಿಕೊಳ್ಳಬೇಕು, ಯಾವುದಕ್ಕೂ ಆತಂಕ ಪಡಬೇಡಿ ಅಂತ ಮೇಘಾ ಹಾಗೂ ನೆಟಾಫಿಮ್ ಕಂಪನಿಯ ಹಿರಿಯ ಅಧಿಕಾರಿಗಳಾದ ಮೈಲ್ ಸ್ವಾಮಿ, ಗಿರೀಶ ದೇಶಪಾಂಡೆ ತಿಳಿಸಿದ್ದಾರೆ. 

ಯೋಜನೆ ಪರಿಶೀಲನೆ ಕುರಿತು ಆಗಾಗ್ಗೆ ಪರಿಶೀಲನೆ ನಡೆಸಲಾಗಿದೆ, ಆಗಿರುವ ಲೋಪಗಳ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ರೈತರಿಗೆ(Farmers) ಸಮರ್ಪಕವಾಗಿ ನೀರು ಪೂರೈಸುವಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಹೇಳಿದ್ದಾರೆ. 
 

Follow Us:
Download App:
  • android
  • ios