ಬೆಂಗಳೂರು(ನ.28): ರಾಜ್ಯದಲ್ಲಿ ಒಂದು ಕಡೆ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದರೆ, ಮತ್ತೊಂದು ಕಡೆ ಸೋಂಕಿನಿಂದ ಗುಣಮುಖರಾದವರಿಗೆ ಪುನಃ ಸೋಂಕು ಕಾಣಿಸಿಕೊಳ್ಳುವ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 6ರಂದು ರಾಜ್ಯದಲ್ಲಿ ಮೊದಲ ಸೋಂಕು ಮರುಕಳಿಸಿದ ಪ್ರಕರಣ ವರದಿಯಾಗಿತ್ತು. ಆ ಬಳಿಕ ಈವರೆಗೆ ಬೆಂಗಳೂರಿನಲ್ಲೇ ಇಂತಹ 35ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಇಡೀ ರಾಜ್ಯದಲ್ಲಿ ನೂರರ ಒಳಗೆ ಸೋಂಕು ಮರುಕಳಿಸಿರುವ ಪ್ರಕರಣಗಳಿವೆ ಎಂದು ರಾಜ್ಯ ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸೋಂಕು ಮರುಕಳಿಸಿರುವ ಪ್ರಕರಣಗಳು ತೀರಾ ವಿರಳವಾಗಿದೆ. ಒಟ್ಟು ಇಂತಹ ಎಷ್ಟುಪ್ರಕರಣಗಳಿವೆ ಎಂಬುದರ ಬಗ್ಗೆ ನಮ್ಮಲ್ಲಿ ಖಚಿತ ಮಾಹಿತಿಯಿಲ್ಲ. ಆದರೆ ನೂರರ ಒಳಗೆ ಇರಬಹುದು. ಸೋಂಕು ಮರುಕಳಿಸಿದ ಪ್ರಕರಣಗಳ ಬಗ್ಗೆ ನಮ್ಮ ವೈದ್ಯರು ಕೂಲಂಕಷವಾಗಿ ಅಧ್ಯಯನ ನಡೆಸುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಆಖ್ತರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎಲ್ಲಿಗೆ ಬಂತು ಕೊರೋನಾ? ಇಲ್ಲಿದೆ ಶುಕ್ರವಾರದ ಅಂಕಿ-ಅಂಶ..!

ವೈದ್ಯರು ಏನಂತಾರೆ?:

ವಿಕ್ಟೋರಿಯಾ ಅಸ್ಪತ್ರೆಯ ಕೋವಿಡ್‌ ವಾರ್ಡ್‌ನ ನೋಡಲ್‌ ಅಧಿಕಾರಿ, ಮೈಕ್ರೋಬಯಾಲಜಿಸ್ಟ್‌ ಡಾ. ಅಸೀಮಾ ಬಾನು ಪ್ರಕಾರ, ತಮ್ಮ ಬಳಿ ಈವರೆಗೆ ಸೋಂಕು ಮರುಕಳಿಸಿರುವ ಪ್ರಕರಣಗಳ ಬಂದಿಲ್ಲ. ಆದರೆ ಅನೇಕ ರೋಗಿಗಳು ಗುಣಮುಖರಾದ ಬಳಿಕವೂ ಅವರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್‌ ಬಂದಿರುವ ಉದಾಹರಣೆಗಳಿವೆ. ಮೇ ತಿಂಗಳಲ್ಲಿ ನಮ್ಮಲ್ಲಿ ಗುಣಮುಖರಾಗಿ ಹೋದವರು ನವೆಂಬರ್‌ನಲ್ಲಿ ಪ್ರತಿರೋಧ ಶಕ್ತಿಯ ಪರೀಕ್ಷೆ ನಡೆಸಿದಾಗ ಅವರಲ್ಲಿ ಪ್ರತಿರೋಧ ಇರುವುದು ಕಂಡುಬಂದಿತ್ತು. ಆದ್ದರಿಂದ ಕೋವಿಡ್‌ ರೋಗಿಗಳಲ್ಲಿ ಸೋಂಕು ಮರುಕಳಿಸಿದೆಯೇ ಅಥವಾ ಮುಂದುವರಿದಿದೆಯೇ ಎಂಬುದು ಪತ್ತೆ ಹಚ್ಚಬೇಕಾಗುತ್ತದೆ. ಅದೇ ರೀತಿ ಕೊರೋನಾ ವೈರಸ್‌ನ ಒಂದು ತಳಿಯಿಂದ ಕೋವಿಡ್‌ ಬಂದು ಹೋಗಿದ್ದವರಿಗೆ ಅದೇ ವೈರಸ್‌ನ ಇನ್ನೊಂದು ತಳಿಯಿಂದ ಮತ್ತೆ ಸೋಂಕು ಬರುವ ಸಂಭವವೂ ಇರುತ್ತದೆ’ ಎಂದು ಹೇಳುತ್ತಾರೆ.

ಲಕ್ಷಣ ಸಹಿತ, ಲಕ್ಷಣ ರಹಿತರು:

ಸೋಂಕು ಮರುಕಳಿಸಿದ ಕೆಲವು ಪ್ರಕರಣಗಳಲ್ಲಿ ಮೊದಲ ಬಾರಿ ಸೋಂಕು ಬಂದಾಗ ರೋಗ ಲಕ್ಷಣಗಳನ್ನು ಹೊಂದಿಲ್ಲದವರು ಎರಡನೇ ಬಾರಿ ಬಂದಾಗ ತೀವ್ರ ರೋಗ ಲಕ್ಷಣಗಳನ್ನು ಹೊಂದಿರುವುದು ಅಥವಾ ಮೊದಲ ಬಾರಿ ಬಂದಾಗ ರೋಗ ಲಕ್ಷಣಗಳು ಇದ್ದರೆ ಎರಡನೇ ಬಾರಿ ಬಂದಾಗ ಯಾವುದೇ ರೋಗ ಲಕ್ಷಣಗಳನ್ನು ಹೊಂದಿರಲಿಲ್ಲ ಎಂದು ಇಂತಹ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.

ನಿರೋಧಕ ಶಕ್ತಿ ಕ್ಷೀಣ ಕಾರಣ?

ಒಮ್ಮೆ ಕೋವಿಡ್‌ ಬಂದು ಹೋದವರಲ್ಲಿ ಮೂರು ತಿಂಗಳ ಕಾಲ ಜೀವ ನಿರೋಧಕ ಶಕ್ತಿ ಇರುತ್ತದೆ. ಆಮೇಲೆ ಜೀವ ನಿರೋಧಕತೆ ಕ್ಷೀಣವಾಗಬಹುದು. ಇಂತಹ ಸಂದರ್ಭದಲ್ಲಿ ಕೋವಿಡ್‌ ಮರುಕಳಿಸಬಹುದು ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅಭಿಪ್ರಾಯ ಪಡುತ್ತಾರೆ.

ಹಾಗೆಯೇ ನಮ್ಮಲ್ಲಿ ಕೋವಿಡ್‌ ಬಂದು ಗುಣಮುಖರಾದವರನ್ನು ಬಿಡುಗಡೆ ಮಾಡುವ ಮೊದಲು ಮತ್ತೆ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸುವ ಕ್ರಮವಿಲ್ಲ. ಆದ್ದರಿಂದ ಅನೇಕ ಪ್ರಕರಣಗಳು ಸೋಂಕಿನ ಮರುಕಳಿಕೆಯೇ ಅಥವಾ ಇದ್ದ ಸೋಂಕೇ ಮುಂದುವರಿದಿದೆಯೇ ಎಂದು ಹೇಳುವುದು ಕಷ್ಟ ಎಂದವರು ಹೇಳುತ್ತಾರೆ.

‘ಕೆಲವು ವ್ಯಕ್ತಿಗಳಲ್ಲಿ ಅಲ್ಪ ಕಾಲೀನ ರೋಗ ನಿರೋಧಕತೆ ಇರುತ್ತದೆ. ಅಂಥವರಲ್ಲಿ ತ್ವರಿತವಾಗಿ ಸೋಂಕು ಮರುಕಳಿಸುವ ಸಂಭವ ಇರುತ್ತದೆ. ಒಮ್ಮೆ ಸೋಂಕಿನಿಂದ ಗುಣಮುಖರಾದ ತಕ್ಷಣ ಮತ್ತೆ ಸೋಂಕು ಬರಲಾರದು ಎಂದು ಭಾವಿಸಬಾರದು. ಸೋಂಕು ಬಾರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳನ್ನು ಸದಾ ಪಾಲಿಸುತ್ತಿರಬೇಕು’ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ.