ಬಾಗಲಕೋಟೆ ಜಿಲ್ಲೆಗೆ ಮತ್ತೆ 100 ಕೋಟಿ ಬಿಡುಗಡೆ: ಸಿಎಂ
ಜಿಲ್ಲೆಯ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಈಗಾಗಲೇ 230 ಕೋಟಿ ಬಿಡುಗಡೆ ಮಾಡಲಾಗಿದ್ದು, ಮತ್ತೆ ತಕ್ಷಣವೇ 100 ಕೋಟಿ ಬಿಡುಗಡೆ ಮಾಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ| ಸದ್ಯ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಸೇರಿದಂತೆ ಅಗತ್ಯ ಕ್ರಮಗಳಿಗೆ ಸಾಕಷ್ಟು ಹಣ ಒದಗಿಸಿದ್ದು ಮತ್ತೆ ಬೆಳೆ ಪರಿಹಾರ, ಮನೆಗಳ ಹಾನಿಗೆ ಬೇಕಾದ ನೆರವು ಹಾಗೂ ಕಾಮಗಾರಿಗಳ ದುರಸ್ತಿಗೆ ಹಣ ಬಳಸಿಕೊಳ್ಳಲು 100 ಕೋಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ|
ಬಾಗಲಕೋಟೆ(ಅ.5): ಜಿಲ್ಲೆಯ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಈಗಾಗಲೇ 230 ಕೋಟಿ ಬಿಡುಗಡೆ ಮಾಡಲಾಗಿದ್ದು, ಮತ್ತೆ ತಕ್ಷಣವೇ 100 ಕೋಟಿ ಬಿಡುಗಡೆ ಮಾಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಜಿಲ್ಲೆಯ ಪ್ರವಾಹ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ಸದ್ಯ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಸೇರಿದಂತೆ ಅಗತ್ಯ ಕ್ರಮಗಳಿಗೆ ಸಾಕಷ್ಟು ಹಣ ಒದಗಿಸಿದ್ದು ಮತ್ತೆ ಬೆಳೆ ಪರಿಹಾರ, ಮನೆಗಳ ಹಾನಿಗೆ ಬೇಕಾದ ನೆರವು ಹಾಗೂ ಕಾಮಗಾರಿಗಳ ದುರಸ್ತಿಗೆ ಹಣ ಬಳಸಿಕೊಳ್ಳಲು 100 ಕೋಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲೆಯಲ್ಲಿ ಪ್ರವಾಹದಲ್ಲಿ ಹಾನಿಗೀಡಾದ ಮನೆಗಳ ಸಂಖ್ಯೆ ವಾಸ್ತವಿಕತೆಯಿಂದ ಕೂಡಿಲ್ಲ ಎಂಬ ಸತ್ಯ ನನ್ನ ಅರಿವಿಗೂ ಬಂದಿದೆ. ಅಧಿಕೃತ ಹಾನಿಗೀಡಾದ ಮನೆಗಳ ಸಂಖ್ಯೆ ಕೇವಲ 396 ಮಾತ್ರ ಎಂದು ಹೇಳಿರುವುದು ಒಪ್ಪಲು ಅಸಾಧ್ಯ. ಅದಕ್ಕಾಗಿ ಎ ಕೆಟಗರಿಯ ಮನೆಗಳನ್ನು ಮತ್ತೊಮ್ಮೆ ಸಮೀಕ್ಷೆ ನಡೆಸಿ ಕನಿಷ್ಠ 1 ಸಾವಿರ ಮನೆಗಳಿಗಾದರೂ .5 ಲಕ್ಷ ಪರಿಹಾರ ಧನ ಸಿಗುವ ಹಾಗೇ ಮಾಡಿ ಎಂದು ಸಲಹೆ ನೀಡಿದರು.
ಕಾಮಗಾರಿಗಳಿಗೆ ಗಡುವು:
ಪ್ರವಾಹದಲ್ಲಿ ಹೆಸ್ಕಾಂಗೆ ಸೇರಿದ ವಿದ್ಯುತ್ ಕಂಬಗಳು, ಟ್ರಾನ್ಸಪಾರ್ಮರ್ ಹಾಗೂ ಕಂಡಕ್ಟರ್‌ಗಳ ಹಾನಿಯಿಂದ ರೈತರ ಬದುಕು ತತ್ತರಿಸಿ ಹೋಗಿದ್ದು ಅದನ್ನು ದುರಸ್ತಿ ಮಾಡುವ ಕೆಲಸ ನಡೆದಿದೆಯಾದರೂ ಕಾಮಗಾರಿಯ ವೇಗ ಮತ್ತಷ್ಟುಹೆಚ್ಚಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಗಳು ಬರುವ 15 ದಿನಗೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಗಡುವು ನೀಡಿದರು.
ಸಭೆಯಲ್ಲಿ ನೆರೆ ಪರಿಹಾರದ ಹಾಗೂ ಸಂತ್ರಸ್ತರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲು ಜಿಲ್ಲೆಯ ಶಾಸಕ, ಸಂಸದರಿಗೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿಗಳು ಶಾಂತ ರೀತಿಯಿಂದಲೇ ಸಮಸ್ಯೆಗಳನ್ನು ಆಲಿಸಿದರು. ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ಅನುದಾನ ಬಿಡುಗಡೆಯ ವಿಳಂಬ ಹಾಗೂ ಬಿಡುಗಡೆಯಾದ ಅನುದಾನದ ಕಡಿತ ಕುರಿತು ಮಾತನಾಡಿದರು.
ಹುನಗುಂದ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಹಾಳಾಗಿರುವ ರಸ್ತೆಗಳ ಕುರಿತು ಮತ್ತು ಬಿಡುಗಡೆಯಾದ ಅನುದಾನದಲ್ಲಿನ ತಾರತಮ್ಯ ಮತ್ತು ಎತ್ತರ ಪ್ರದೇಶದಲ್ಲಿ ಮನೆ ಕಟ್ಟಿಕೊಡುವ ಶಾಶ್ವತ ಪರಿಹಾರದ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಬಾಗಲಕೋಟೆ ನಗರದ ನಡುಗಡ್ಡೆಯಾಗಿರುವ 853 ಮನೆಗಳ ಸ್ಥಳಾಂತರವಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ ಬೀಳಗಿ ಕ್ಷೇತ್ರದ 56 ಗ್ರಾಮಗಳು ಮುಳುಗಡೆಯಾಗಿದ್ದು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕೇಳಿಕೊಂಡರು. ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಸಂತ್ರಸ್ತರನ್ನು ಗುರುತಿಸುವಲ್ಲಿ ಅನ್ಯಾಯವಾಗಿದ್ದು ಮತ್ತೆ ಮರು ಸಮೀಕ್ಷೆ ಒತ್ತಾಯಿಸಿದರು. ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಯಾದವಾಡ ಸೇತುವೆಯ ನಿರ್ಮಾಣ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ನೇಕಾರ ಕುಟುಂಬಕ್ಕೆ 25 ಸಾವಿರ
ಬಾಗಲಕೋಟೆ ಜಿಲ್ಲೆಯಲ್ಲಿನ ಇತ್ತೀಚಿನ ಪ್ರವಾಹದಲ್ಲಿ ನೇಕಾರಿಕೆ ಉದ್ಯಮಕ್ಕೆ ಆಗಿರುವ ಹಾನಿಯನ್ನು ಗಂಭೀರವಾಗಿ ಪರಿಗಣಿಸಿದ ಯಡಿಯೂರಪ್ಪ ಹಾನಿಗೀಡಾದ ನೇಕಾರರ ಕುಟುಂಬಗಳಿಗೆ ತಲಾ 25 ಸಾವಿರ ಹಣವನ್ನು ನೀಡಲು ಸಭೆಯಲ್ಲಿ ಸೂಚಿಸಿದರಲ್ಲದೆ, ಪ್ರವಾಹದಲ್ಲಿ ಬದುಕು ಕಳೆದುಕೊಂಡು ಸಣ್ಣ ಪುಟ್ಟಉದೋಗ್ಯ ಮಾಡುತ್ತಿದ್ದವರು ಸಹ ಸಂತ್ರಸ್ತರಾಗಿ ಬೀದಿಗೆ ಬಂದಿದ್ದು ಅಂತಹವರನ್ನು ಸಹ ಗುರುತಿಸಿ ತಾತ್ಕಾಲಿಕ ಪರಿಹಾರವಾದ 10 ಸಾವಿರ ನೀಡಲು ಜಿಲ್ಲಾಧಿಕಾರಿಗೆ ಆದೇಶಿಸಿದರು.
ಮರು ಸಮೀಕ್ಷೆಗೆ ಸೂಚನೆ:
ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಶಾಸಕರು ಸದ್ಯ ಜಿಲ್ಲಾಡಳಿತ ನಡೆಸಿರುವ ಮನೆಗಳ ಹಾನಿ ವಿಷಯದಲ್ಲಿ ತಾರತಮ್ಯ ಮಾಡಲಾಗಿದೆ. ವಾಸ್ತವಿಕವಾಗಿ ವರದಿ ನೀಡಿಲ್ಲ ಎಂಬ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಬಿ.ಎಸ್.ಯಡಿಯೂರಪ್ಪ ಯಾವ ನಿಜವಾದ ಸಂತ್ರಸ್ತರಿಗೂ ಅನ್ಯಾಯವಾಗಲೂ ಅವಕಾಶ ಬೇಡ, ತಕ್ಷಣವೇ ಜಿಲ್ಲಾಡಳಿತ ಮರು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲು ಸೂಚಿಸಿದರು.