ಸಕಲೇಶಪುರ [ಜ.17]:  ವಿದ್ಯಾರ್ಥಿಯೊಬ್ಬ ‘ಪಕ್ಕೆಲುಬು’ ಪದವನ್ನು ಉಚ್ಚರಿಸಲು ಕಷ್ಟಪಡುವ ವಿಡಿಯೋ ವೈರಲ್‌ ವಿವಾದ ಮಾಸುವ ಮುನ್ನವೇ, ಇದೀಗ ವಿದ್ಯಾರ್ಥಿಯೊಬ್ಬಳು ಶಿಕ್ಷಕರು ಹೇಳಿಕೊಡುವ ‘ಪುಳಿಯೋಗರೆ’ ಪದ ಸರಿಯಾಗಿ ಉಚ್ಚರಿಸಲು ಆಗದೆ ನಗೆಪಾಟಿಲಿಗೆ ಗುರಿಯಾಗುವ ವಿಡಿಯೋ ವೈರಲ್‌ ಆಗಿದೆ.

ಸಕಲೇಶಪುರ ತಾಲೂಕಿನ ಕಬ್ಬಿನಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಶಾಲೆಯ 1ನೇ ತರಗತಿ ವಿದ್ಯಾರ್ಥಿನಿಗೆ ಪುಳಿಯೊಗರೆ ಎಂಬ ಪದವನ್ನು ಹಲವು ಬಾರಿ ದೈಹಿಕ ಶಿಕ್ಷಕ ನಿರ್ವಾಣಪ್ಪ ಎಂಬುವರು ಹೇಳಿಸಿದ್ದಾರೆ. ಆದರೆ, ಆಕೆ ಅದನ್ನು ಸ್ಪಷ್ಟವಾಗಿ ಉಚ್ಚರಿಸಲು ಆಗದೆ ತೊದಲಿದ್ದು, ಈ ವೇಳೆ ಇತರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕ ನಕ್ಕಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.

‘ಪಕ್ಕೆಲುಬು’ ಶಿಕ್ಷಕ ಕೊನೆಗೂ ಪತ್ತೆ; ಸೇವೆಯಿಂದ ಅಮಾನತು!...

ಈಗಾಗಲೇ ಶಿಕ್ಷಣ ಸಚಿವರು ಪಕ್ಕೆಲುಬು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಕಟ್ಟುನಿಟ್ಟಿನಿ ಎಚ್ಚರಿಕೆ ನೀಡಿದ್ದು, ವಿಡಿಯೋ ಮಾಡಿದ್ದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಇಷ್ಟೆಲ್ಲಾ ಗೊತ್ತಿದ್ದರೂ ಸಹ ಇದೀಗ ವಿದ್ಯಾರ್ಥಿನಿಯ ತಡಬಡಾಯಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.