ಹೂವಿನಹಡಗಲಿ[ಜ.11]: ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ‘ಪಕ್ಕೆಲುಬು’ ಎಂಬ ಪದವನ್ನು ಉಚ್ಚರಿಸಲು ಕಷ್ಟಪಡುವ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದ ಶಿಕ್ಷಕನನ್ನು ಶಿಕ್ಷಣ ಇಲಾಖೆ ಕೊನೆಗೂ ಪತ್ತೆ ಹಚ್ಚಿದ್ದು, ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಟಿ.ಚಂದ್ರಶೇಖರಪ್ಪ ಅವರೇ ಈ ವಿಡಿಯೋ ಮಾಡಿದ್ದ ಶಿಕ್ಷಕ ಎಂದು ತಿಳಿದುಬಂದಿದೆ. ಚಂದ್ರಶೇಖರ್‌ರನ್ನು ಶುಕ್ರವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ ತಿಳಿಸಿದ್ದಾರೆ.

ಪಕ್ಕೆಲುಬು’ ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಕ್ರಮ

ಜ.3ರಂದು ಪಾಠ ಬೋಧನೆ ಮಾಡುವಾಗ ‘ಪಕ್ಕೆಲುಬು’ ಎಂಬ ಪದವನ್ನು ಉಚ್ಚರಿಸಲು ವಿದ್ಯಾರ್ಥಿಯು ಕಷ್ಟಪಡುತ್ತಿರುವ ವಿಡಿಯೋ ಹಾಸ್ಯಾಸ್ಪದವಾಗಿ ವೈರಲ್‌ ಆಗಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡಿದ್ದ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ವಿಡಿಯೋ ಹರಿಯಬಿಟ್ಟಿದ್ದ ಶಿಕ್ಷಕನ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಗುರುವಾರವಷ್ಟೇ ತಿಳಿಸಿದ್ದರು.

ವಿಡಿಯೋ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆ ಹಾಗೂ ಗ್ರಾಮಸ್ಥರು ನೀಡಿದ್ದ ದೂರಿನ ಮೇರೆಗೆ ಶಾಲೆಗೆ ತೆರಳಿ ವಿಚಾರಣೆ ನಡೆಸಿದ ಬಿಇಒ, ಆರೋಪಕ್ಕೆ ಗುರಿಯಾಗಿರುವ ಶಿಕ್ಷಕ ಚಂದ್ರಶೇಖರ್‌ನನ್ನು ಅಮಾನತುಗೊಳಿಸಿದ್ದಾರೆ.