ಮೈಸೂರು (ಫೆ.17): ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ 800 ಜನರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದ್ದು, ಅದರಲ್ಲಿ 4 ಕ್ಕೆ ಮಾತ್ರ ಚಾಜ್‌ರ್‍ಶೀಟ್‌ ಹಾಕಿದ್ದಾರೆ. ಇಷ್ಟರ ಮಟ್ಟಿಗೆ ಯಾವ ಕಾಲದಲ್ಲೂ ದೇಶದ್ರೋಹ ಪ್ರಕರಣಗಳು ದಾಖಲಾಗಿರಲಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪಿಸಿದರು.

ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಧ್ವನಿ ಅಡಗಿಸುವ ನಿಟ್ಟಿನಲ್ಲಿ ಆಯುಧವಾಗಿ ದೇಶದ್ರೋಹ ಪ್ರಕರಣವನ್ನು ಕೇಂದ್ರ ಸರ್ಕಾರ ಬಳಸುತ್ತಿದೆ. ಪರಿಸರವಾದಿ ದಿಶಾ ರವಿಯನ್ನು ದೆಹಲಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಕರ್ನಾಟಕ ಪೊಲೀಸರ ಅನುಮತಿ ಪಡೆಯದೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಮ್ಮ ರಾಜ್ಯದವರನ್ನು ಸರ್ಕಾರ ಅಥವಾ ಪೊಲೀಸರ ಅನುಮತಿ ಪಡೆಯದೇ ಬಂಧಿಸಿರುವುದು ದುರಂತ ಎಂದು ಕಿಡಿಕಾರಿದರು.

ಪ್ರಧಾನಿ ವಿರುದ್ಧ ಟ್ವೀಟ್; ಕನ್ನಡ ಸಿನಿಮಾ ಕಿರಾತಕ ನಟಿ ವಿರುದ್ಧ ಕೇಸ್ ದಾಖಲು! ..

ದಿಶಾ ರವಿ ರೈತ ಕುಟುಂಬದಿಂದ ಬಂದವರು. ರೈತರ ಬೆಂಬಲ ಸೂಚಿಸಿದ್ದೆ ಅವರಿಗೆ ತೊಂದರೆಯಾಗಿದೆ. ಆ ಕಾರಣಕ್ಕಾಗಿ ಅವರನ್ನು ಬಂಧಿಸಿದ್ದಾರೆ. ಟೂಲ್‌ ಕಿಟ್‌ ಎಂದರೆ ಕ್ಯಾಲೆಂಡರ್‌ ಆಫ್‌ ಇವೆಂಟ್ಸ್‌ ಅಷ್ಟೆ. ಆದರೆ, ಇದಕ್ಕೆ ಟೂಲ್‌ಕಿಟ್‌ ಅನ್ನೋ ಹೊಸ ಪದ ಬಳಕೆ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಮಾಡಿ ಹೆಣ್ಣು ಮಗಳನ್ನು ಬಂಧಿಸಿದ್ದಾರೆ. ಬಿಜೆಪಿಗೆ ಹೆಣ್ಣುಮಕ್ಕಳ ಮೇಲೆ ಗೌರವ ಇಲ್ಲ. ಈಗಲಾದರೂ ಯುವಕ, ಯುವತಿಯರು ಬಿಜೆಪಿ ವಿರುದ್ಧ ಧ್ವನಿ ಎತ್ತಬೇಕು. ಬಿಜೆಪಿಯವರ ಐಟಿ ಸೆಲ್, ಆರ್‌ಎಸ್‌ಎಸ್‌ ಅನ್ನು ನಿಜವಾದ ಟೂಲ್‌ಕಿಟ್ ಆಗಿದ್ದು, ಮೊದಲು ಇವನ್ನು ಬ್ಯಾನ್‌ ಮಾಡಬೇಕು ಎಂದು ಅವರು ಆಗ್ರಹಿಸಿದರು.

5 ರುಪಾಯಿ ತಂದಿಲ್ಲ

ಮೈಸೂರಿಗೆ ಎಸ್‌.ಟಿ. ಸೋಮಶೇಖರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಐದು ರುಪಾಯಿ ತಂದಿಲ್ಲ. ಅವರು 5 ರುಪಾಯಿಯಾದರೂ ತಂದಿರುವುದಾಗಿ ಸಾಬೀತುಪಡಿಸಿದರೇ ನಾನೇ ಸೋಮಶೇಖರ್‌ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಅವರು ಸವಾಲು ಹಾಕಿದರು.

ಮೈಸೂರು ವಿವಿಯ ಕೆ- ಸೆಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪಗಳು ಕೇಳಿ ಬಂದಿದೆ. ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ವಿವಿ ಕುಲಪತಿ ಈ ಅಪನಂಬಿಕೆ ಹೋಗಲಾಡಿಸಿ ಮೈಸೂರು ವಿವಿ ನಂಬಿಕೆ ಉಳಿಸಿಕೊಳ್ಳಲು ಈ ಬಾರಿಯಿಂದಲೇ ಆನ್‌ಲೈನ್‌ ಮೂಲಕ ಕೆ-ಸೆಟ್‌ ಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

 ರಂಗಾಯಣ ನಿರ್ದೇಶಕರ ವಿರುದ್ಧ ಕಿಡಿ

ಉಚಿತ ನಾಟಕ ತೋರಿಸುವುದು ಸಿದ್ದರಾಮಯ್ಯ ಅಕ್ಕಿಕೊಟ್ಟಂತೆ ಎಂಬ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನಲ್ಲಿ ನಿಮ್ಮ ಅಡ್ಡಕಸವಿತನ ತೋರಬೇಡಿ. ಬಿಜೆಪಿಯವರು ಬಡವರು ತಿನ್ನುವ ಅನ್ನಕ್ಕೂ ಕೇಸರಿ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದಾರೆ. ನೀವು ಅಕ್ಕಿ ಬೆಳೆಯುವವರನ್ನು ಸಹಿಸಲ್ಲ, ಉಚಿತ ಅಕ್ಕಿ ಕೊಡುವವರನ್ನು ಸಹಿಸಲ್ಲ. ಅಡ್ಡಂಡ ಕಾರ್ಯಪ್ಪ ನಿಮ್ಮ ವ್ಯಾಪ್ತಿಯಲ್ಲಿ ಏನಿದೆ ಅದನ್ನು ಮಾತ್ರ ಮಾಡಿ ಎಂದರು.

ಅಡ್ಡಂಡ ಕಾರ್ಯಪ್ಪ ಬಂದಾಗಿಂದ ರಂಗಾಯಣದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಅಜೆಂಡಾ ಹೇರುತ್ತಿದ್ದಾರೆ. ಸಿದ್ದರಾಮಯ್ಯ ತಂದ ಅನ್ನಭಾಗ್ಯ ಯೋಜನೆಯಿಂದ ಒಂದೂವರೆ ಕೋಟಿ ಜನ ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ. ಈ ಯೋಜನೆ ಇಲ್ಲದಿದ್ದರೆ ಮೋದಿ ಮಾಡಿದ ಲಾಕ್‌ಡೌನ್‌ ಸಂದರ್ಭದಲ್ಲಿ ಹಸಿವಿನಿಂದ ಸಾವಿರಾರು ಜನ ಸಾವನ್ನಪ್ಪಬೇಕಾಗಿತ್ತು. ಬಡವರ ಬಗ್ಗೆ ಟೀಕಿಸಿ ಸಂತೋಷ ಪಡುವ ಕೊಳಕು ಮನಸ್ಥಿತಿ ನಿಮ್ಮದ್ದು ಎಂದು ಅವರು ವಾಗ್ದಾಳಿ ನಡೆಸಿದರು.