ಹಲವು ಹೋರಾಟಗಳ ನಂತರ, ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿಯು ಮತ್ತೆ ಚುರುಕುಗೊಂಡಿದೆ. ಒಟ್ಟು ₹55 ಕೋಟಿ ವೆಚ್ಚದ ಈ ಯೋಜನೆಗೆ ಹೆಚ್ಚುವರಿಯಾಗಿ ₹10 ಕೋಟಿ ಅನುದಾನದ ಪ್ರಸ್ತಾವನೆ ಸಿದ್ಧವಾಗಿದ್ದು, ನದಿಯಲ್ಲಿ ನೀರಿದ್ದರೂ ಕಾಮಗಾರಿ ವೇಗವಾಗಿ ಸಾಗುತ್ತಿದೆ.

ಬಾಗಲಕೋಟೆ: ಕಳೆದೆರಡು ತಿಂಗಳಿಂದ ರಬಕವಿ-ಬನಹಟ್ಟಿ ಜನತೆ ಸಾಕಷ್ಟು ಹೋರಾಟ, ಪ್ರತಿಭಟನೆ ಹಾಗೂ ರಾಜಕೀಯ ನಾಯಕರ ಹೇಳಿಕೆಗಳ ಮಧ್ಯೆ ಒಟ್ಟಾರೆ ಈ ಭಾಗದ ಮಹತ್ವದ ಯೋಜನೆಯಾದ ರಬಕವಿ-ಮಹಿಷವಾಡಗಿ ಸೇತುವೆ ಕಾರ್ಯಕ್ಕೆ ಮತ್ತೇ ಜೀವ ತುಂಬುವ ಮೂಲಕ ನಿತ್ಯ ಕಾಮಗಾರಿ ಚುರುಕಿನಿಂದ ಕೂಡಿರುವುದು ವಿಶೇಷ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಟ್ಟು ₹ 55 ಕೋಟಿ ವೆಚ್ಚದಲ್ಲಿನ ಕಾಮಗಾರಿಯಾಗಿರುವ ಈ ಸೇತುವೆಯು ಆಗಿನ ಸಚಿವೆ ಆಗಿದ್ದ ಡಾ.ಉಮಾಶ್ರೀ, ಸರ್ಕಾರದಿಂದ ₹ 25 ಕೋಟಿಗಳ ಮೂಲಕ 2018ರಲ್ಲಿ ಚಾಲನೆಗೊಂಡು ಮಧ್ಯಂತರ ಭಾಗವಾಗಿ 2022ರಲ್ಲಿ ಶಾಸಕ ಸಿದ್ದು ಸವದಿ ₹ 20 ಕೋಟಿಗಳಷ್ಟು ಹೆಚ್ಚುವರಿಗೊಳಿಸಿ ಸೇತುವೆ ವಿಸ್ತೀರ್ಣದ ಅಗಲವನ್ನು ಹೆಚ್ಚಳಗೊಳಿಸಿ ಅನುದಾನ ತಂದಿದ್ದರು. ಕಳೆದ ಡಿಸೆಂಬರ್ ತಿಂಗಳಲ್ಲಿ ರಬಕವಿ-ಬನಹಟ್ಟಿ ಸಾರ್ವಜನಿಕರಿಂದ ನಡೆದ ಹೋರಾಟದಲ್ಲಿ ಸರ್ಕಾರದಿಂದ ಮತ್ತೆ ₹ 10 ಕೋಟಿ ಹೆಚ್ಚುವರಿ ಕಾಮಗಾರಿಯಿಂದ ಕಾಮಗಾರಿಗೆ ಜೀವ ಬಂದಂತಾಗಿದೆ.

ನದಿಯೊಳಗೆ ನೀರಿದ್ದರೂ ಸಮಸ್ಯೆಯಿಲ್ಲ

ಸದ್ಯ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 4 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಕಳೆದ ಬುಧವಾರದಿಂದ ಹಿಪ್ಪರಗಿ ಬ್ಯಾರೇಜ್‌ಗೆ ನೀರು ಹರಿದು ಬರುತ್ತಿದೆ. ಕೋಯ್ನಾ ಜಲಾಶಯದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ನೀರಿಲ್ಲದಿದ್ದರೂ ಮಳೆ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಮಳೆ ನೀರು ಹರಿದು ಬಂದ ನೀರು ನದಿಗೆ ಸೇರುತ್ತಿದೆ ಎಂಬುವುದು ಅಧಿಕಾರಿಗಳಿಂದ ತಿಳಿದು ಬಂದ ಮಾಹಿತಿಯಾಗಿದೆ. ಸಂಜೆ ವೇಳೆಗೆ ಒಳಹರಿವಿನ ತೀವೃತೆ ಕುಸಿದಿದ್ದು, ನೀರು ಸರಾಗವಾಗಿ ಸಾಗಿ ಹಿಪ್ಪರಗಿ ಜಲಾಶಯ ತಲುಪುವಂತೆ ಗುತ್ತಿಗೆದಾರ ಅಭಿಯಂತರ ರೊಟ್ಟಿ ಕಾರ್ಮಿಕರ ಬಳಸಿ ಸೇತುವೆ ರಸ್ತೆಯ ಎರಡು ಭಾಗಗಳಲ್ಲಿ ಕತ್ತರಿಸಿದ್ದರಿಂದ ನದಿ ಪಾತ್ರದ ಮುಂಭಾಗದ ಜನತೆಗೆ ಅನುವಾಗಿದೆ.

ನದಿಯ ನೀರೊಳಗಿನ ಸೇತುವೆ ಕಾರ್ಯ ಪೂರ್ಣ ಪ್ರಮಾಣದಲ್ಲಾಗಿರುವ ಕಾರಣ ಕಾಮಗಾರಿಗೆ ಯಾವುದೇ ತೊಂದರೆಯಾಗದು. ಇದೀಗ ಹೆಚ್ಚಿನ ತಂತ್ರಜ್ಞಾನ ಅಳವಡಿಕೆಯಿಂದ ಎಲ್ಲ ಪಿಲ್ಲರ್‌ಗಳ ಎತ್ತರಿಸುವ ಕಾರ್ಯ ತ್ವರಿತವಾಗಬೇಕಿದೆ.

₹ 10 ಕೋಟಿ ವೆಚ್ಚದ ಯೋಜನೆ ಸಿದ್ಧತೆ

ಇದೀಗ ರಾಜ್ಯ ರಸ್ತೆ ನಿಗಮದಿಂದ ಅಧಿಕಾರಿಗಳ ತಂಡ ಆಗಮಿಸಿದ್ದು, ನದಿ ಪ್ರವಾಹ ಸಂದರ್ಭ ಸುತ್ತಲಿನ ಗ್ರಾಮಗಳ ಹಾಗೂ ಹೊಲ-ಗದ್ದೆಗಳಿಗೆ ಹಿನ್ನೀರು ನಿಂತು ನೆರೆ ಉಂಟಾಗಬಾರದೆಂಬ ಉದ್ದೇಶದಿಂದ ಸೇತುವೆ ಎರಡೂ ಬದಿಯಲ್ಲಿ ಕಮಾನು(ಬ್ಲಾಕ್)ಗಳ ಅಳವಡಿಕೆಗೆ ಹೆಚ್ಚುವರಿ ₹ 10 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವ ಕಾರ್ಯ ನಡೆದಿದೆ. ರಬಕವಿ-ಬನಹಟ್ಟಿ ತಾಲೂಕಿನ ಭಾಗದ 5 ಬ್ಲಾಕ್ ಹಾಗೂ ಅಥಣಿ ಕಡೆಯ 2 ಬ್ಲಾಕ್‌ಗಳ ತಾಂತ್ರಿಕ ವ್ಯವಸ್ಥೆ ನಡೆಯುತ್ತಿದೆ.

ಇದನ್ನೂ ಓದಿ: Karnataka Weather: ಬೆಂಗಳೂರಿಗರೇ ಸುಖಾಸುಮ್ಮನೆ ಹೊರಬರಬೇಡಿ, ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ!

ನದಿ ಪಾತ್ರದಲ್ಲಿ ನೀರು ಹೆಚ್ಚಳಗೊಳ್ಳುವ ಮುನ್ನ ತಯಾರಿಸಲಾದ ರಸ್ತೆ ಬಳಸಿ ಗುತ್ತಿಗೆದಾರ ಪಿಲ್ಲರ್ ಎತ್ತರಿಸುವ ಮೇಲ್ಬಾಗದ ಕಾಮಗಾರಿ ತ್ವರಿತಗೊಳಿಸಿ, ನದಿ ಪಾತ್ರದಲ್ಲಿ ನೀರು ಹೆಚ್ಚಳಗೊಂಡಾಗ ರಬಕವಿ ಮತ್ತು ಮಹಿಷವಾಡಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪರ್ಕ ರಸ್ತೆಗಳನ್ನು ನಿರ್ಮಿಸಿ ನೀಡಿದ ಭರವಸೆಯಂತೆ 2027ರ ಮಾರ್ಚ ತಿಂಗಳಲ್ಲಿ ಲೋಕಾರ್ಪಣೆಗೊಳಿಸಬೇಕು ಎಂದು ಹಳಿಂಗಳಿಯ ಪ್ರಗತಿಪರ ರೈತರಾದ ಭುಜಬಲಿ ವೆಂಕಟಾಪುರ ಹೇಳುತ್ತಾರೆ.

ಇದನ್ನೂ ಓದಿ: ಭಾರತದ ಮೇಲೆ ಕಡಲ ಮುನಿಸು, ಎಲ್‌ ನಿನೋ ಖಚಿತಪಡಿಸಿದ ಭಾರತೀಯ ಹವಾಮಾನ ಇಲಾಖೆ