ಕೇಂದ್ರದ ಪರಿಸರ ಸಚಿವಾಲಯವೂ ಕರ್ನಾಟಕ ಸೇರಿ 6 ರಾಜ್ಯಗಳ 57 ಸಾವಿರ ಚದರ ಕಿಲೋ ಮೀಟರ್ ಪಶ್ಚಿಮ ಘಟ್ಟ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದಾಗಿ ತಿಳಿಸಿದೆ.

- ಶಿವನಾಂದ ಗೊಂಬಿ
ಹುಬ್ಬಳ್ಳಿ[ಅ.20]:
ಮಹದಾಯಿ ನೀರಿನಲ್ಲಿ ಕರ್ನಾಟಕದ ಪಾಲು ಇದೆ ಎಂದು ನ್ಯಾಯಾಧಿಕರಣ ತೀರ್ಪು ನೀಡಿ 2 ತಿಂಗಳು ಗತಿಸಿದೆ. ಮಹದಾಯಿ, ಕಳಸಾ-ಬಂಡೂರಿ ಯೋಜನೆಗಳು ಕೈಗೂಡುತ್ತವೆಯೋ ಇಲ್ಲವೋ ಎಂಬ ಆತಂಕ ಹೋರಾಟಗಾರರಲ್ಲಿ ಮನೆ ಮಾಡಿದೆ.

ಈ ಮಧ್ಯೆ ಕೇಂದ್ರದ ಪರಿಸರ ಸಚಿವಾಲಯವೂ ಕರ್ನಾಟಕ ಸೇರಿ 6 ರಾಜ್ಯಗಳ 57 ಸಾವಿರ ಚದರ ಕಿಲೋ ಮೀಟರ್ ಪಶ್ಚಿಮ ಘಟ್ಟ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದಾಗಿ ತಿಳಿಸಿದೆ.

ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿರುವ ಪರಿಸರ ಸಚಿವಾಲಯ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲ ಗಡುವು ನೀಡಿದೆ. ಒಂದು ವೇಳೆ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿಬಿಟ್ಟರೆ ಇಲ್ಲಿ ಯಾವುದೇ ಬಗೆಯ ಕಾಮಗಾರಿ ಕೈಗೊಳ್ಳಲು ಬರುವುದಿಲ್ಲ? ಕೇಂದ್ರ ಪರಿಸರ ಸಚಿವಾಲಯ ಹೇಳುವಂತೆ 57 ಸಾವಿರ ಕಿಮೀ ವ್ಯಾಪ್ತಿಯಲ್ಲೇ ಮಹದಾಯಿ, ಕಳಸಾ ಬಂಡೂರಾ ನಾಲೆಗಳು ಬರುತ್ತಿವೆಯೇ? ಒಂದು ವೇಳೆ ಹಾಗೆ ಬರುತ್ತಿದ್ದರೆ, ಅಲ್ಲಿ ಕಾಮಗಾರಿ ಕೈಗೊಳ್ಳಲು ಬರದಿದ್ದರೆ ಮತ್ತೆ ಮಹದಾಯಿ, ಕಳಸಾ-ಬಂಡೂರಿ ಯೋಜನೆಗಳೆಲ್ಲ ಮತ್ತೆ ತಡೆಯಾಗುತ್ತದೆಯೇ? ಎಂಬ ಆತಂಕ ರೈತರದ್ದು.

ಏನು ಮಾಡಬೇಕು?: ಕೇಂದ್ರ ಹೊರಡಿಸಿರುವ ಕರಡು ಅಧಿಸೂಚನೆಗೆ ತಕ್ಷಣವೇ ಆಕ್ಷೇಪಣೆ ಸಲ್ಲಿಸಬೇಕು. ಇದರೊಂದಿಗೆ ಕೇಂದ್ರ ಹೇಳುವ 57 ಸಾವಿರ ಕಿಮೀ ವ್ಯಾಪ್ತಿಯೊಳಗೆ ಮಹದಾಯಿ ನದಿ ಹಾಗೂ ಈ ನಾಲೆಗಲು ಹರಿದಿರುವ ಪ್ರದೇಶವೂ ಬರುತ್ತವೆಯೇ? ಎಂಬ ಬಗ್ಗೆ ಸಮೀಕ್ಷೆ ನಡೆಸಬೇಕು. ಜತೆಗೆ ನ್ಯಾಯಾಧಿಕರಣದ ತೀರ್ಪಿನನ್ವಯ ಕಳಸಾ - ಬಂಡೂರಿ ನಾಲಾ ಜೋಡಣೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಈ ಕಾಮಗಾರಿ ಹೊರತುಪಡಿಸಿ ನ್ಯಾಯಾಧಿಕರಣ ನೀಡಿರುವ ತೀರ್ಪಿನನ್ವಯ ಯಾವ್ಯಾವ ಯೋಜನೆ ಕೈಗೆತ್ತಿಕೊಳ್ಳಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಿ ಯೋಜನೆ ರೂಪಿಸಿ ಅದಕ್ಕೂ ತಕ್ಷಣವೇ ಚಾಲನೆ ನೀಡಬೇಕು ಎಂಬುದು ಮಹದಾಯಿ ಹೋರಾಟಗಾರರ ಆಗ್ರಹ.