ಅತಿವೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ 391.57 ಕೋಟಿ ಹಾನಿ, ಮಳೆಗೆ ಒಟ್ಟು 6 ಮಂದಿ ಬಲಿ
ಜೂನ್ ನಿಂದ ಸುರಿಯುತ್ತಿರುವ ಮಳೆಗೆ ಚಿಕ್ಕಮಗಳೂರು ಜಿಲ್ಲೆ ತತ್ತರಿಸಿ ಹೋಗಿದೆ. ಜೂನ್ ನಿಂದ ಇಲ್ಲಿವರೆಗೂ ಸುರಿದ ಮಳೆಯ ಅತಿವೃಷ್ಟಿಯಿಂದ 391.57 ಕೋಟಿ ರೂ. ಹಾನಿಯಾಗಿದೆ .
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಸೆ.8): ಜೂನ್ ನಿಂದ ಸುರಿಯುತ್ತಿರುವ ಮಳೆಗೆ ಚಿಕ್ಕಮಗಳೂರು ಜಿಲ್ಲೆ ತತ್ತರಿಸಿ ಹೋಗಿದೆ. ಜೂನ್ ನಿಂದ ಇಲ್ಲಿವರೆಗೂ ಸುರಿದ ಮಳೆಯ ಅತಿವೃಷ್ಟಿಯಿಂದ ಕೋಟ್ಯಾಂತರ ರೂಪಾಯಿ ಹಾನಿ ಉಂಟಾಗಿ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್ ತಿಂಗಳಿಂದ ಇಲ್ಲಿಯವರೆಗೆ ಸುರಿದ ಮಳೆಯ ಅತಿವೃಷ್ಟಿಯಿಂದ 391.57 ಕೋಟಿ ರೂ. ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ. ಇಂದು ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಒಟ್ಟು 945 ಮನೆಗಳಿಗೆ ಮಳೆಯಿಂದ ಹಾನಿಯಾಗಿದ್ದು, 71ಮನೆಗಳು ಸಂಪೂರ್ಣ ನೆಲಕಚ್ಚಿವೆ. 368 ಮನೆಗಳು ಭಾಗಶಃ ಹಾನಿಯಾಗಿದೆ. 468 ಮನೆಗಳಿಗೆ ಶೇ.25ರಷ್ಟು ಹಾನಿಯಾಗಿದ್ದು, 18 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರದ ಮೊದಲ ಕಂತಿನ ಹಣ ನೀಡಲಾಗಿದೆ. ಎರಡನೇ ಮತ್ತು ಇತರೆ ಕಂತುಗಳನ್ನು ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೋರೇಶನ್ ಮನೆ ನಿರ್ಮಾಣ ಪ್ರಗತಿ ಆಧಾರದ ಮೇಲೆ ಫಲಾನುಭವಿಗಳ ಖಾತೆಗೆ ನೆರವಾಗಿ ಹಣ ಪಾವತಿಸಲಿದೆ.ಮನೆ ಹಾನಿಯಾದ ಕುಟುಂಬಗಳಿಗೆ ಇದುವರೆಗೂ 5 ಕೋಟಿ ರೂ. ಪರಿಹಾರ ವಿತರಿಸಲಾಗಿದ್ದು ಶೇ90 ರಷ್ಟು ಪರಿಹಾರ ನೀಡಲಾಗಿದ್ದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವುದು ಬಾಕೀ ಇದೆ ಎಂದರು.
ಮಳೆಯಿಂದ ಪ್ರಮುಖ ಬೆಳೆ ಮಣ್ಣು ಪಾಲು
ಜಿಲ್ಲೆಯಲ್ಲಿ 9.815 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಅಂದಾಜು 136 ಕೋಟಿ ರೂ. ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಅಜ್ಜಂಪುರ ಮತ್ತು ತರೀಕೆರೆ ಭಾಗದಲ್ಲಿ ಈರುಳ್ಳಿ 3.499 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದರೆ, ಅಡಕೆ 353 ಹೆಕ್ಟೇರ್, ಆಲೂಗಡ್ಡೆ 870 ಹೆಕ್ಟೇರ್, ಜೋಳ 175 ಹೆಕ್ಟೇರ್, ಕಡಲೇಕಾಯಿ 277 ಹೆಕ್ಟೇರ್, ಭತ್ತ 75 ಹೆಕ್ಟೇರ್, ಬಟಾಣಿ 745 ಹೆಕ್ಟೇರ್, 335.25 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಇತರೆ ಬೆಳೆ ಹಾಗೂ ಕಾಫಿ 14 ಹೆಕ್ಟೇರ್ ಪ್ರದೇಶನಲ್ಲಿ ನಾಶವಾಗಿದೆ ಎಂದರು.
ಅತಿವೃಷ್ಟಿಗೆ ಸಿಲುಕಿ ಒಟ್ಟು 6 ಜನರು ಮೃತಪಟ್ಟಿದ್ದು, ಸರ್ಕಾರ ನಿಗಧಿಪಡಿಸಿದ ಪರಿಹಾರವನ್ನು ನೀಡಲಾ ಗಿದೆ. 45 ಕುಟುಂಬಗಳಿಗೆ ಮನೆಹಾನಿ ಸಂದರ್ಭದಲ್ಲಿ ಅಗತ್ಯವಸ್ತುಗಳನ್ನು ಕಳೆದುಕೊಂಡಿದ್ದು, ಸರ್ಕಾರ ನಿಗಧಿಪಡಿಸಿದ ಪರಿಹಾರ ಮತ್ತು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಡೂರು 17 ಕೊಪ್ಪ 17, ನರಸಿಂಹರಾಜಪುರ 6 ಹಾಗೂ ಕಳಸ 1 ಕುಟುಂಬಗಳಿಗೆ ಒಟ್ಟು 1.57 ಲಕ್ಷ ರೂ. ಪರಿಹಾರವನ್ನು ನೀಡಿದ್ದು, ಅಗತ್ಯ ಪಡಿತರ ವ್ಯವಸ್ಥೆಯನ್ನು ಮಾಡಲಾಗಿದೆ. 7 ಜಾನುವಾರುಗಳು ಮೃತಪಟ್ಟಿದ್ದು, 2.1 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ವಾಡಿಕೆಗಿಂತ ಅಧಿಕ ಮಳೆ
ಜಿಲ್ಲೆಯಲ್ಲಿ 940 ಮಿ.ಮೀ. ವಾಡಿಕೆ ಮಳೆಗೆ ಬದಲಾಗಿದೆ. ಇದುವರೆಗೂ 1300 ಮಿ.ಮೀ. ಮಳೆಯಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ರಸ್ತೆ, ಜಮೀನು, ಮನೆಗಳಿಗೆ ಹಾನಿಯಾಗಿದ್ದು, ಮಳೆಹಾನಿ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ನಷ್ಟದ ಅಂಕಿಅಂಶ ನೀಡಿದರು.
ಇಂದು ಜಿಲ್ಲೆಗೆ ಕೇಂದ್ರತಂಡ:
ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪತಾಲೂಕಿನ ಮಳೆಹಾನಿ ಪ್ರದೇಶಕ್ಕೆ ಶುಕ್ರವಾರ ಕೇಂದ್ರ ತಂಡ ಭೇಟಿನೀಡಿ ಪರಿಶೀಲಿಸಲಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆಗೆ ಭೇಟಿನೀಡುವ ಕೇಂದ್ರತಂಡ ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ ಅತಿಹೆಚ್ಚು ಮಳೆಹಾನಿ ಪ್ರದೇಶಕ್ಕೆ ಭೇಟಿನೀಡಲಿದ್ದಾರೆ. ಮಳೆಹಾನಿಯ ಬಗ್ಗೆ ತಂಡಕ್ಕೆ ಮನವರಿಕೆ ಮಾಡಿಕೊಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ಪಡೆದುಕೊಳ್ಳಲಾಗುವುದು ಎಂದರು.