Asianet Suvarna News Asianet Suvarna News

ಪ್ರವಾಸೋದ್ಯಮ ದಸರೆಯಿಂದಾಗಿ ಮತ್ತೊಮ್ಮೆ ‘ಚೇತರಿಕೆ’

  • ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್‌-19 ನಿಂದಾಗಿ ‘ಮಂಕಾಗಿದ್ದ’ ಪ್ರವಾಸೋದ್ಯಮ  
  • ದಸರೆಯಿಂದಾಗಿ ಮತ್ತೊಮ್ಮೆ ‘ಚೇತರಿಕೆ’ಕಂಡಿದೆ
After Dasara Tourism  Boosted in Mysuru snr
Author
Bengaluru, First Published Oct 17, 2021, 2:58 PM IST
  • Facebook
  • Twitter
  • Whatsapp

ವರದಿ :   ಅಂಶಿ ಪ್ರಸನ್ನಕುಮಾರ್‌

 ಮೈಸೂರು (ಅ.17):  ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್‌-19 (Covid) ನಿಂದಾಗಿ ‘ಮಂಕಾಗಿದ್ದ’ ಪ್ರವಾಸೋದ್ಯಮ (Tourism) ದಸರೆಯಿಂದಾಗಿ (Dasara) ಮತ್ತೊಮ್ಮೆ ‘ಚೇತರಿಕೆ’ಕಂಡಿದೆ. ಸರಳವೋ, ಅದ್ಧೂರಿಯೇ ವಿಶ್ವವಿಖ್ಯಾತ ಮೈಸೂರು  ದಸರಾ ಮಹೋತ್ಸವ ಇನ್ನೂ ಜನಾಕರ್ಷಣೆಯ ನಾಡಹಬ್ಬವಾಗಿದೆ.

ಮೈಸೂರು ಪ್ರವಾಸೋದ್ಯಮ  ಅಭಿವೃದ್ಧಿಗೆ ‘ದಸರೆಯೇ ಬ್ರ್ಯಾಂಡ್‌’ (Dasara Brand) ಎಂಬುದು ದಸರೆ ಆರಂಭವಾದ ನಂತರ ಅರಮನೆ (Palace), ಚಾಮುಂಡಿ ಬೆಟ್ಟ(Chamundi Betta) ಹಾಗೂ ಶ್ರೀ ಚಾಮರಾಜೇಂದ್ರ  ಮೃಗಾಲಯಕ್ಕೆ (Zoo) ಭೇಟಿ ನೀಡಿರುವವರ ಸಂಖ್ಯೆಯಿಂದಲೇ ಸಾಬೀತಾಗಿದೆ. ಜಂಬೂ ಸವಾರಿಯ ಮರುದಿನವೂ ಅರಮನೆ (Palce), ಮೃಗಾಲಯ. ಚಾಮುಂಡಿ ಬೆಟ್ಟ(Chamundi) ಮತ್ತಿತರ ಕಡೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ.

ಕೊರೋನಾ (Corona) ಮೂರನೇ ಅಲೆಯ ಆತಂಕದಿಂದಾಗಿ ಈ ಬಾರಿಯ ದಸರೆ ಏನೋ, ಹೇಗೋ? ಎಂಬ ಆತಂಕವಿತ್ತು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಉಸ್ತುವಾರಿ ಎಸ್‌.ಟಿ. ಸೋಮಶೇಖರ್‌ (ST Somashekar) ಸರಳ, ಸಾಂಪ್ರದಾಯಿಕ ದಸರೆಗೆ ಆದ್ಯತೆ ನೀಡಿದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

ಅರಮನೆ ಹೊರತುಪಡಿಸಿ ಬೇರೆಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ. ಒಂದೆರಡು ದಿನ ಮಳೆಯ ನಡುವೆಯೂ ಬಹುತೇಕ ಕಾರ್ಯಕ್ರಮಗಳು ಉತ್ತಮವಾಗಿ ನಡೆದವು. ಬೆಂಗಳೂರಿನ (Bengaluru) ಪ್ರಭಾತ್‌ ತಂಡದಿಂದ ಕರ್ನಾಟಕ (Karnataka) ವೈಭ ನೃತ್ಯ ರೂಪಕ, ಮಳವಳ್ಳಿ ಮಹದೇವಸ್ವಾಮಿ, ಅಪ್ಪಗೆರೆ ತಿಮ್ಮರಾಜು ಅವರಿಂದ ಜಾನಪದ ಕಾವ್ಯ ಗಾಯನ, ಶಿವಮೊಗ್ಗದ (Shivamogga) ಹೊಸಹಳ್ಳಿ ವೆಂಕಟರಾಮು ತಂಡದಿಂದ ವಯೋಲಿನ್‌, ವೈ.ಕೆ. ಮುದ್ದುಕೃಷ್ಣ ತಂಡದಿಂದ ಕನ್ನಡ ಡಿಂಡಿಮ ಕಾರ್ಯಕ್ರಮ ನಡೆದವು.

ಮೈಸೂರಿನ ಎಚ್‌.ಎನ್‌. ಭಾಸ್ಕರ್‌ ತಂಡದಿಂದ ಸಂಗೀತ ದರ್ಬಾರ್‌, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ತಂಡದಿಂದ ನಾಲ್ವಡಿ- ನಲ್ನುಡಿ ದೇಸೀ ಸಂಸ್ಕೃತಿ ಹಬ್ಬ, ಬೆಂಗಳೂರಿನ ಅಮೋಘ ವರ್ಷ ಡ್ರಮ್ಸ್‌ ಕಲೆಕ್ಟಿವ್‌ನಿಂದ ಮಿಶ್ರವಾದ್ಯ ಗಾಯನ, ಮೈಸೂರಿನ ಶಾಂತಲಾ ವಟ್ಟಂ ತಂಡದಿಂದ ಗಜಲ್‌, ತೀರ್ಥಹಳ್ಳಿಯ (Thirthahalli) ಶಮಿತಾ ಮಲ್ನಾಡ್‌ (Shamitha Mlanad) ತಂಡದಿಂದ ಮಧುರ ಮಧುರವೀ ಮಂಜುಳಗಾನ ನಡೆದವು.

ಪೊಲೀಸ್‌ ಬ್ಯಾಂಡ್‌, ಕ್ರಿಯಾ ಅಭಿವ್ಯಕ್ತಿ ಕಲಾ ತಂಡದಿಂದ ಜನಪದ ಗೀತೆಗಳ ಗಾಯನ, ರಾಯಚೂರು ಶೇಷಗಿರಿದಾಸ್‌ ತಂಡದಿಂದ ದಾಸವಾಣಿ. ಅದಿತಿ ಪ್ರಹ್ಲಾದ್‌- ಸುಗಮ ಸಂಗೀತ, ಮುದ್ದುಮೋಹನ್‌ ತಂಡದ ಹಿಂದೂಸ್ತಾನಿ ಸಂಗೀತ, ಪ್ರವೀಣ್‌ ಗೋಡ್ಬಿಂಡಿ ಮತ್ತು ಷಡಜ್‌ ಗೋಡ್ಬಿಂಡಿ ಅವರಿಂದ ಕೊಳಲುವಾದನ ಜುಗಲ್‌ಬಂದಿ. ಪಂಡಿತ್‌ ಜಯತೀರ್ಥ ಮೇವುಂಡಿ ಅವರಿಂದ ಹಿಂದೂಸ್ತಾನಿ ಗಾಯನ, ಬಿ. ಜಯಶ್ರೀ ತಂಡದಿಂದ ರಂಗಗೀತೆ ಹಾಗೂ ಮೈಸೂರಿನ ಶ್ರೀಧರ್‌ ಜೈನ್‌ ತಂಡದಿಂದ ನೃತ್ಯರೂಪಕ ನಡೆದವು.

ಕಲಾಮಂದಿರಕ್ಕೆ ಸಭಿಕರಿರಲಿಲ್ಲ

ಅರಮನೆ ಅಂಗಳದಲ್ಲಿ ಒಂದು ದಿನ ನಡೆದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಾರ್ಯಕ್ರಮಕ್ಕೆ ಜನರಿದ್ದರು. ಆದರೆ ಕಲಾಮಂದಿರದಲ್ಲಿ ಇದೇ ಕಾರ್ಯಕ್ರಮವನ್ನು ಎರಡು ದಿನ ನಡೆಸಿದಾಗ ಸಭಿಕರ ಕೊರತೆ ಕಾಡಿತು.

ನಂಜನಗೂಡಿನಲ್ಲೂ ಕಾರ್ಯಕ್ರಮ

ಈ ಬಾರಿ ನಂಜನಗೂಡಿನ (Nanjanagudu ) ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಕೂಡ ದಸರಾ ಸಾಂಸ್ಕೃತಿಕ (Dasara) ಕಾರ್ಯಕ್ರಮಗಳನ್ನು ಸಂಘಟಿಸಿದ್ದು ವಿಶೇಷ. ಹುಬ್ಬಳ್ಳಿಯ (Hubli) ಪಂ. ಬಾಲಚಂದ್ರ ನಾಕೋಡ್‌- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಬಳ್ಳಾರಿಯ ಎಸ್‌ಕೆಆರ್‌ ಬಿಲಾನಿ ಭಾಷಾ ಮತ್ತು ತಂಡದಿಂದ ನೃತ್ಯರೂಪಕ, ಮೈಸೂರಿನ ರೇವತಿ ಕಾಮತ್‌ ಮತ್ತು ತಂಡದಿಂದ ವೀಣಾವಾದನ, ಕರಾವಳಿ ಯಕ್ಷಗಾನ ಕೇಂದ್ರದಿಂದ ಜಾಂಬವತಿ ಕಲ್ಯಾಣ ಯಕ್ಷಗಾನ, ಜಿಲ್ಲೆಯ ವಿವಿಧ ಗಾಯಕರಿಂದ ಸುಗಮ ಸಂಗೀತ, ಬೆಂಗಳೂರಿನ ಶ್ರೀಧರ್‌ ಸಾಗರ್‌ ಮತ್ತು ತಂಡದಿಂದ ಸ್ಯಾಕ್ಸೋಫೋನ್‌, ಸ್ವರೂಪ್‌ ಕಲಾತಂಡದಿಂದ ಸುಗಮ ಸಂಗೀತ, ಮಂಡ್ಯದ ಚೇತನಾ ರಾಧಾಕೃಷ್ಣ ಅವರ ಗುರುದೇವ ಅಕಾಡೆಮಿ ಆಫ್‌ ಪೈನ್‌ ಆರ್ಟ್‌್ಸನಿಂದ ನೃತ್ಯರೂಪಕ, ನಂಜನಗೂಡಿನ ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ, ಮೈಸೂರಿನ ಆರ್ಟಿಸ್ಟ್‌ ಅಸೋಸಿಯೇಷನ್‌ ಚಾರಿಟಬಲ್‌ ಟ್ರಸ್ಟ್‌ನಿಂದ ಲಯತಾಂಡವ ಕಾರ್ಯಕ್ರಮಗಳು ಜರುಗಿದವು.

ಇದಲ್ಲದೇ ಮಿಮಿಕ್ರಿ ಗೋಪಾಲ್‌ ಮತ್ತು ತಂಡದಿಂದ ಹಾಸ್ಯೋತ್ಸವ, ಜಿಲ್ಲಾ ವೃತ್ತಿ ರಂಗಭೂಮಿ ಕಲಾವಿದೆಯರ ಸಂಘದಿಂದ ಮೋಹನಿ ಭಸ್ಮಾಸುರ ನಾಟಕ, ಮೈಸೂರಿನ ವೆಂಕಟೇಶ್‌ ಮತ್ತು ತಂಡದಿಂದ ಸುಗಮ ಸಂಗೀತ, ಮಂಡ್ಯದ ಸುನಿತಾ ಎಸ್‌. ಚಿದಂಬರ ನಾಟ್ಯ ಶಾಲೆಯಿಂದ ನೃತ್ಯರೂಪಕ ಇತ್ತು.

ಡಬಲ್‌ ಡೆಕ್ಕರ್‌ ಸೂಪರ್‌ ಹಿಟ್‌

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರವಾಸಿಗರಿಗಾಗಿ ಡಬ್ಬಲ್‌ ಡೆಕ್ಕರ್‌ ಅಂಬಾರಿ ಬಸ್‌ ಸಂಚಾರ ಆರಂಭಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ದಸರೆ ಆರಂಭವಾದ ನಂತರ ಸಂಜೆ ವೇಳೆ ದೀಪಾಲಂಕಾರ ನೋಡಲು ಭಾರಿ ಬೇಡಿಕೆ ಕಂಡು ಬಂದಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ಯಾಕೇಜ್‌ ಟೂರ್‌ಗೆ ಕೂಡ ಉತ್ತಮ ಸ್ಪಂದನೆ ಸಿಕ್ಕಿದೆ.

ದೀಪಾಲಂಕಾರ ನೋಡಲು ಜನದಟ್ಟಣೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ದೀಪಾಲಂಕಾರ ವೀಕ್ಷಣೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಶಾಸಕ ಎಲ್‌. ನಾಗೇಂದ್ರ ಇದ್ದಾರೆ.

ಮೊದಲೆಲ್ಲಾ ದಸರೆಗೆ ಪ್ರವಾಸಿಗರನ್ನು ಸೆಳೆಯಲು ಏನೆಲ್ಲಾ ‘ಸರ್ಕಸ್‌’ ಮಾಡಬೇಕಿತ್ತು. ಈಗ ಅದ್ಯಾವುದು ಬೇಕಿಲ್ಲ. ದಸರೆ ಇದೆ ಎಂದರೇ ಸಾಕು, ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ದಸರೆ ಇಲ್ಲ ಎಂದರೂ ದೀಪಾಲಂಕಾರ ನೋಡಲು ಪ್ರವಾಸಿಗರು ಬಂದಿದ್ದಾರೆ. ಅವರೊಂದಿಗೆ ಸ್ಥಳೀಯರು ಸೇರಿಕೊಂಡು ಸಂಜೆ ವೇಳೆ ಅರಮನೆ ಸುತ್ತಮುತ್ತಲಿನ ರಸ್ತೆಗಳು, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ ಮೊದಲಾದ ಕಡೆ ಟ್ರಾಫಿಕ್‌ ಜಾಮ್‌ ಮಾಡುತ್ತಿದ್ದರು.

ಮೈಸೂರು ದೇಶದ ಪ್ರಮುಖ ಪ್ರವಾಸಿ ಕೇಂದ್ರ. ದಸರೆಯಲ್ಲಿ ಮಾತ್ರವಲ್ಲದೇ ವರ್ಷವಿಡಿ ಕೂಡ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಅದರಲ್ಲೂ ವಾರಾಂತ್ಯಗಳಲ್ಲಿ ಪ್ರವಾಸಿಗರು ಹೆಚ್ಚು.

ಖಾಸಗಿ ದರ್ಬಾರ್‌ ಕೂಡ ಸರಳ

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಖಾಸಗಿ ದರ್ಬಾರ್‌ , ಆಯುಧಪೂಜೆ ಎಂದಿನಂತೆ ಸಾಂಪ್ರದಾಯಿಕವಾಗಿ ನಡೆಸಿದರು. ಆದರೆ ಕೊರೋನಾದಿಂದಾಗಿ ಅಲ್ಲಿ ಕೂಡ ಸರಳತೆಗೆ ಆದ್ಯತೆ ನೀಡಲಾಗಿತ್ತು.

ರಂಗಾಯಣದಲ್ಲಿ ರಂಗೋತ್ಸವ

ರಂಗಾಯಣ ಕೂಡ ನವರಾತ್ರಿ ಸಂದರ್ಭದಲ್ಲಿ ರಂಗೋತ್ಸವ ಏರ್ಪಡಿಸುವ ಮೂಲಕ ರಂಗಾಸಕ್ತರ ಮನತಣಿಸುವ ಕೆಲಸ ಮಾಡಿತು.

ಕನ್ನಡಪ್ರಭ ಸಲಹೆಗಳು

- ಮುಖ್ಯಮಂತ್ರಿಗಳು ಭರವಸೆ ನೀಡಿರುವಂತೆ ಮೈಸೂರನ್ನು ಅಂತಾರಾಷ್ಟ್ರೀಯ ಪ್ರವಾಸಿ ಸರ್ಕೀಟ್‌ನಲ್ಲಿ ಸೇರಿಸಬೇಕು.

- ವಸ್ತು ಪ್ರದರ್ಶನವು ದೆಹಲಿಯ ಪ್ರಗತಿ ಮೈದಾನದ ರೀತಿಯಲ್ಲಿ ವರ್ಷವಿಡಿ ನಡೆಯುವಂತೆ ನೋಡಿಕೊಳ್ಳಬೇಕು

- ದಸರೆ ಬಂದಾಗ ಓಡಾಡುವ ಬದಲು ಬಹುಮುಂಚಿತವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ದೇಶ- ವಿದೇಶಗಳ ಪ್ರವಾಸಿಗರನ್ನು ಸೆಳೆಯಲು ಶಾಶ್ವತ ದಸರಾ ಪ್ರಾಧಿಕಾರ ರಚಿಸಬೇಕು

- ಮೈಸೂರಿಗೆ ಬರುವ ಪ್ರವಾಸಿಗರು ಅದೇ ದಿನ ವಾಪಸ್‌ ಹೋಗದಂತೆ ಇಲ್ಲಿಯೇ ವಾಸ್ತವ್ಯ ಹೂಡುವಂತೆ ಮಾಡಲು ಕಾರ್ಯಕ್ರಮಗಳನ್ನು ರೂಪಿಸಬೇಕು.

ಅರಮನೆ ಆವರಣದಲ್ಲಿ ದಸರಾ ವೀಕ್ಷಣೆಗೆ 500 ಮಂದಿ ಎಂದು ಹೇಳಿ 5000 ಮಂದಿ ಬಿಟ್ಟಿದ್ದಾರೆ. ಇದರಲ್ಲಿ 2,500 ಮಂದಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದ್ದರೆ ಜಿಲ್ಲಾಡಳಿತಕ್ಕೂ ಆದಾಯ ಬರುತ್ತಿತ್ತು. ಪ್ರವಾಸಿಗರನ್ನು ಸೆಳೆಯಲು ಕೂಡ ಅವಕಾಶವಾಗುತ್ತಿತ್ತು. ದೀಪಾಲಂಕಾರ ಅವಧಿ ವಿಸ್ತರಣೆಯಿಂದ ಅನುಕೂಲವಾಗಿದೆ.

- ಬಿ,ಎಸ್‌. ಪ್ರಶಾಂತ್‌, ಅಧ್ಯಕ್ಷರು, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ

ದಸರೆಗೆ ಮೊದಲು ಹೋಟೆಲ್‌ಗಳಲ್ಲಿ ಶೇ.30 ರಷ್ಟುಕೊಠಡಿಗಳು ಕಾಯ್ದಿರಿಸಲಾಗುತ್ತಿತ್ತು. ದಸರೆ ಆರಂಭದ ನಂತರ ಇದು

ಶೇ.60, 65 ರಷ್ಟುತಲುಪಿತು. ಕೊನೆಯ ಎರಡು ದಿನಗಳಂತೂ ಶೇ.90 ರಷ್ಟುಬುಕ್‌ ಆಗಿದ್ದವು. ಜಂಬೂಸವಾರಿ ನಂತರ ಮಳೆ ಬಾರದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

- ಸಿ. ನಾರಾಯಣಗೌಡ, ಅಧ್ಯಕ್ಷರು, ಮೈಸೂರು ಹೋಟೆಲ್‌ ಮಾಲೀಕರ ಸಂಘ

Follow Us:
Download App:
  • android
  • ios