ಮದ್ದೂರು (ಜ.31):  ಪ್ರೇಮ ವೈಫಲ್ಯದಿಂದ ಮನನೊಂದ ಕಾಲೇಜು ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನಗರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.

ಗ್ರಾಮದ ನಾಗಲಿಂಗಯ್ಯ ಮಹಾದೇವಿ ದಂಪತಿ ಪುತ್ರಿ ಸೋನಿಕಾ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೋನಿಕಾ ನಗರಕೆರೆ ಗ್ರಾಮದ ಮಹದೇವು ಪುತ್ರ ಮಂಜಪ್ಪಗೌಡನನ್ನು ಕಳೆದ 1 ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು.

ಶುಕ್ರವಾರ ರಾತ್ರಿ ಸೋನಿಕಾ ಮೊಬೈಲ್‌ಗೆ ಕರೆ ಮಾಡಿದ ಮಂಜಪ್ಪಗೌಡ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಈ ವೇಳೆ ಸೋನಿಕಾ ಹಾಗೂ ಮಂಜಪ್ಪಗೌಡನ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಬೇಸತ್ತ ಸೋನಿಕಾ ತನ್ನ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮನೆಗೆ ಬಾರದ ಗಂಡ : ಇತ್ತ ಕೊನೆಯಾದ ಸುರಸುಂದರಿ ಹೆಂಡತಿ ಬದುಕು ..

ಸೋನಿಕಾ ಶವವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ತರಲಾಗಿತ್ತು ಈ ಮಧ್ಯೆ ಗ್ರಾಮದ ಮುಖಂಡರು ಸೋನಿಕಾ ಮತ್ತು ಮಂಜಪ್ಪಗೌಡನ ಕುಟುಂಬಗಳ ನಡುವೆ ಮಾತುಕತೆ ನಡೆಸಿ ರಾಜಿಸಂಧಾನ ನಡೆಸಿದರು.

ಮೃತ ಸೋನಿಕಾಳ ಕುಟುಂಬಕ್ಕೆ ಪರಿಹಾರ ನೀಡಿದ ನಂತರ ಸೋನಿಕಾ ಆತ್ಮಹತ್ಯೆ ಪ್ರಕರಣ ಸುಖಾಂತ್ಯಗೊಂಡ ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂಬಂಧ ಪೊಲೀಸ್‌ ಯಾವುದೇ ಪ್ರಕರಣ ದಾಖಲಾಗಿಲ್ಲ.