ವರುಣಾ : ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ - ಎದುರಾಳಿ ಜೆಡಿಎಸ್‌ನಿಂದ ಅಭಿಷೇಕ್‌

ವರುಣಾದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ - ಎದುರಾಳಿಯಾಗಿ ಜೆಡಿಎಸ್‌ನಿಂದ ಅಭಿಷೇಕ್‌ 
After a 'break' journey back to 'Varun' snr

 ಅಂಶಿ ಪ್ರಸನ್ನಕುಮಾರ್‌

  ಮೈಸೂರು :  ಮೈಸೂರು, ನಂಜನಗೂಡು ಹಾಗೂ ಟಿ. ನರಸೀಪುರ ತಾಲೂಕುಗಳ ಭಾಗಶಃ ಪ್ರದೇಶಗಳ ‘ತ್ರಿವೇಣಿ ಸಂಗಮ’ವೇ ವರುಣ ಕ್ಷೇತ್ರ.

ಕುಲದೀಪ್‌ಸಿಂಗ್‌ ನೇತೃತ್ವದ ಕ್ಷೇತ್ರ ಪುನರ್‌ವಿಂಗಡಣಾ ವರದಿಯಂತೆ 2008 ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರ ಇದು.

ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿದ್ದ ವರುಣ ಹೋಬಳಿ, ಟಿ. ನರಸೀಪುರ ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ನಂಜನಗೂಡು ತಾಲೂಕಿನ ಬಿಳಿಗೆರೆ ಹಾಗೂ ಚಿಕ್ಕಯ್ಯನ ಛತ್ರ ಹೋಬಳಿ, ಟಿ. ನರಸೀಪುರ ತಾಲೂಕು ಕಸಬಾ ಹೋಬಳಿ, 2008 ರಲ್ಲಿ ರದ್ದಾದ ಸಂತೇಮರಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಕವಲಂದೆ ಹೋಬಳಿಯ ಭಾಗಶಃ ಪ್ರದೇಶಗಳನ್ನು ಒಳಗೊಂಡಂತೆ ಈ ಕ್ಷೇತ್ರ ರಚಿಸಲಾಗಿದೆ. ಸಿದ್ದರಾಮಯ್ಯ ಅವರ ಹುಟ್ಟೂರಾದ ಸಿದ್ದರಾಮನಹುಂಡಿ ಕೂಡ ಇದೇ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ.

ಎರಡು ಬಾರಿ ಸಿದ್ದರಾಮಯ್ಯ ಹಾಗೂ ಒಂದು ಬಾರಿ ಅವರ ಪುತ್ರ ಡಾ.ಎಸ್‌. ಯತೀಂದ್ರ ಪ್ರತಿನಿಧಿಸಿರುವ ಕ್ಷೇತ್ರವಿದು. ಇದರಿಂದಾಗಿಯೇ ಇದು ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಸಿದ್ದರಾಮಯ್ಯ ಮೊದಲ ಬಾರಿ ಗೆದ್ದ ಒಂದು ವರ್ಷದ ನಂತರ ಪ್ರತಿಪಕ್ಷನಾಯಕರಾದರೇ, ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿಯಾದರು. 2018 ರಲ್ಲಿ ಸಿದ್ದರಾಮಯ್ಯ ಅವರು ಈ ಕ್ಷೇತ್ರವನ್ನು ತಮ್ಮ ಪುತ್ರ ಯತೀಂದ್ರ ಅವರಿಗೆ ಬಿಟ್ಟು ಕೊಟ್ಟು, ತಮ್ಮ ಹಳೆಯ ಕ್ಷೇತ್ರ ಚಾಮುಂಡೇಶ್ವರಿಯಿಂದ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆದ್ದಿದ್ದರು.

ವರುಣದಿಂದ ಕಳೆದ ಚುನಾವಣೆಯಲ್ಲಿ ಡಾ.ಎಸ್‌. ಯತೀಂದ್ರ ಆಯ್ಕೆಯಾಗಿದ್ದರು. ಬಿಜೆಪಿಯಿಂದ ತೋಟದಪ್ಪ ಬಸವರಾಜು, ಜೆಡಿಎಸ್‌ನಿಂದ ಎಸ್‌.ಎಂ. ಅಭಿಷೇಕ್‌ ಕಣದಲ್ಲಿದ್ದರು.

ಈ ಬಾರಿ ಸಿದ್ದರಾಮಯ್ಯ ಅವರು ಬಾದಾಮಿ ಬದಲು ಕೋಲಾರದಿಂದ ಕಣಕ್ಕಿಳಿಯಲು ನಿರ್ಧಿರಿಸಿದ್ದರು. ಆದರೆ ಅಲ್ಲಿ ಹವಾಮಾನ ಮುನ್ಸೂಚನೆಯ ಪ್ರಕಾರ ‘ವಾತಾವರಣ’ ಚೆನ್ನಾಗಿಲ್ಲ ಎಂಬ ಕಾರಣದಿಂದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಸಲಹೆ ಮೇರೆಗೆ ತವರು ಕ್ಷೇತ್ರ ‘ವರುಣ’ಗೆ ಮರಳಿ ಬಂದಿದ್ದಾರೆ. ಚುನಾವಣೆ ಘೋಷಣೆಯಾದ ದಿನವೇ ಕ್ಷೇತ್ರದ ಬಿಳುಗಲಿ ಗ್ರಾಮಕ್ಕೆ ಭೇಟಿ ನೀಡಿ, ಇದು ‘ನನ್ನ ಕೊನೆಯ ಚುನಾವಣೆ, ಹುಟ್ಟೂರಿನ ಕ್ಷೇತ್ರದಿಂದಲೇ ಗೆದ್ದು, ನಿವೃತ್ತಿ ಬಯಸಿದ್ದೇನೆ’ ಎಂದು ಭಾವನಾತ್ಮಕವಾಗಿ ಮತದಾರರ ಮನ ಸೆಳೆಯುವ ಕೆಲಸ ಮಾಡಿದ್ದಾರೆ. ‘ನಾನು ಮತ ಕೇಳಲು ಬರಲ್ಲ ಯತೀಂದ್ರ ಬರುತ್ತಾರೆ. ನಾನು ರಾಜ್ಯವನ್ನೆಲ್ಲಾ ಸುತ್ತಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ಮತ್ತೆ ಅಧಿಕಾರ ನಮ್ಮ ಕೈಗೆ ಬರುತ್ತದೆ’ ಎಂದು ಮಾರ್ಮಿಕವಾಗಿ ‘ಇಲ್ಲಿಂದ ಗೆದ್ದರೆ, ಪಕ್ಷ ಬಹುಮತ ಗಳಿಸಿದರೆ ನಾನೇ ಸಿಎಂ’ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಬಿಜೆಪಿಯಲ್ಲಿ ಕಾ.ಪು. ಸಿದ್ದಲಿಂಗಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಕೆ.ಎನ್‌. ಪುಟ್ಟಬುದ್ದಿ ಅವರ ಪುತ್ರ ಶರತ್‌, ಜಿಪಂ ಮಾಜಿ ಸದಸ್ಯರಾದ ಬಿ.ಎನ್‌. ಸದಾನಂದ, ಎ.ಎಂ. ಗುರುಸ್ವಾಮಿ, ಮುಖಂಡರಾದ ತೋಟದಪ್ಪ ಬಸವರಾಜು, ಮಂಡಲ ಅಧ್ಯಕ್ಷ ವಿಜಯಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್‌, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಡಿ. ಮಹೇಂದ್ರ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಹೆಳವರಹುಂಡಿ ಸಿದ್ದಪ್ಪ- ಹೀಗೆ ಹತ್ತು ಹಲವು ಹೆಸರುಗಳು ಪ್ರಸ್ತಾಪವಾಗುತ್ತಿವೆ.

ಆದರೆ ಸಿದ್ದರಾಮಯ್ಯ ಅವರನ್ನು ಸಮರ್ಥವಾಗಿ ಎದುರಿಸಲು ಬಿ.ಎಸ್‌. ಯಡಿಯೂರಪ್ಪ ಅವರ ಕಿರಿಯ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೇ ಕಣಕ್ಕಿಳಿಸಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ. ಈ ಒತ್ತಡಕ್ಕೆ ಮಣಿದಲ್ಲಿ ಸಿದ್ದರಾಮಯ್ಯ ವರ್ಸಸ್‌ ವಿಜಯೇಂದ್ರ ಅವರ ಹೋರಾಟದಿಂದ ಕಣ ರಂಗೇರಲಿದೆ. ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಹಾಕದಿದ್ದಲ್ಲಿ ಸಿದ್ದರಾಮಯ್ಯ ಅವರಿಗೆ ಪರಿಸ್ಥಿತಿ ಸಂಪೂರ್ಣ ಪೂರಕವಾಗಿರುತ್ತದೆ. ಜೆಡಿಎಸ್‌ನಿಂದ ಎಂ.ಎಸ್‌. ಅಭಿಷೇಕ್‌ ಮತ್ತೊಂದು ಪ್ರಯತ್ನದಲ್ಲಿದ್ದಾರೆ.

ಸಿದ್ದರಾಮಯ್ಯ ಅವರು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 1983 ರಿಂದ 2006ರ ಉಪ ಚುನಾವಣೆವರೆಗೆ ಕಾಯಂ ಅಭ್ಯರ್ಥಿ ಎನಿಸಿಕೊಂಡಿದ್ದರು. 1983 ರಲ್ಲಿ ಲೋಕದಳ ಬೆಂಬಲಿತ ಪಕ್ಷೇತರ, 1985 ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಆಯ್ಕೆ, 1989 ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಸೋಲು, 1994 ರಲ್ಲಿ ಜನತಾದಳದ ಟಿಕೆಟ್‌ ಮೇಲೆ ಆಯ್ಕೆ, 1999 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು, 2004 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಆಯ್ಕೆ, 2006ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು.

2006 ಉಪ ಚುನಾವಣೆಯಲ್ಲಿ ಅವರು ಜೆಡಿಎಸ್‌- ಬಿಜೆಪಿ ಹೋರಾಟದ ಎದುರು ಕೇವಲ 257 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಅಲ್ಲಿ ಒಕ್ಕಲಿಗರು ಹಾಗೂ ವೀರಶೈವರು ಪ್ರಾಬಲ್ಯ. ಹೀಗಾಗಿ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಚಾಮುಂಡೇಶ್ವರಿ ತ್ಯಜಿಸಿ, ವರುಣಕ್ಕೆ ಸ್ಥಳಾಂತರವಾಗಿದ್ದರು. ವರುಣದಲ್ಲಿ ವೀರಶೈವರ ಪ್ರಾಬಲ್ಯ ಇದ್ದರೂ ಅಷ್ಟೇ ಪ್ರಮಾಣದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಇದ್ದಾರೆ. ಹೀಗಾಗಿ ಸಿದ್ದರಾಮಯ್ಯ ವರುಣ ಆಯ್ಕೆ ಮಾಡಿಕೊಂಡಿದ್ದರು.

2008 ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಬಿಜೆಪಿಯ ಎಲ್‌. ರೇವಣಸಿದ್ದಯ್ಯ, 2013 ರಲ್ಲಿ ಕೆಜೆಪಿಯ ಕಾ.ಪು. ಸಿದ್ದಲಿಂಗಸ್ವಾಮಿ ಅವರನ್ನು ಸೋಲಿಸಿದರು. 2008 ರಲ್ಲಿ ನಿವೃತ್ತ ಅಧಿಕಾರಿ ಡಾ.ಎಚ್‌.ವಿ. ಕೃಷ್ಣಸ್ವಾಮಿ, 2013 ರಲ್ಲಿ ನಿವೃತ್ತ ಡಿವೈಎಸ್ಪಿ ಚಲುವರಾಜು ಜೆಡಿಎಸ್‌ ಅಭ್ಯರ್ಥಿಗಳಾಗಿದ್ದರು. 2013 ರಲ್ಲಿ ಬಿಜೆಪಿಯಿಂದ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಡಿ. ಮಹೇಂದ್ರ ಸ್ಪರ್ಧಿಸಿದ್ದರು.

-- ಬಾಕ್ಸ್‌---

ಸ್ವಾರಸ್ಯಕರ ಸಂಗತಿಗಳು

- ಈ ಕ್ಷೇತ್ರ ರಚನೆಯಾದ ಮೊದಲ ಅವಧಿಗೆ ಗೆದ್ದ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕ ಪಟ್ಟ, ಎರಡನೇ ಅವಧಿಗೆ ಮುಖ್ಯಮಂತ್ರಿ ಪಟ್ಟವೇ ಒಲಿದು ಬಂದಿತ್ತು.

- 2008 ರಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಎಲ್‌. ರೇವಣಸಿದ್ದಯ್ಯ, ಬಿಎಸ್ಪಿಯ ಗುರುಪಾದಸ್ವಾಮಿ 2013 ರಲ್ಲಿ ಕಾಂಗ್ರೆಸ್‌ ಗೆಲುವಿಗೆ ದುಡಿದರು. ಈಗಲೂ ಗುರುಪಾದಸ್ವಾಮಿ ಕಾಂಗ್ರೆಸ್‌ನಲ್ಲಿದ್ದಾರೆ. ರೇವಣಸಿದ್ದಯ್ಯ ರಾಜಕೀಯದಲ್ಲಿ ಸಕ್ರಿಯರಾಗಿಲ್ಲ.

- 2008 ರಲ್ಲಿ ಈ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ನಿವೃತ್ತ ಅಧಿಕಾರಿ ಡಾ.ಎಚ್‌.ವಿ. ಕೃಷ್ಣಸ್ವಾಮಿ 2013 ರಲ್ಲಿ ಎಚ್‌.ಡಿ. ಕೋಟೆಗೆ ಸ್ಥಳಾಂತರಗೊಂಡು, ಕೆಜೆಪಿ ಅಭ್ಯರ್ಥಿಯಾಗಿದ್ದರು. 2018 ರಲ್ಲಿ ಎಚ್‌.ಡಿ. ಕೋಟೆಯಲ್ಲಿ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಆದರೆ ಸಿಗಲಿಲ್ಲ. ಈ ಬಾರಿಯೂ ಎಚ್‌.ಡಿ. ಕೋಟೆಯ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ.

- 2013 ರಲ್ಲಿ ಜೆಡಿಎಸ್‌ನಿಂದ ನಿವೃತ್ತ ಎಸಿಪಿ ಚಲುವರಾಜ್‌ (ಇತ್ತೀಚೆಗೆ ನಿಧನರಾದರು), ಬಿಜೆಪಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಡಿ. ಮಹೇಂದ್ರ ಸ್ಪರ್ಧಿಸಿ, ಸೋತರು. ಚಾಮರಾಜನಗರದಲ್ಲಿ ಒಮ್ಮೆ ಕಾಂಗ್ರೆಸ್‌, ನಂತರ ಗುಂಡ್ಲುಪೇಟೆ ಮತ್ತಿತರ ಕಡೆ ಸ್ಪರ್ಧಿಸಿದ್ದ ಉಪ್ಪಾರ ಜನಾಂಗದ ಮುಖಂಡ ಜಿ.ಎಂ. ಗಾಡ್ಕರ್‌ 2008 ರಲ್ಲಿ ಇಲ್ಲಿ ಸ್ಪರ್ಧಿಸಿದ್ದರು.

- 2018 ರಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ 22 ದಿನಗಳ ಪ್ರಚಾರದ ನಂತರ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸದೇ ಹಿಂದೆ ಸರಿದಿದ್ದರು.

--

ಮತದಾರರ ವಿವರ

ಒಟ್ಟು- 2,26,480

ಪುರುಷರು- 1,13,363

ಮಹಿಳೆಯರು- 1,13,106

ಇತರರು- 11

ಮತಗಟ್ಟೆಗಳು- 261

2018ರ ಫಲಿತಾಂಶ

ಡಾ.ಎಸ್‌. ಯತೀಂದ್ರ (ಕಾಂಗ್ರೆಸ್‌)- 96,435

ತೋಟದಪ್ಪ ಬಸವರಾಜು (ಬಿಜೆಪಿ)- 37,819

ಅಭಿಷೇಕ್‌ ಎಸ್‌. ಮಣೇಗಾರ್‌ (ಜೆಡಿಎಸ್‌)- 28,123

(ಇದಲ್ಲದೇ 20 ಮಂದಿ ಪಕ್ಷೇತರರು ಕಣದಲ್ಲಿದ್ದರು)

2008- ಸಿದ್ದರಾಮಯ್ಯ (ಕಾಂಗ್ರೆಸ್‌)

2013- ಸಿದ್ದರಾಮಯ್ಯ (ಕಾಂಗ್ರೆಸ್‌)

2018- ಡಾ.ಎಸ್‌. ಯತೀಂದ್ರ (ಕಾಂಗ್ರೆಸ್‌)

Latest Videos
Follow Us:
Download App:
  • android
  • ios