ಗ್ರಾ.ಪಂ.ನಲ್ಲಿ ಸೌಲಭ್ಯ ಪಡೆಯಲು ರೈತರಿಗೆ ಸಲಹೆ
ಗ್ರಾ.ಪಂ.ನಲ್ಲಿ ಸಿಗುವ ಸೌಲಭ್ಯ ಹಾಗೂ ಕೆಲಸ ಕಾರ್ಯ ಮಾಡಿಸಿಕೊಳ್ಳಿ ಎಂದು ಪಿಡಿಒ ತಿಪ್ಪೇಸ್ವಾಮಿ ರೈತರಿಗೆ ಕರೆ ನೀಡಿದರು.
ಗುಬ್ಬಿ: ಗ್ರಾ.ಪಂ.ನಲ್ಲಿ ಸಿಗುವ ಸೌಲಭ್ಯ ಹಾಗೂ ಕೆಲಸ ಕಾರ್ಯ ಮಾಡಿಸಿಕೊಳ್ಳಿ ಎಂದು ಪಿಡಿಒ ತಿಪ್ಪೇಸ್ವಾಮಿ ರೈತರಿಗೆ ಕರೆ ನೀಡಿದರು.
ರೈತರು, ಗ್ರಾಮ ಸಭೆಗಳಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಪಿಡಿಒ ತಿಳಿಸಿದರು.
ಹಾಗಲವಾಡಿ ಶಿವಪುರ ಗ್ರಾ.ಪಂ.ನಲ್ಲಿ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನರೇಗಾ ಯೋಜನೆಯಲ್ಲಿ ಶಾಲಾ ಕಾಪೌಂಡ್, ಆಟದ ಮೈದಾನ, ಒಕ್ಕಣೆ ಕಣ, ಶೌಚಾಲಯ ನಿರ್ಮಾಣ, ವಸತಿ ಯೋಜನೆ ಅನೇಕ ಯೋಜನೆ ರೂಪಿಸಲಾಗಿದೆ.
ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಶೌಚಾಲಯ ಅವಶ್ಯಕತೆ ಇದೆ. ಈಗಾಗಲೇ ಕ್ರೀಯಾ ಯೋಜನೆ ಪಟ್ಟಿ ಕಳುಹಿಸಿದ್ದು, ಶಾಲಾ ಮಕ್ಕಳಿಗೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಮಾತನಾಡಿ, ಗ್ರಾಮ ಸಭೆಗಳಿಗೆ ರೈತರು ಭಾಗವಹಿಸಿದರೆ ಗ್ರಾ.ಪಂ.ಗಳಲ್ಲಿ ಸಿಗುವ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಭೂಮಿ ರಾಜು ಸದಸ್ಯರಾದ ರಾಘವೇಂದ್ರ , ಪ್ರಕಾಶ್ , ಬಸವರಾಜು, ಜಗದೀಶ, ನವೀನ, ಉಮೇಶ್ , ಜಯಲಕ್ಷಮ್ಮ , ರತ್ನಮ್ಮ, ನೋಡಲ್ ಅಧಿಕಾರಿ ನಾಗೇಶ್, ಕಾರ್ಯದರ್ಶಿ ಸಿದ್ದಯ್ಯ ಹಾಗೂ ರೈತರು ಭಾಗವಹಿಸಿದ್ದರು.
7 ಗಂಟೆ ವಿದ್ಯುತ್ ಪೂರೈಸಲು ಸೂಚನೆ
ಶಿರಾ : ಈ ಬಾರಿ ತೀವ್ರ ಬರಗಾಲ ಹಿನ್ನೆಲೆ ಮಳೆ ಆಶ್ರಿತ ಯಾವುದೇ ಬೆಳೆಗಳೂ ಬೆಳೆಯಲಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ಕನಿಷ್ಠ ದಿನನಿತ್ಯ 7 ಗಂಟೆ ವಿದ್ಯುತ್ ಪೂರೈಸಿ, ಈ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಬೇಡ ಎಂದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ತಾ.ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ರೈತರಿಗೆ ಪ್ರತಿದಿನ 7ಗಂಟೆ ವಿದ್ಯುತ್ ಪೂರೈಕೆಗೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ತಾಲೂಕಿನ ಹಲವೆಡೆ ಪ್ರಗತಿಯಲ್ಲಿರುವ ವಿವಿಧ ವಿದ್ಯುತ್ ಉಪಸ್ಥಾವರಗಳ ಕಾಮಗಾರಿಗಳಿಗೆ ವೇಗ ನೀಡಿ ಆದಷ್ಟು ಶೀಘ್ರ ಆರಂಭಿಸುವಂತೆ ಸೂಚಿಸಿದರು.
ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಸೈಯದ್, ಬೆಸ್ಕಾಂ ನಗರ ವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಶಾಂತರಾಜು, ಗ್ರಾಮಾಂತರ ಇಂಜಿನಿಯರ್ ಗೋವಿಂದರಾಯ ಹಾಜರಿದ್ದರು.
ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇಲ್ಲ
ಹೈದರಾಬಾದ್: ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಸಮಸ್ಯೆ ಇಲ್ಲ ಎಂದು ಗುರುವಾರ ಹೇಳಿದ್ದಾರೆ.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ವಹಣೆಗಾಗಿ ರಾಜ್ಯದಲ್ಲಿನ ಕೆಲವು ವಿದ್ಯುತ್ ಘಟಕಗಳನ್ನು ಮುಂಗಾರು ಸಮಯದಲ್ಲಿ ಮುಚ್ಚಲಾಗಿತ್ತು. ಹೀಗಾಗಿ ಅಲ್ಪಕಾಲದ ಪವರ್ ಕಟ್ ಉಂಟಾಗಿತ್ತು. ಆದರೆ ಈ ಕೊರತೆಯನ್ನು ನಾವು ನೀಗಿಸಿದ್ದೇವೆ. ರೈತರು ಬೇಡಿಕೆ ಇಟ್ಟಾಗೆಲ್ಲಾ ನಾವು ಅವರಿಗೆ ವಿದ್ಯುತ್ ಪೂರೈಕೆ ಮಾಡಿದ್ದೇವೆ. ಈಗ ಯಾವುದೇ ದೂರುಗಳಿಲ್ಲ. 5ರಿಂದ 10 ದಿನಗಳ ಕಾಲ ಮಾತ್ರ ವಿದ್ಯುತ್ ಕೊರತೆ ಉಂಟಾಗಿತ್ತು. ಆದರೆ ಅನಾವಶ್ಯಕವಾಗಿ ಈ ಬಗ್ಗೆ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ವಿದ್ಯುತ್ ಕೊರತೆ ನೀಗಿಸಲು ಹೆಚ್ಚಿನ ಘಟಕಗಳ ಸ್ಥಾಪನೆ ಮಾಡಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಮಾಡಿದೆ ಎಂದು ಹೇಳಿದರು.