ಬೆಂಗಳೂರು [ಸೆ.16]:  ತಮ್ಮ ಮನೆ ಅಥವಾ ಕಚೇರಿಯ ಮುಂದಿರುವ ರಸ್ತೆಯ ನಿರ್ವಹಣೆ ಮತ್ತು ಮೇಲುಸ್ತುವಾರಿಯನ್ನು ವಹಿಸಿಕೊಳ್ಳಲು ಮುಂದೆ ಬರುವವರಿಗೆ ಬಿಬಿಎಂಪಿ ‘ಅಡಾಪ್ಟ್‌-ಎ ಸ್ಟ್ರೀಟ್‌’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ.

ನಗರದ ಸ್ವಚ್ಛ ಕಾಪಾಡುವ ಉದ್ದೇಶದಿಂದ ಬಿಬಿಎಂಪಿ ಈ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಸಂಘ-ಸಂಸ್ಥೆಗಳು ಸೇರಿದಂತೆ ವೈಯಕ್ತಿಕವಾಗಿಯೂ ನಗರದ ಯಾವುದಾದರೂ ರಸ್ತೆಯನ್ನು ‘ಅಡಾಪ್ಟ್‌-ಎ ಸ್ಟ್ರೀಟ್‌’ ಹೆಸರಿನಲ್ಲಿ ದತ್ತು ಪಡೆಯಬಹುದಾಗಿದೆ. ದತ್ತು ಪಡೆದ ಸಂಸ್ಥೆ ಆ ರಸ್ತೆಯ ತ್ಯಾಜ್ಯವಿಲೇವಾರಿ, ಗಿಡ, ಬೀದಿ ದೀಪ ನಿರ್ವಹಣೆಯ ಮೇಲುಸ್ತುವಾರಿ ಮಾಡುವುದರ ಜತೆಗೆ ರಸ್ತೆಯನ್ನು ಇನ್ನಷ್ಟುಸ್ಚಚ್ಛ ಸುಂದರ ಗೊಳಿಸುವುದಕ್ಕೆ ಕ್ರಮವಹಿಸಬಹುದಾಗಿದೆ.

ಯಾವುದೇ ಅನುದಾನವಿಲ್ಲ:

ಬಿಬಿಎಂಪಿಯಿಂದ ಸಂಘ-ಸಂಸ್ಥೆಗೆ ಯಾವುದೇ ರೀತಿ ಅನುದಾನ ನೀಡುವುದಿಲ್ಲ. ಆದರೆ ರಸ್ತೆ ನಿರ್ವಹಣೆ ಮಾಡುವುದರಲ್ಲಿ ವಿಫಲವಾದರೆ, ದತ್ತು ನೀಡಿರುವ ರಸ್ತೆಯನ್ನು ಬಿಬಿಎಂಪಿ ವಾಪಾಸ್‌ ಪಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿಯ ವಿಶೇಷ ಆಯುಕ್ತ ಡಿ.ರಂದೀಪ್‌, ನಗರ ಸ್ವಚ್ಛತೆ ಕಾಪಾಡುವುದಕ್ಕೆ ಸಾರ್ವಜನಿಕರು ಬಿಬಿಎಂಪಿಯೊಂದಿಗೆ ಕೈಜೋಡಿಸುವ ಕಾರ್ಯಕ್ರಮ ಇದಾಗಿದೆ. ಬಿಬಿಎಂಪಿಯ ರಸ್ತೆಗಳ ಸಮರ್ಪಕ ನಿರ್ವಹಣೆ ಮತ್ತು ಸ್ವಚ್ಛತೆ ಕಾಪಾಡುವ ಉದ್ದೇಶ ಹೊಂದಿರುವ ಸಂಘ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದು. ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಡಾಪ್ಟ್‌-ಎ ಸ್ಟ್ರೀಟ್‌ಗೆ ಸಂಬಂಧಿಸಿದಂತೆ ಸರಳವಾದ ಅರ್ಜಿ ಪ್ರಕಟ ಪಡಿಸಲಾಗಿದೆ. 

ಪಾಲಿಕೆಯಿಂದ ಸಂಘ ಸಂಸ್ಥೆಗಳಿಗೆ ಹಣ ನೀಡುವುದಿಲ್ಲ. ದತ್ತು ಪಡೆದ ಸಂಘ ಸಂಸ್ಥೆಗಳು ಸ್ವಂತ ಹಣ ವೆಚ್ಚ ಮಾಡಿ ರಸ್ತೆಗೆ ಹೆಚ್ಚಿನ ಸೌಲಭ್ಯ ಒದಗಿಸಿಕೊಳ್ಳಬಹುದು. ರಸ್ತೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸಂಘ- ಸಂಸ್ಥೆ ಹೆಸರು ಹೊರತು ಪಡಿಸಿ ಯಾವುದೇ ರೀತಿಯ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ. ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಸ್ಟ್ರೀಟ್‌ ಅಡಾಪ್ಟ್‌ಗೆ ಮನವಿ ಸಲ್ಲಿಸಿವೆ ಎಂದು ಅವರು  ಮಾಹಿತಿ ನೀಡಿದ್ದಾರೆ.

ದತ್ತು ನೀಡುವ ಮುನ್ನ ಪರೀಕ್ಷೆ:

ಬಿಬಿಎಂಪಿ ರಸ್ತೆಯನ್ನು ದತ್ತು ನೀಡುವ ಮುನ್ನ ಸಂಘ ಸಂಸ್ಥೆಗೆ ಪ್ರಾಯೋಗಿಕವಾಗಿ ರಸ್ತೆ ಸ್ವಚ್ಛತೆ ಮಾಡುವ ಪರೀಕ್ಷೆ ನೀಡಲಿದೆ. ದತ್ತು ಪಡೆಯುವುದಕ್ಕೆ ಆಸಕ್ತಿ ವ್ಯಕ್ತಪಡಿಸಿದ ಸಂಸ್ಥೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ದತ್ತು ನೀಡಲಿದೆ. ಭಾನುವಾರ ಕೋರಮಂಗಲ ಮತ್ತು ಸದಾಶಿವನಗರದಲ್ಲಿ ದತ್ತು ಪಡೆಯುವುದಕ್ಕೆ ಆಸಕ್ತಿ ವ್ಯಕ್ತಪಡಿಸಿದ ಸಂಸ್ಥೆಗಳು ಪ್ರಾಯೋಗಿಕವಾಗಿ ಸ್ವಚ್ಛತಾ ಕಾರ್ಯ ನಡೆಸಿವೆ.

ರಸ್ತೆ ದತ್ತು ಪಡೆದವರ ನಾಲ್ಕು ಪ್ರಮುಖ ಜವಾಬ್ದಾರಿ

1. ದತ್ತು ಪಡೆದ ರಸ್ತೆ ಸ್ವಚ್ಛತೆ

* ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರಿಗೆ ಸಹಕರಿಸುವುದು. ಕನಿಷ್ಠ ತಿಂಗಳಿಗೊಂದು ಬಾರಿ ದತ್ತು ಪಡೆದ ಸಂಸ್ಥೆ ರಸ್ತೆ ಸ್ವಚ್ಛಗೊಳಿಸಬೇಕು.

* ರಸ್ತೆಯಲ್ಲಿ ಬ್ಯಾನರ್‌, ಫ್ಲೆಕ್ಸ್‌, ಒಎಫ್‌ಸಿ ಕೇಬಲ್‌ ಅಳವಡಿಸದಂತೆ ನಿಗಾ ವಹಿಸುವುದು, ತೆರವು ಮಾಡುವುದು ಅಥವಾ ಬಿಬಿಎಂಪಿಗೆ ಮಾಹಿತಿ ನೀಡುವುದು.

* ಕಸದ ಬ್ಲಾಕ್‌ ಸ್ಪಾಟ್‌ ನಿಯಂತ್ರಿಸುವುದು.

2. ರಸ್ತೆ ಹಸಿರೀಕರಣ

* ರಸ್ತೆಯಲ್ಲಿ ನೆಟ್ಟಿರುವ ಗಿಡಗಳ ನಿರ್ವಹಣೆ ಮತ್ತು ಸಂರಕ್ಷಣೆ

* ಹೊಸದಾಗಿ ಗಿಡ ನೆಡುವುದು

* ಒಣಗಿದ ಮರ ಮತ್ತು ಮರದ ಕೊಂಬೆ ತೆರವು ಮಾಡುವುದು ಮತ್ತು ಬಿಬಿಎಂಪಿಗೆ ಮಾಹಿತಿ ನೀಡುವುದು

3. ಪಾದಚಾರಿ ಮಾರ್ಗ ನಿರ್ವಹಣೆ

* ಪಾದಚಾರಿ ಮಾರ್ಗದ ಅಡೆತಡೆ ಸರಿಪಡಿಸುವುದು.

* ರಸ್ತೆಯಲ್ಲಿ ನೀರಿನ ಸೋರಿಕೆ ತಡೆಗಟ್ಟುವುದು ಮತ್ತು ನೀರು, ರಾಜಕಾಲುವೆ ಹರಿದು ಹೋಗುವಂತೆ ಕ್ರಮವಹಿಸುವುದು.

* ಬೀದಿ ದೀಪದ ರಿಪೇರಿ ಬಗ್ಗೆ ಪಾಲಿಕೆಗೆ ಮಾಹಿತಿ ನೀಡುವುದು ಮತ್ತು ರಿಪೇರಿ ಮಾಡಿಸುವುದು.

4. ರಸ್ತೆಗೆ ಮೂಲಸೌಕರ್ಯ ಒದಗಿಸುವುದು

* ರಸ್ತೆಯಲ್ಲಿ ಕಸದ ತೊಟ್ಟಿ ಅಳವಡಿಕೆ, ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬಹುದು.