ಮಳೆ ಅಬ್ಬರಕ್ಕೆ ಸೇತುವೆಯೇ ಕೊಚ್ಚಿಕೊಂಡು ಹೋಯಿತು!
ವರುಣರಾಯನ ಆರ್ಭಟಕ್ಕೆ ಮಲೆನಾಡು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಸಂಪರ್ಕಗಳು ಕಡಿತಗೊಂಡಿವೆ. ಕರೆಂಟಿಲ್ಲ. ನೆಟ್‌ವರ್ಕಿಲ್ಲ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಡೋಡಿ ಸೇತುವೆಯಂತೂ ಕೊಚ್ಚಿಕೊಂಡೇ ಹೋಗಿದೆ. ಶಿವಮೊಗ್ಗ- ಕೊಲ್ಲೂರು ಸಂಪರ್ಕ ಕಡಿತಗೊಂಡಿದೆ.
ನಮ್ಮದು ಮಲೆನಾಡಿನ ಒಂದು ಸಣ್ಣ ಹಳ್ಳಿ. ವಿಶೇಷವೇನಿಲ್ಲ ಈ ಊರಲ್ಲಿ, ಕೊಡಚಾದ್ರಿಯ ತಪ್ಪಲು ಹಾಗೂ ಕೊಲ್ಲೂರಿಗೆ ಸನಿಹ ಎಂಬುದು ಸಣ್ಣ ಹೆಗ್ಗಳಿಕೆ. ಅಂದಾಜು ಇಪ್ಪತ್ತು ಸಾವಿರ ಜನಸಂಖ್ಯೆ ಇದೆ. ಇಲ್ಲಿ ಈ ವರ್ಷದ ಮಳೆ ಭಾರಿ ಮಳೆ. ನಮ್ಮಲ್ಲಿ ಯಾವಾಗಲೂ ಭಾರಿ ಮಳೆಯೆ, ಮೊದಲೂ ಅನೇಕ ಬಾರಿ ಮಳೆಯ ದೃಷ್ಟಿಗೆ ಸಿಲುಕಿ ಅಪಾರ ಬೆಳೆ ಹಾನಿ ಅನುಭವಿಸಿದವರು.
ಪುಣ್ಯಕ್ಕೆ ಭೂಕುಸಿತದಿಂತ ಹಾನಿಗಳು ಕಡಿಮೆ. ಆದರೆ ಈ ವರ್ಷ ಒಂದೇ ವಾರದಲ್ಲಿ ಭಾರಿ ಮಳೆ ಬಿದ್ದದ್ದಕ್ಕೆ ಅಪಾರ ನಷ್ಟವಾಗಿದೆ. ನಿನ್ನೆ ರಾತ್ರಿ ಚಕ್ರಾ ಅಣೇಕಟ್ಟಿನಿಂದ ಬಿಟ್ಟ ನೀರಿನ ಒತ್ತಡಕ್ಕೆ ಸಿಲುಕಿ ಮಡೋಡಿಯಲ್ಲಿ ಕೊಲ್ಲೂರು ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕೊಚ್ಚಿಕೊಂಡು ಹೋಗಿದೆ. ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದಾಗ ನಿರ್ಮಿಸಿದ ಹೊಸ ರಸ್ತೆ ಇದು. ನಂತರ ಚಕ್ರಾ ಅಣೇಕಟ್ಟನ್ನು ಕಟ್ಟಿದಾಗ ಮಳೆಗಾಲದಲ್ಲಿ ನೀರಿನ ರಭಸ ಜಾಸ್ತಿಯಾಯಿತು. ಆಗಲೇ ಅಲ್ಲಿದ್ದ ಸಣ್ಣ ಸೇತುವೆಯನ್ನು ದೊಡ್ಡದಾಗಿ ಮಾಡಬೇಕೆಂಬ ಕೂಗು ಇದ್ದಿತ್ತು.
ಸದ್ಯಕ್ಕೆ ಸಮಸ್ಯೆಯಿಲ್ಲವೆಂಬ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದರ ಕಡೆಗೆ ಗಮನ ಹೋಗಲಿಲ್ಲ. ಈಗ ಸುಮಾರು 60- 80 ಅಡಿ ರಸ್ತೆ ಕೊಚ್ಚಿಕೊಂಡು ಹೋಗಿ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದೆ. ಇದರ ಜೊತೆಯಲ್ಲಿ ನಾಗೋಡಿ ಬಳಿಯಲ್ಲಿ ಇದೇ ರಾಜ್ಯ ಹೆದ್ದಾರಿ ಅರ್ಧ ಕುಸಿದಿದೆ. ಹೋದ ವರ್ಷವೇ ಕುಸಿತ ಆರಂಭವಾಗಿದ್ದು ಇದರ ಬಗ್ಗೆ ರಸ್ತೆ ಇಲಾಖೆ ಕಳೆದ ವರ್ಷವಿಡಿ ಏನೂ ಕ್ರಮ ತೆಗೆದುಕೊಳ್ಳದಿದ್ದುದು ಆ ಇಲಾಖೆಯ ಬೇಜವಾಬ್ದಾರಿ ನಡತೆಗೆ ಸಾಕ್ಷಿ. ಇದಲ್ಲದೆ ಒಳಗಿನ ಹಳ್ಳಿಗಳನ್ನು ಸಂಪರ್ಕಿಸುವ ಸಣ್ಣ ರಸ್ತೆಗಳು ಶಿಥಿಲವಾಗಿವೆ.
ಹೆಚ್ಚಿನವು ಬೈಕು ಸಂಚಾರಕ್ಕಷ್ಟೆ ಯೋಗ್ಯ. ಇನ್ನು ಕರೆಂಟು ಇಲ್ಲದೆ ಒಂದು ವಾರವಾಗಿದೆ, ಇನ್ನೆಷ್ಟು ದಿನ ಗೊತ್ತಿಲ್ಲ. ಹೆಚ್ಚಿನ ಕಡೆಗಳಲ್ಲಿ ಫೋನು ಯಾವತ್ತೂ ಇಲ್ಲದುದರಿಂದ ಎಂದಿನಂತೆ ಜನ ಗುಡ್ಡ ಹತ್ತಿ ತಮ್ಮ ಆಪ್ತರಿಗೆ ತಮ್ಮ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ.
- ಆದಿತ್ಯ ಬೇಳೂರು