ADGP ಅಲೋಕ್‌ಕುಮಾರ್ ವಿರುದ್ಧ ಶಾಸಕ ಅಭಯ್ ಪಾಟೀಲ್, ಪ್ರಮೋದ್ ಮುತಾಲಿಕ್ ಗರಂ!
- ಸಾರ್ವಜನಿಕ ಸ್ಥಳಗಳಲ್ಲಿ ಸಾವರ್ಕರ್ ಭಾವಚಿತ್ರ ಇರಿಸಲು ಸ್ಥಳೀಯ ಸಂಸ್ಥೆಗಳ ಅನುಮತಿ ಅವಶ್ಯಕ
- ಎಡಿಜಿಪಿ ಅಲೋಕ್‌ಕುಮಾರ್ ಹೇಳಿಕೆಗೆ ಬೆಳಗಾವಿಯಲ್ಲಿ ಭುಗಿಲೆದ್ದ ಆಕ್ರೋಶ
- ನಾವೇನು ಅಫ್ಜಲ್‌ಗುರು ಫೋಟೋ ಇಡ್ತಿದ್ದೀವಾ ಎಂದು ಶಾಸಕ ಅಭಯ್ ಪಾಟೀಲ್ ಪ್ರಶ್ನೆ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್ ಬೆಳಗಾವಿ
ಬೆಳಗಾವಿ (ಸೆ.1) : ಕೋವಿಡ್ ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ಮಂಕಾಗಿದ್ದ ಐತಿಹಾಸಿಕ ಗಣೇಶೋತ್ಸವ ಈ ಸಲ ರಂಗು ಪಡೆದಿದೆ. ಈ ಬಾರಿಯ ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೊ ಪ್ರದರ್ಶಿಸಲು ಹಿಂದೂಪರ ಸಂಘಟನೆಗಳು ಪಣತೊಟ್ಟಿವೆ. ಇತ್ತ ಸಾರ್ವಜನಿಕ ಸ್ಥಳಗಳಲ್ಲಿ ಯಾರದೇ ಫೋಟೊ ಪ್ರದರ್ಶಿಸುವ ಮುನ್ನ ಅನುಮತಿ ಕಡ್ಡಾಯವೆಂದು ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar)ಹೇಳಿದ್ರು. ಎಡಿಜಿಪಿ ಹೇಳಿಕೆಗೆ ಬೆಳಗಾವಿ(Belagavi) ಹಿಂದೂ ಸಂಘಟನೆ, ಬಿಜೆಪಿ(BJP) ನಾಯಕರನ್ನು ಕೆರಳಿಸಿದೆ.
ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್‌ಗೆ ಸಂಕಷ್ಟ!
ಕುಂದಾನಗರಿ ಬೆಳಗಾವಿಯ ಗಣೇಶೋತ್ಸವಕ್ಕೆ ಶತಮಾನದ ಇತಿಹಾಸವಿದೆ. 118 ವರ್ಷಗಳಿಂದ ಇಲ್ಲಿ ಗಣೇಶೋತ್ಸವ ನಡೆದುಕೊಂಡು ಬಂದಿದೆ. ಕೋವಿಡ್ ಕಾರಣಕ್ಕೆ ಎರಡು ವರ್ಷಗಳ ಕಾಲ ಗಣೇಶೋತ್ಸವ ಮಂಕಾಗಿತ್ತು. ಈ ಸಲ ಅದ್ಧೂರಿ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಗಣೇಶ ಮಂಡಳಿಗಳಲ್ಲಿ ಸಾವರ್ಕರ್ ಫೋಟೊ ಪ್ರದರ್ಶಿಸಲು ಹಿಂದೂ ಸಂಘಟನೆಗಳು ಪಣ ತೊಟ್ಟಿವೆ. ಈ ನಿರ್ಧಾರವನ್ನು ಯುವ ಬ್ರಿಗೇಡ್, ಬಿಜೆಪಿ ಕೂಡ ಬೆಂಬಲಿಸಿವೆ. ಅಲ್ಲದೇ ಗಣೇಶ ಮಂಡಳಿಗಳಿಗೆ ಸಾವರ್ಕರ್(Savarkar) ಫೋಟೋಗಳನ್ನು ಕೂಡ ವಿತರಿಸಲಾಗಿದೆ. ಇಂದು ರಾಮತೀರ್ಥ ನಗರ(Ramateertha nagar), ಚನ್ನಬಸವೇಶ್ವರ ಬಡಾವಣೆ(Channabasaveshwar badavane)ಯ ಗಣೇಶ ಮಂಡಳಿಯಲ್ಲಿ ಗಣೇಶನ ಜೊತೆ ಸಾವರ್ಕರ್ ಫೋಟೊಗೂ ಪೂಜೆ ಸಲ್ಲಿಸಲಾಗಿದೆ.
ಗಣೇಶೋತ್ಸವ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಎಡಿಜಿಪಿ ಅಲೋಕ್‌ಕುಮಾರ್ ಬೆಳಗಾವಿಗೆ ಭೇಟಿ ನೀಡಿದ್ರು. ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ನಗರದಲ್ಲಿ ಪಥ ಸಂಚಲನ ನೆರವೇರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಡಿಜಿಪಿ ಅಲೋಕ್ ಕುಮಾರ್, ಸಾರ್ವಜನಿಕ ಸ್ಥಳಗಳಲ್ಲಿ ಯಾರದೇ ಫೋಟೊ ಪ್ರದರ್ಶಿಸಲು ಸ್ಥಳೀಯ ಸಂಸ್ಥೆಗಳ ಅನುಮತಿ ಕಡ್ಡಾಯ ಎಂದು ಹೇಳಿದ್ದರು.
ಸಾವರ್ಕರ್ ಸೇರಿದಂತೆ ಯಾವುದೇ ಮಹಾಪುರುಷರ ಫೋಟೋಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಇಡಬೇಕೆಂದರೆ ಸ್ಥಳೀಯ ಸಂಸ್ಥೆಗಳ ಅನುಮತಿ ಕಡ್ಡಾಯ ಎಂಬ ಎಡಿಜಿಪಿ ಅಲೋಕಕುಮಾರ್ ಹೇಳಿಕೆಯಿಂದ ಬೆಳಗಾವಿಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Mutalik), ಶಾಸಕ ಅಭಯ್ ಪಾಟೀಲ(Abhay Patil) ಎಡಿಜಿಪಿ ಹೇಳಿಕೆಗೆ ಕಿಡಿಕಾರಿದ್ದಾರೆ.
ಸಾವರ್ಕರ್ ಭಾವಚಿತ್ರ ಹಾಕಲು ಯಾರ ಅನುಮತಿ ಬೇಕಿಲ್ಲ:
ಸಾರ್ವಜನಿಕ ಸ್ಥಳಗಳಲ್ಲಿ ಫೋಟೋ ಸಾವರ್ಕರ್ ಸೇರಿ ಮಹಾನುಭಾವರ ಫೋಟೋ ಹಾಕಲು ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯಬೇಕೆಂಬ ಎಡಿಜಿಪಿ ಅಲೋಕ್‌ಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್, 'ಸಾವರ್ಕರ್ ಭಾವಚಿತ್ರ ಹಾಕಲು ಯಾರದೇ ಅನುಮತಿ ಬೇಕಿಲ್ಲ. ಬಹುತೇಕ ಅವರಿಗೆ ಬೆಳಗಾವಿ ಇತಿಹಾಸ ಗೊತ್ತಿಲ್ಲ, ಹೀಗಾಗಿ ಆ ರೀತಿ ಹೇಳಿಕೆ ಕೊಟ್ಟಿರಬಹುದು.
1905ರಲ್ಲಿ ಬೆಳಗಾವಿಯಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಮುಖಾಂತರ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಗಿದೆ. 1906ರಿಂದ ಪ್ರತಿ ವರ್ಷ ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರ ಇಡೋದು ಪ್ರಾರಂಭ ಆಗಿದ್ದಿದೆ. ಯಾವ ಪರ್ಮಿಷನ್? ಎಲ್ಲಿಯ ಪರ್ಮಿಷನ್? ಯಾರ ಪರ್ಮಿಷನ್? ಬೇಕು. ಇವರೆಲ್ಲರ ಪರ್ಮಿಷನ್ ಪಡೆದು ಬಾಲಗಂಗಾಧರ ತಿಲಕ್, ಸಾವರ್ಕರ್ ಭಾವಚಿತ್ರ ಇಡಬೇಕಾ? ನಾವು ಅಫ್ಜಲ್ ಗುರು ಭಾವಚಿತ್ರ ಇಡುತ್ತಿದ್ದೀವಾ? ಸ್ವಾತಂತ್ರ್ಯ ಹೋರಾಟದಲ್ಲಿ ಅಗ್ರಗಣ್ಯ ನಾಯಕರಾದ ವೀರ್ ಸಾವರ್ಕರ್, ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರ ಇಡುತ್ತಿದ್ದೇವೆ. ಇವತ್ತು ಯಾರೋ ಒಂದು ಹೇಳಿಕೆ ನೀಡಿದ್ದಕ್ಕೆ ಅದರ ಬಗ್ಗೆ ಚರ್ಚೆ ಆಗುತ್ತಿದೆ.
ಹತ್ತಿಪ್ಪತ್ತು ವರ್ಷದ ಹಿಂದಿನ ಮಂಟಪಗಳ ಫೋಟೋ ತಗೆದುನೋಡಿ. ಲೋಕಮಾನ್ಯ ಬಾಲಗಂಗಾಧರ ತಿಲಕ್, ವೀರ ಸಾವರ್ಕರ್ ಸೇರಿ ಅನೇಕ ಮಹಾನುಭಾವರ ಚಿತ್ರ ಇಡಲಾಗಿದೆ. ಇಷ್ಟು ವರ್ಷ ಪರ್ಮಿಷನ್ ಬೇಕಾಗಿತ್ತಾ? ಇವತ್ತೇಕೆ ಪರ್ಮಿಷನ್ ಬೇಕಾಗಿದೆ. ನಮ್ಮ ಪರಂಪರೆ ಅನುಸಾರ ನಾವು ಮಾಡ್ತೀವಿ. ಅದಕ್ಕೆ ನಮಗೆ ಯಾರ ಪರ್ಮಿಷನ್ ಅವಶ್ಯಕತೆ ಇಲ್ಲ. ಯಾರೋ ಹೇಳಿದ ಬಳಿಕ ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಬೆಳಗಾವಿ ಜನ ಪುಕ್ಕಲು ಜನ ಏನಿಲ್ಲ. ನಾವೇನೂ ಆತಂಕವಾದಿ, ದೇಶವಿರೋಧಿಗಳ ಭಾವಚಿತ್ರ ಹಾಕುತ್ತಿಲ್ಲ. ಯಾವ ಭಾವಚಿತ್ರ ಹಾಕಬೇಕು ಅಂತಾ ನಾವು ಪೆಂಡಾಲ್‌ದವರಿಗೆ ಬಿಟ್ಟಿದ್ದಿವಿ' ಎಂದರು.
ಇನ್ನು ಬೆಳಗಾವಿ ಹಿಂಡಲಗಾ ಜೈಲಿನ ಎದುರು ಸಾವರ್ಕರ್ ಪುತ್ಥಳಿ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿದ ಅಭಯ್ ಪಾಟೀಲ್, 'ಸಾವರ್ಕರ್‌ರಂತಹ ಮಹಾನ್ ವ್ಯಕ್ತಿ ಬೆಳಗಾವಿ ಜೈಲಿನಲ್ಲಿ 100 ದಿನ ಇದ್ರು. ಬೆಳಗಾವಿ ದೃಷ್ಟಿಯಿಂದ ಇದೊಂದು ಐತಿಹಾಸಿಕ. ನ್ಯಾಯಸಮ್ಮತ ಬೇಡಿಕೆ ಇದ್ದು ಅದನ್ನ ಈಡೇರಿಸುವ ಕೆಲಸ ಮಾಡಬೇಕು ಅಂತಾ ಹೇಳ್ತೀವಿ. ಇನ್ನೆರಡು ದಿವಸಗಳಲ್ಲಿ ಬಹುತೇಕ ಎಲ್ಲಾ ಪೆಂಡಾಲ್‌ಗಳಲ್ಲಿ ಸಾವರ್ಕರ್ ಭಾವಚಿತ್ರ ಇಡ್ತಾರೆ. ಗಣಪತಿ ಅಷ್ಟೇ ತಗೊಂಡು ಬನ್ನಿ ಜೊತೆಗೆ ಬರುವ ಇಲಿಗೆ ಪರ್ಮಿಷನ್ ಬೇಕಂದ್ರೆ ಎಲ್ಲಿಯ ನ್ಯಾಯ? ಹಿಂದೂತ್ವ, ಹಿಂದೂ ಧರ್ಮ ಬಗ್ಗೆ ಸ್ವಲ್ಪವಾದರೂ ಜ್ಞಾನ ಇರಬೇಕಲ್ಲ. ಯಾರದೇ ಸರ್ಕಾರ ಇರಲಿ ಇದರ ಬಗ್ಗೆ ನಾನು ನೇರವಾಗಿ ಹೇಳ್ತೀನಿ. ನಮ್ಮ ಬೆಳಗಾವಿಯಲ್ಲಿ ಈ ರೀತಿ ಸಂಸ್ಕೃತಿ ಇದೆ. ಹುಬ್ಬಳ್ಳಿ ಧಾರವಾಡ, ಶಿವಮೊಗ್ಗದಲ್ಲಿ ಬೇರೆ ರೀತಿ ಇರಬಹುದು. ಸ್ಥಳೀಯವಾಗಿ ಅಭ್ಯಾಸ ಮಾಡಿ, ನಮ್ಮ ಪರಂಪರೆ 1905ರಿಂದ ಆರಂಭವಾಗಿದೆ. ಆಯಾ ಭಾಗದ ಪರಂಪರೆ ನೋಡಿ ನೀವು ಹೇಳಿಕೆ ಕೊಡಬೇಕು. ಆಯಾ ಭಾಗದ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡಬೇಕು' ಎಂದು ತಿಳಿಸಿದ್ದಾರೆ.
ಎಡಿಜಿಪಿಯವರೇ ಯಾವ ದೇಶದಲ್ಲಿ ಇದ್ದೀವಿ ನಾವು?
ಎಡಿಜಿಪಿ ಅಲೋಕ್‌ಕುಮಾರ್ ಕ್ಷಮೆಯಾಚನೆಗೆ ಆಗ್ರಹಿಸಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, 'ಎಡಿಜಿಪಿಯವರೇ ಯಾವ ದೇಶದಲ್ಲಿ ಇದ್ದೀವಿ ನಾವು? ಸ್ವಾತಂತ್ರ್ಯ ಸಿಕ್ಕು 75 ವರ್ಷ ಆಯಿತು. ನಮಗೆ ಸ್ವಾತಂತ್ರ್ಯ ಸಿಗಬೇಕಾದ್ರೆ ಲೋಕಮಾನ್ಯ ಬಾಲಗಂಗಾಧರ ತಿಲಕ್, ವೀರ್ ಸಾವರ್ಕರ್‌ರಂತಹ ಹೋರಾಟಗಾರರು ಕಾರಣ ಎಂಬುದು ನಿಮಗೆ ಗೊತ್ತಿಲ್ವಾ? ಎಲ್ಲದಕ್ಕೂ ಪರ್ಮಿಷನ್ ತಗೆದುಕೊಳ್ಳಬೇಕಾ?
Belagavi: ಶಾಸಕ ಅಭಯ್ ಪಾಟೀಲ್ ವಿರುದ್ಧ ಮುಗಿಬಿದ್ದ ಮುಸ್ಲಿಂ ಮುಖಂಡರು!
ಸಾವರ್ಕರ್ ತಮ್ಮ ಆಯುಷ್ಯದಲ್ಲಿ ಅರ್ಧ ಆಯುಷ್ಯ ಜೈಲಿನಲ್ಲಿ ಕಳೆದ ವ್ಯಕ್ತಿ. ಸ್ವಾತಂತ್ರ್ಯದಲ್ಲಿ ಹೋರಾಟ ಮಾಡಿದ ವ್ಯಕ್ತಿಗಾಗಿ ಪರ್ಮಿಷನ್ ತಗೆದುಕೊಳ್ಳಬೇಕಾ ನಾವು. ತಾವು ಕ್ಷಮೆ ಕೇಳಬೇಕು ಅಂತಾ ನಾನು ಹೇಳುತ್ತಿದ್ದೇನೆ. ಈ ರೀತಿ ನಿಮ್ಮ ಹೇಳಿಕೆಯಿಂದ ದೇಶಭಕ್ತಿ, ಸ್ವಾತಂತ್ರ್ಯ, ಸಂವಿಧಾನ ಮೇಲೆ ಪರಿಣಾಮ ಆಗುತ್ತದೆ. ಈ ರೀತಿಯ ನಿಮ್ಮ ಹೇಳಿಕೆ ಸರಿಯಲ್ಲ, ದೇಶಭಕ್ತರಿಗೆ ಅವಮಾನ ಮಾಡ್ತಿದೀರಿ ನೀವು. ಸಾವರ್ಕರ್ ಬಗ್ಗೆ ವಿರೋಧ ಮಾಡ್ತಾರಂದ್ರೆ ಅರ್ಥ ಸಾವರ್ಕರ್ ದೇಶಭಕ್ತಿ ಕಡಿಮೆ ಆಗಿಲ್ಲ,ಆಗೋದೂ ಇಲ್ಲ. ನೀವು ನಿಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು. ಈ ರೀತಿ ಹೇಳಿಕೆ ಎಂದೂ ಕೊಡಲು ಹೋಗಬೇಡಿ.75 ವರ್ಷ ಸ್ವಾತಂತ್ರ್ಯದ ಇತಿಹಾಸದಲ್ಲಿ ಮಹಾಪುರುಷರ ಫೋಟೋ ಹಾಕಿ ದೇಶಭಕ್ತಿ ತೋರಿಸುವ ಕೆಲಸ ಮಾಡ್ತಿದೀವಿ. ಅದಕ್ಕೆ ಕಲ್ಲು ಹಾಕಕ್ಕೋಗಬೇಡಿ, ಇದನ್ನ ಖಂಡಿಸುತ್ತೇನೆ, ವಿರೋಧಿಸುತ್ತಿದ್ದೇನೆ' ಎಂದರು.
ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ; ಮುತಾಲಿಕ್ ಆಗ್ರಹ
ಇನ್ನು ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡಲು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, 'ಕೋವಿಡ್ ಕಾರಣ ಎರಡು ವರ್ಷ ಸಾರ್ವಜನಿಕ ಗಣೇಶೋತ್ಸವ ಆಗಿರಲಿಲ್ಲ. ಈ ವರ್ಷದಿಂದ ಮುಕ್ತವಾದ ಗಣೇಶೋತ್ಸವ ಕಾರ್ಯಕ್ರಮ ನಡೀತಿದೆ. ಸೌಂಡ್ ಸಿಸ್ಟಮ್, ಲೈಟಿಂಗ್‌ನವರಿಗೆ ಯಾವದೇ ರೀತಿಯ ನಿರ್ಬಂಧ ಹಾಕಬಾರದು. ಸೌಂಡ್ ಸಿಸ್ಟಮ್, ಲೈಟಿಂಗ್‌ನವರು ಸಾಲಸೋಲ ಮಾಡಿ ಕಷ್ಟ ಅನುಭವಿಸಿದ್ದಾರೆ.
ಸರ್ಕಾರ, ಪೊಲೀಸ್ ಇಲಾಖೆಗೆ ನಾನು ಹೇಳುತ್ತಿದ್ದೇನೆ. ಈ ಬಾರಿ ಗಣೇಶೋತ್ಸವದಿಂದ ಅವರ ಬದುಕಿಗೆ ಒಂದು ಆಧಾರ ಆಗುತ್ತೆ. ಡಿಜೆ ಹಾಕಬೇಡಿ, ಸೌಂಡ್ ಹಾಕಬೇಡಿ ಅನುಮತಿ ಪಡೆಯಬೇಕು ಅಂತಾ ಕಿರಿಕಿರಿ ಮಾಡಬೇಡಿ. ಸ್ವತಂತ್ರವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡಿ ಅವರ ಹೊಟ್ಟೆ ಮೇಲೆ ಕಲ್ಲು ಹಾಕಬೇಡಿ. ಡಿಜೆ ಸೀಜ್ ಮಾಡ್ತೀವಿ ಅನ್ನೋ ಹೆದರಿಸುವ ಪ್ರಕ್ರಿಯೆ ಮಾಡಬಾರದು. ವರ್ಷಕ್ಕೊಮ್ಮೆ ಡಿಜೆ ಹಾಕಿ ಆನಂದದಿಂದ ಹಬ್ಬದ ಆಚರಣೆ ಮಾಡಿ. ಸುಪ್ರೀಂಕೋರ್ಟ್ ಆಜ್ಞೆ ಬಗ್ಗೆ ನೀವು ಹೇಳುವುದಾದರೆ ಅದೇ ಸುಪ್ರೀಂಕೋರ್ಟ್ ಪ್ರತಿ ದಿವಸ ಮಸೀದಿಗಳಲ್ಲಿ ಐದು ಬಾರಿ ನಮಾಜ್ ಮಾಡೋದು ಎಷ್ಟು ಕಿರಿಕಿರಿ ಆಗ್ತಿದೆ, ಒಂದೇ ಒಂದು ಮಸೀದಿಯ ಮೈಕ್ ಕೆಳಗಿಳಿಸಿ ಸೀಜ್ ಮಾಡಿದ್ದು ತೋರಿಸಿ. ನಿಮ್ಮ ಕಾನೂನು ಹಿಂದೂಗಳಿಗೆ ಮಾತ್ರ ಆಗುತ್ತಾ? ಮುಸ್ಲಿಮರಿಗೆ ಇಲ್ವಾ? ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ಮಾಡಿಕೊಡಿ. ಇಲ್ಲ ಅಂದ್ರೆ ನಾನು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಹೇಳುತ್ತಿದ್ದೇನೆ. ಡಿಜೆಯನ್ನು ಹಚ್ಚಿ ಮೆರವಣಿಗೆ ಮಾಡಿ ಯಾರು ತಡೀತಾರೆ ನೋಡೋಣ. ಅಕಸ್ಮಾತ್ ತಡೆದ್ರೆ ಪೊಲೀಸ್ ಠಾಣೆ ಎದುರು ಗಣೇಶನ ಇಟ್ಟುಕೊಂಡು ಧರಣಿ ಮಾಡಿ' ಎಂದು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.