ಕೊಟ್ಟೂರು(ನ.21): ಕೊಟ್ಟೂರು ಮೂಲಕ ದಿನನಿತ್ಯ ಸಂಚರಿಸುವ ಯಶವಂತಪುರ-ವಿಜಯಪುರ ವಿಶೇಷ ರೈಲಿಗೆ ಈ ಭಾಗದ ಜನರ ತೀವ್ರತರದ ಒತ್ತಡದ ಹಿನ್ನೆಲೆಯಲ್ಲಿ ಹೆಚ್ಚುವರಿ ಎರಡು ವಿಶೇಷ ಬೋಗಿಗಳನ್ನು ಜೋಡಿಸಿಕೊಂಡು ಸಂಚರಿಸುವ ಪ್ರಯಾಣ ಇದೀಗ ಆರಂಭಗೊಂಡಿದೆ.

ವಿಜಯಪುರ-ಯಶವಂತಪುರ ರೈಲು ವಿಜಯಪುರದಿಂದ ಬರುವಾಗಲೇ ಎಲ್ಲ ಬೋಗಿಗಳು ಪ್ರಯಾಣಿಕರಿಂದ ಭರ್ತಿಯಾಗಿ ಕೊಟ್ಟೂರು ಭಾಗದವರು ರೈಲಿನಲ್ಲಿ ಸಂಚರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಈ ಹಿನ್ನಲೆಯಲ್ಲಿ ಇಲ್ಲಿನ ರೈಲ್ವೆ ಹೋರಾಟ ಸಮಿತಿಯವರು ಸಂಸದ ವೈ. ದೇವೆಂದ್ರಪ್ಪ ಮೂಲಕ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬಳಿ ಎರಡು ಸಾಮಾನ್ಯ ಹೆಚ್ಚುವರಿ ಬೋಗಿಗಳನ್ನು ಹಾಲಿ ರೈಲಿಗೆ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೀಗ ರೈಲ್ವೆ ಸಚಿವರು ನೈಋುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಈ ಸಂಬಂಧ ಆದೇಶ ನೀಡಿ ರೈಲಿಗೆ ಎರಡು ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಹೆಚ್ಚುವರಿಯಾಗಿ ಜೋಡಿಸಿರುವ ಎರಡು ಸಾಮಾನ್ಯ ಬೋಗಿಗಳಿರುವ ರೈಲು ಈಗಾಗಲೇ ಆರಂಭಗೊಂಡಿದೆ. ತಾತ್ಕಾಲಿಕವಾಗಿ ವಿಶೇಷವಾಗಿ ಸಂಚಾರಕ್ಕೆ ರೈಲ್ವೆ ಅಧಿಕಾರಿಗಳು ಆರಂಭಿಸಿದ್ದ ಯಶವಂತಪುರ-ವಿಜಯಪುರ ರೈಲು ಇದೀಗ ಅಧಿಕ ಪ್ರಮಾಣದಲ್ಲಿ ವರಮಾನ ಸಂಗ್ರಹ ಹೆಚ್ಚಿಸಿದೆ. ಈ ಕಾರಣಕ್ಕಾಗಿ ತಾತ್ಕಾಲಿಕವಾಗಿ ಪ್ರಾರಂಭಿಸಿದ್ದ ಕೊಟ್ಟೂರು ಮೂಲಕ ಯಶವಂತಪುರ-ವಿಜಯಪುರ ರೈಲು ಮಾರ್ಗದ ಓಡಾಟ ಖಾಯಂ ಆಗಿ ಸಂಚಾರ ಕೈಗೊಳ್ಳುವ ಸೂಚನೆಗಳನ್ನು ಹಿರಿಯ ರೈಲ್ವೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

23 ರಿಂದ 26 ರ ವರೆಗೆ ಸ್ಥಗಿತ

ದಾವಣಗೆರೆ ಮತ್ತು ಹರಿಹರ ರೈಲು ಮಾರ್ಗದಲ್ಲಿ ಕೆಲ ಕಾಮಗಾರಿಗಳು ನಡೆಯುವ ಕಾರಣಕ್ಕಾಗಿ ನವೆಂಬರ್‌ 23 ರಿಂದ 26ರ ವರೆಗೆ ಇದೀಗ ಸಂಚರಿಸುವ ವಿಜಯಪುರ-ಯಶವಂತಪುರ ರೈಲು ಸಂಚಾರವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕೊಟ್ಟೂರು ರೈಲು ನಿಲ್ದಾಣ ರೈಲ್ವೆ ನಿಯಂತ್ರಕರು ಶ್ರೀನಿವಾಸ ಮೂರ್ತಿ ಅವರು, ಈಗಾಗಲೇ ಎರಡು ಹೆಚ್ಚುವರಿ ಬೋಗಿಗಳನ್ನು ಅಳವಡಿಸಿರುವ ವಿಜಯಪುರ-ಯಶವಂತಪುರ ರೈಲು ಒಟ್ಟು ಪ್ರಯಾಣಿಕರಿಂದ ಭರ್ತಿಯಾಗಿ ಸಂಚರಿಸುತ್ತಿದೆ. ಪ್ರಯಾಣಿಕರ ಈ ಸಂಚಾರದ ವರಮಾನ ರೈಲ್ವೆ ಅಧಿಕಾರಿಗಳ ಗಮನ ಸಳೆದಿದ್ದು, ಈ ತೆರನಾದ ವರಮಾನ ನವಂಬರ್‌ 21ರ ವರೆಗೆ ಮುಂದುವರಿದಿದ್ದೆ ಆದರೆ ಸಂಪೂರ್ಣವಾಗಿ ಯಶವಂತಪುರ-ವಿಜಯಪುರ ರೈಲು ಸಂಚಾರವನ್ನು ಮುಂದುವರಿಸಲು ಕ್ರಮ ಕೈಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಿದ್ದಾರೆ.