ಕೊಪ್ಪಳ(ಜ.12): ಕಾವೇರಿ ಹೋರಾಟಕ್ಕೆ ಕರೆದಾಗ ನಾನು ದೂರ ಉಳಿದೆ ಎನ್ನುವ ಆರೋಪ ಕೇಳಿಬಂತು. ಆದರೆ, ಹೋರಾಟದಲ್ಲಿ ಹೋಗಿ ಭಾಷಣ ಹೊಡೆಯುವುದಕ್ಕಿಂತ ಏನಾದರೂ ಮಾಡಬೇಕು ಎಂದಾಗ ತೋಚಿದ್ದೆ ಕೆರೆ ಹೂಳೆತ್ತಬೇಕು ಎಂದು. ಆಗ ಕೊಪ್ಪಳ ಜಿಲ್ಲೆ ತಲ್ಲೂರು ಕೆರೆಯನ್ನು ಆಯ್ಕೆ ಮಾಡಿಕೊಂಡು ಮಾಡಿದ ಕೆಲಸ ನನಗೆ ಈಗ ಬದುಕಿನ ಸಾರ್ಥಕತೆಯಾಗಿದೆ ಎಂದು ನಟ ಯಶ್‌ ಹೇಳಿದ್ದಾರೆ.

ಆನೆಗೊಂದಿ ಉತ್ಸವದಲ್ಲಿ ಶುಕ್ರವಾರ ಕೊಪ್ಪಳ ಜಿಲ್ಲೆಯ ಜನರ ಪರವಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ತಲ್ಲೂರು ಕೆರೆಯ ಹೂಳೆತ್ತಿರುವುದರಿಂದ ಅಲ್ಲಿ ನೀರು ಬಂದಿರುವುದು ಹಾಗೂ ಕೆರೆಯ ನೀರನ್ನು ಜನರು ಬಳಕೆ ಮಾಡಿಕೊಂಡು ನೀರಾವರಿ ಮಾಡಿರುವ ವೀಡಿಯೊಂದವನ್ನು ನೋಡಿ ಭಾವೋದ್ವೇಗಕ್ಕೆ ಒಳಗಾಗಿ ಮತ್ತೊಮ್ಮೆ ಮಾತನಾಡಿದರು. ನನಗೆ ನಿಜಕ್ಕೂ ನನ್ನ ಕಾರ್ಯ ಸಾರ್ಥಕತೆ ನೀಡಿದ ಅನುಭವ ಈಗ ಆಯಿತು. ಕೆರೆಯಲ್ಲಿ ನೀರು ಬಂದಿರುವುದು, ಜನರು ನನಗೆ ಒಳ್ಳೆಯದಾಗಲಿ ಎಂದು ಹರಿಸಿದ್ದು ಖುಷಿಯಾಗುತ್ತದೆ. ಇದನ್ನು ಬಣ್ಣಿಸಲು ಸಾಧ್ಯವಾಗುವುದಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾನು ಹೋರಾಟದಿಂದ ದೂರ ಉಳಿದು ಏನಾದರೂ ಸಮಾಜ ಸೇವೆ ಮಾಡಬೇಕು ಎಂದಾಗ ನನಗೆ ಮಂಡ್ಯದಲ್ಲಿ ಮಾಡಿ, ಮೈಸೂರಲ್ಲಿ ಮಾಡಿ ಎಂದು ಸಲಹೆ ನೀಡಿದರು. ಆದರೆ, ನಾನು ಇದನ್ನು ಒಪ್ಪಲಿಲ್ಲ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಮಾಡೋಣ ಎಂದು ಬರಪೀಡಿತ ಕೊಪ್ಪಳ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡೆ. ಯಾವುದೇ ಜಾತಿ, ಮತ, ಪಂಥದ ಹಂಗಿಲ್ಲದೇ ಮತ್ತು ನನಗೆ ಅದರಿಂದ ಏನಾದರೂ ಅನುಕೂಲವಾಗುತ್ತದೆ ಎನ್ನುವುದನ್ನು ನೋಡದೆ ಕೆರೆ ಹೂಳೆತ್ತುವುದನ್ನು ಕೈಗೆತ್ತಿಕೊಂಡೆ. ಅದಕ್ಕೆ ಎಷ್ಟುಖರ್ಚು ಮಾಡಿದ್ದೇನೆ ಎನ್ನುವುದು ಮುಖ್ಯವಲ್ಲ. ಕೆರೆ ಹೂಳು ತೆಗೆದಿದ್ದರೆ ರೈತರಿಗೆ ಅನುಕೂಲವಾಗಿದೆ ಎನ್ನುವುದೇ ನನಗೆ ಸಂತೋಷ ನೀಡಿದೆ ಎಂದು ತಿಳಿಸಿದರು.

ಇದಾದ ಮೇಲೆ ಕೊಪ್ಪಳ ಜಿಲ್ಲೆಯಲ್ಲಿ ಜಲಕ್ರಾಂತಿಯೇ ಪ್ರಾರಂಭವಾಗಿದೆ. ಅನೇಕ ಕೆರೆಗಳ ಹೂಳೆತ್ತುವ ಕಾರ್ಯವಾಗಿದೆ. ಇದೇ ರೀತಿಯಾಗುತ್ತಲೇ ಇರಲಿ ಮತ್ತು ಇಲ್ಲಿಯ ಬರದ ನಾಡು ಎನ್ನುವ ಹಣೆಪಟ್ಟಿಯಿಂದ ಹೊರಬರಬೇಕು ಎನ್ನುವುದು ನನ್ನ ಮಹದಾಸೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡುವ ಕೆಲಸವೂ ಒಳ್ಳೆಯದೆ ಆಗುತ್ತದೆ ಎನ್ನುವುದಕ್ಕೆ ತಲ್ಲೂರು ಕೆರೆಯೇ ಸಾಕ್ಷಿ. ಇದಾದ ಮೇಲೆ ನನಗೆ ಒಳ್ಳೆಯ ಹೆಸರು ಬಂದಿದೆ, ಸಿನೆಮಾಗಳು ಯಶಸ್ವಿಯಾಗುತ್ತಿವೆ. ನನಗೆ ಮಕ್ಕಳಾಗಿವೆ. ಇದಕ್ಕಿಂತ ಏನು ಬೇಕು ಬದುಕಿನಲ್ಲಿ ಎಂದು ಭಾವಪರವಶರಾದರು.

ಫಿದಾ:

ನಟ ಯಶ್‌ ಸಿನೆಮಾ ಡೈಲಾಗ್‌ ಹೊಡೆಯುತ್ತಿದ್ದಂತೆ ಸೇರಿದ್ದ ಜನಸ್ತೋಮ ಫಿದಾ ಆಯಿತು. ಕಿಕ್ಕಿರಿದು ಸೇರಿದ್ದ ಜನರು ಯಶ್‌ ಬರುತ್ತಿದ್ದಂತೆ ಕೇಕೇ ಹಾಕಿ ಸಂಭ್ರಮಿಸಿದರು. ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಮಾತನಾಡಿ, ಕೊಪ್ಪಳದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ 14 ಕೆರೆಗಳ ಹೂಳೆತ್ತಲಾಗಿದೆ. ಗವಿಸಿದ್ಧೇಶ್ವರ ಶ್ರೀಗಳು ಸಾಥ್‌ ನೀಡಿದ್ದು, ಹಿರೇಹಳ್ಳವನ್ನು ಪುನಶ್ಚೇತನ ಮಾಡಲಾಗಿದೆ. ನಿಮ್ಮ ಪ್ರೇರಣೆಯಿಂದ ಜಿಲ್ಲೆಯಲ್ಲಿ ಜಲ ಕ್ರಾಂತಿಯೇ ಪ್ರಾರಂಭವಾಗಿದೆ ಎಂದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ತಲ್ಲೂರು ಕೆರೆ ಹೂಳೆತ್ತುವ ಮೂಲಕ ಜಲಕ್ರಾಂತಿಗೆ ನಾಂದಿ ಹಾಡಿದ್ದೀರಿ, ನಿಮ್ಮ ಪ್ರಯತ್ನದ ಫಲವಾಗಿ ಕೆರೆಗಳ ಹೂಳೆತ್ತುವ ಕಾರ್ಯ ನಿರಂತರವಾಗಿ ನಡೆದಿದೆ ಎಂದರು.