Asianet Suvarna News Asianet Suvarna News

ಜಿಮ್‌ಗಳಿಂದ ದೂರ ಉಳಿದ ಯುವ ಸಮೂಹ! ದಾಖಲಾಗುವುದಕ್ಕೂ ಹಿಂಜರಿಕೆ

  • ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಹಠಾತ್‌ ಸಾವಿನಿಂದ ಯುವಕರು ಇನ್ನೂ ಚೇತರಿಸಿಕೊಂಡಿಲ್ಲ
  •  ಸದಾಕಾಲ ದೇಹವನ್ನು ಫಿಟ್‌ ಆಗಿಟ್ಟುಕೊಂಡಿದ್ದರೂ ಸಡನ್‌ ಡೆತ್‌ ಆಗಿದ್ದರ ಆಘಾತ ಯುವ ಮನಸ್ಸುಗಳನ್ನು ಗಾಢವಾಗಿ ತಟ್ಟಿದೆ
Actor Puneeth rajkumar sudden death  Young people Stay away from Gym   snr
Author
Bengaluru, First Published Nov 8, 2021, 11:01 AM IST
  • Facebook
  • Twitter
  • Whatsapp

ವರದಿ :  ಮಂಡ್ಯ ಮಂಜುನಾಥ

 ಮಂಡ್ಯ (ನ.08):  ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ (Power star Puneeth Rajkumar) ಹಠಾತ್‌ ಸಾವಿನಿಂದ ಯುವಕರು ಇನ್ನೂ ಚೇತರಿಸಿಕೊಂಡಿಲ್ಲ. ಸದಾಕಾಲ ದೇಹವನ್ನು ಫಿಟ್‌ (Fit) ಆಗಿಟ್ಟುಕೊಂಡಿದ್ದರೂ ಸಡನ್‌ ಡೆತ್‌ ಆಗಿದ್ದರ ಆಘಾತ ಯುವ ಮನಸ್ಸುಗಳನ್ನು ಗಾಢವಾಗಿ ತಟ್ಟಿದೆ. ಇದರಿಂದ ಜಿಮ್‌ನಲ್ಲಿ (Gym) ದೇಹವನ್ನು ದಂಡಿಸಬೇಕೋ ಬೇಡವೋ ಎಂಬ ಗೊಂದಲಕ್ಕೊಳಗಾಗಿ ಜಿಮ್‌ ಪ್ರಾಕ್ಟೀಸ್‌ನಿಂದ ದೂರವೇ ಉಳಿಯಲು ಬಯಸಿದ್ದಾರೆ.

ಪುನೀತ್‌ ಸಾವಿನ ಬಳಿಕ ಜಿಮ್‌ಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹೊಸದಾಗಿ ದಾಖಲಾಗಲು ಬಯಸಿದ್ದವರು ಈಗ ಹಿಂಜಯುತ್ತಿದ್ದಾರೆ. ಆಕರ್ಷಕ ಮೈಕಟ್ಟನ್ನು ಹೊಂದಲು ಬಯಸುವ ಯುವಕರು (Youths) ಜಿಮ್‌ಗಳಿಗೆ ಹೋಗಿ ದೇಹವನ್ನು ದಂಡಿಸುತ್ತಿದ್ದರು. ತಮಗಿಷ್ಟವಾದ ಸ್ಟಾರ್‌ (Star) ನಟರು ಜಿಮ್‌ನಲ್ಲಿ ಮಾಡುತ್ತಿದ್ದ ಕಸರತ್ತನ್ನು ಅನುಸರಿಸುತ್ತಿದ್ದರು. ಅವರಂತೆಯೇ ದೇಹವನ್ನು ದೃಢಕಾಯವಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಿದ್ದರು. ಇದಕ್ಕಾಗಿ ದಿನನಿತ್ಯದ ಹಲವು ಗಂಟೆಗಳನ್ನು ಜಿಮ್‌ನಲ್ಲಿ ದೇಹ ದಂಡಿಸುವುದಕ್ಕೇ ಮೀಸಲಾಗಿಟ್ಟಿದ್ದರು.

ಪುನೀತ್‌ ರಾಜ್‌ಕುಮಾರ್‌ ಸಿನಿಮಾಗಳಲ್ಲಿ (Movie) ಮಾಡುತ್ತಿದ್ದ ಡಾನ್ಸ್‌, ಫೈಟ್‌ ಹಾಗೂ ಜಿಮ್‌ನಲ್ಲಿ ಅವರು ಮಾಡುತ್ತಿದ್ದ ಕಸರತ್ತಿಗೆ ಬಹುಪಾಲು ಯುವಕರು ಮಾರುಹೋಗಿದ್ದರು. ತಾವೂ ಅವರಂತೆಯೇ ಆಗಬೇಕೆಂದು ಅನುಕರಣೆ ಮಾಡುತ್ತಿದ್ದರು. ಈ ಸಮಯದಲ್ಲೇ ಅವರಿಗೆ ಎದುರಾದ ಹಠಾತ್‌ ಸಾವು ಯುವಕರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ.

ದಾಖಲಾತಿ ಇಲ್ಲ:

ಯುವಕರನ್ನು ಆಕರ್ಷಿಸುತ್ತಿದ್ದ ಜಿಮ್‌ಗಳು (Gym) ಈಗ ಖಾಲಿ ಹೊಡೆಯಲಾರಂಭಿಸಿವೆ. ಪುನೀತ್‌ ಸಾವಿನ ನಂತರದಲ್ಲಿ ಹೊಸದಾಗಿ ಯಾರೂ ಜಿಮ್‌ಗಳಿಗೆ ದಾಖಲಾಗುತ್ತಿಲ್ಲ. ಸುಂದರ ದೇಹವನ್ನು ಹೊಂದಲು ಬಯಸಿ ಜಿಮ್‌ಗಳಿಗೆ ದಾಖಲಾಗಿದ್ದವರೂ ನಿತ್ಯದ ಅಭ್ಯಾಸಕ್ಕೆ ಬರುತ್ತಿಲ್ಲ. ಅಭ್ಯಾಸಕ್ಕೆ ಬಂದವರಲ್ಲಿ ಹಲವರು ದೇಹವನ್ನು ಯಾವ ರೀತಿ ದಂಡಿಸಬೇಕು, ಹೆಚ್ಚು ದಂಡಿಸಿದರೆ ಹೃದಯದ ಮೇಲೆ ಎಲ್ಲಿ ಒತ್ತಡ ಬೀಳುವುದೋ ಎಂದು ಹೆದರುತ್ತಿದ್ದಾರೆ. ಹೆಚ್ಚು ಭಾರ ಎತ್ತುವುದಕ್ಕೆ, ಕಷ್ಟದ ಕಸರತ್ತುಗಳನ್ನು ಮಾಡಲು ಬಯಸದೆ ಸಾಮಾನ್ಯ ಕಸರತ್ತು ಮಾಡಿಕೊಂಡು ವಾಪಸಾಗುತ್ತಿದ್ದಾರೆ.

ಬೆಚ್ಚಿ ಬಿದ್ದಿರುವ ಯುವ ಸಮೂಹ:

ದೇಹವನ್ನು ಸಿಕ್ಸ್‌ ಪ್ಯಾಕ್‌ (Six pack) ರಚನೆಯಲ್ಲಿಟ್ಟುಕೊಂಡು ತೋಳುಗಳನ್ನು ಆಕರ್ಷಕವಾಗಿಸಿಕೊಳ್ಳಬೇಕೆಂದು ಬಯಸಿದ್ದವರು ಇದೀಗ ಶರೀರವನ್ನು ಆಸ್ಥಿತಿಗೆ ತರುವುದರಿಂದ ದೂರವೇ ಉಳಿದಿದ್ದಾರೆ. ಅಷ್ಟೆಲ್ಲಾ ಕಸರತ್ತುಗಳನ್ನು ಮಾಡುತ್ತಾ ಇಡೀ ದೇಹವನ್ನು ಹೇಗೆಂದರೆ ಹಾಗೆ ಬಗ್ಗಿಸುತ್ತಾ, ವಿಶಿಷ್ಟ ರೀತಿಯಲ್ಲಿ ಡ್ಯಾನ್ಸ್‌ ಸ್ಟೆಪ್‌ಗಳನ್ನು ಹಾಕುತ್ತಾ ಯುವ ಮನಸ್ಸುಗಳನ್ನು ಸೂರೆಗೊಂಡಿದ್ದ ಪುನೀತ್‌ಗೆ ಎದುರಾದ ಸಡನ್‌ ಡೆತ್‌ ಜಿಮ್‌ನಲ್ಲಿ ಕಸರತ್ತು ಮಾಡುವವರನ್ನು ಬೆಚ್ಚಿ ಬೀಳಿಸಿದೆ.

40 ವರ್ಷ ಮೇಲ್ಪಟ್ಟವರು ದೇಹವನ್ನು ಹೆಚ್ಚು ದಂಡಿಸಬಾರದು, ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಮಾಂಸಖಂಡಗಳು ದಪ್ಪಗಾಗುವುದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಆಕರ್ಷಕ ಮೈಕಟ್ಟನ್ನು ಹೊಂದುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ದೇಹವನ್ನು ಅತೀವವಾಗಿ ದಂಡಿಸದೆ ಒಂದು ಮಿತಿಯೊಳಗೆ ದಂಡಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ವೈದ್ಯರ ಸಲಹೆ ನೀಡಿದ್ದರೂ ಯುವಕರಲ್ಲಿ ಭಯ ದೂರವಾಗಿಲ್ಲ.

ಹೃದಯ ತಪಾಸಣೆಗೆ ಕ್ಯೂ:

ಪುನೀತ್‌ ಹಠಾತ್‌ ಸಾವಿಗೆ ಒಳಗಾದ ಬಳಿಕ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದವರಿಗೆ ದಿಢೀರನೇ ತಮ್ಮ ಹೃದಯದ ಬಗ್ಗೆ ಅನುಮಾನ ಶುರುವಾಗಿ ಪರೀಕ್ಷೆಗೆ ಮುಗಿಬಿದ್ದಿದ್ದಾರೆ. ಜಿಲ್ಲಾಸ್ಪತ್ರೆ ಇಸಿಜಿ ವಿಭಾಗ, ಹೃದ್ರೋಗ ಆಸ್ಪತ್ರೆಗಳಲ್ಲಿ ಯುವಕರು ಇಸಿಜಿ, ಎಕೋ ಪರೀಕ್ಷೆ ಮಾಡಿಸಿಕೊಂಡು ಹೃದಯದ ಆರೋಗ್ಯ ಉತ್ತಮವಾಗಿದೆಯೇ ಎಂದು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.

ಕೆಲವರಿಗೆ ಗ್ಯಾಸ್ಟಿಕ್‌ನಿಂದ ಸಣ್ಣದಾಗಿ ಎದೆನೋವು ಕಾಣಿಸಿಕೊಂಡರೂ ಹೆದರಿಕೆಯಿಂದಲೇ ಆಸ್ಪತ್ರೆಗೆ ಬಂದು ತಪಾಸಣೆಗೊಳಗಾಗುತ್ತಿದ್ದಾರೆ. ದೇಹವನ್ನು ಯಾವ ರೀತಿಯಲ್ಲಿ ದಂಡಿಸಬೇಕು. ಎಷ್ಟುಕಾಲ ಜಿಮ್‌ನಲ್ಲಿ ಪ್ರಾಕ್ಟೀಸ್‌ ಮಾಡಿದರೆ ಒಳ್ಳೆಯದು, ಹೃದಯಕ್ಕೆ ತೊಂದರೆಯಾಗದಂತೆ ಮಾಡಬಹುದಾದ ಕಸರತ್ತುಗಳು ಯಾವುವು.. ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ವೈದ್ಯರ ಮುಂದಿಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜಿಮ್‌ ಟ್ರೈನ​ರ್‍ಸ್ಗಳಿಗೂ ಗೊಂದಲ:

ಪುನೀತ್‌ ಸಾವಿನ ನಂತರ ಜಿಮ್‌ ಟ್ರೈನ​ರ್‍ಸ್ಗಳಿಗೂ ಗೊಂದಲ ಶುರುವಾಗಿದೆ. ಜಿಮ್‌ನಿಂದ ವಿಮುಖರಾಗುತ್ತಿರುವ ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವುದು ಹೇಗೆ, ಯಾವ ಯಾವ ಟಿಫ್ಸ್‌ಗಳನ್ನು ಅವರಿಗೆ ನೀಡಬೇಕು, ಹೃದಯದ ಮೇಲೆ ಒತ್ತಡ ಬೀಳದಂತೆ ಯಾವ ರೀತಿಯ ಕಸರತ್ತುಗಳನ್ನು ಮಾಡಿಸಬೇಕು. ಹೊಸದಾಗಿ ಜಿಮ್‌ ಸೇರುವವರಿಗೆ ನೀಡುವ ತರಬೇತಿ ಹೇಗಿರಬೇಕು. ಒಬ್ಬೊಬ್ಬರ ದೇಹ ಒಂದೊಂದು ರೀತಿಯಲ್ಲಿರುವುದರಿಂದ ಹೃದಯ ತಪಾಸಣೆಗೊಳಪಡಿಸಿ ನಂತರ ಅವರ ದೇಹಾರೋಗ್ಯಕ್ಕೆ ಪೂರಕವಾಗಿ ಕಸರತ್ತುಗಳನ್ನು ಕಲಿಸಬೇಕೆ ಎಂಬೆಲ್ಲಾ ಪ್ರಶ್ನೆಗಳು ಅವರನ್ನು ಕಾಡಲಾರಂಭಿಸಿವೆ.

ಆಕರ್ಷಕ ಮೈಕಟ್ಟು ಹೊಂದಬೇಕೆಂದು ಅತೀವವಾಗಿ ಅಸೆಪಡುವವರು ಜಿಮ್‌ನಲ್ಲಿ ದೇಹವನ್ನು ಅನಿಯಮಿತವಾಗಿ ದಂಡಿಸಿ ಒಮ್ಮೊಮ್ಮೆ ಸ್ಥಳದಲ್ಲೇ ಕುಸಿದು ಬೀಳುತ್ತಿರುವ ನಿದರ್ಶನಗಳೂ ಸಾಕಷ್ಟಿವೆ. ದೇಹಕ್ಕೆ ನಿಯಮಿತವಾದ ಕಸರತ್ತನ್ನು ಕೊಟ್ಟು ಸಮತೋಲನವನ್ನು ಕಾಯ್ದುಕೊಂಡಾಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಆದರೆ, ಬಹುಬೇಗನೆ ಮಾಂಸಖಂಡಗಳು ಗಟ್ಟಿಮುಟ್ಟಾಗಬೇಕು, ಸಿಕ್ಸ್‌ಪ್ಯಾಕ್‌ಗೆ ದೇಹವನ್ನು ಹೊಂದಿಸಬೇಕೆಂಬ ಆಸೆಗೆ ಬಿದ್ದು ಯುವಕರು ಆರಂಭದಲ್ಲೇ ಅತಿಯಾದ ಭಾರ ಎತ್ತುವುದು, ದೇಹವನ್ನು ಅತೀವವಾಗಿ ದಂಡಿಸಲು ಕಷ್ಟವಾದ ಕಸರತ್ತುಗಳನ್ನು ಮಾಡುವುದರಿಂದ ಪ್ರಾಣಕ್ಕೆ ಆಪತ್ತು ನಿಶ್ಚಿತ ಎನ್ನುವುದು ಹಲವು ಜಿಮ್‌ನವರು ಹೇಳುವ ಮಾತು.

ದೇಹಾರೋಗ್ಯ ಕಾಪಾಡಿಕೊಳ್ಳಲು ಬೇಕಾದಷ್ಟು ದಾರಿಗಳಿವೆ. ಯೋಗ, ಧ್ಯಾನದಿಂದಲೂ ಸದೃಢ ಆರೋಗ್ಯ ಹೊಂದಬಹುದು. ಹಾಗಂತ ದೇಹ ದಂಡನೆಗೆ ಜಿಮ್‌ಗೆ ಹೋಗುವುದು ತಪ್ಪಲ್ಲ. ಆದರೆ, ದೇಹವನ್ನು ದಂಡಿಸುವ ಭರದಲ್ಲಿ ಹೆಚ್ಚು ಆಯಾಸ ನೀಡಬಾರದು. ಹೃದಯದ ಮೇಲೆ ಹೆಚ್ಚು ಒತ್ತಡ ಬೀಳದಂತಹ ಕಸರತ್ತುಗಳನ್ನು ಮಾಡಿದರೆ ಯಾವ ತೊಂದರೆಯೂ ಇರುವುದಿಲ್ಲ. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

- ಡಾ.ಎಸ್‌.ಪ್ರಶಾಂತ್‌, ಹೃದ್ರೋಗ ತಜ್ಞರು, ಪ್ರಿಯದರ್ಶಿನಿ ಹಾರ್ಟ್‌ ಸೆಂಟರ್‌

ಪುನೀತ್‌ ಸಾವಿನ ನಂತರ ಜಿಮ್‌ಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹೊಸದಾಗಿ ದಾಖಲಾಗುವುದಕ್ಕೂ ಯುವಕರು ಹೆದರುತ್ತಿದ್ದಾರೆ. ಜಿಮ್‌ನಲ್ಲಿ ಕಸರತ್ತುಗಳನ್ನು ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಪುನೀತ್‌ ಸಾವನ್ನೇ ದೃಷ್ಟಿಯಲ್ಲಿಟ್ಟುಕೊಂಡು ವಿನಾಕಾರಣ ಆತಂಕಕ್ಕೊಳಗಾಗಬಾರದು. ದೇಹಕ್ಕೆ ಪೂರಕವಾಗುವ ಕಸರತ್ತುಗಳನ್ನು ನಡೆಸುತ್ತಾ ಹೃದಯದ ಮೇಲೆ ಒತ್ತಡ ಬೀಳದಂತೆ ಕಸರತ್ತು ನಡೆಸುವುದರಿಂದ ಯಾವ ತೊಂದರೆಯೂ ಇರುವುದಿಲ್ಲ.

- ಮಹೇಶ್‌, ಯೂನಿವರ್ಸಲ್‌ ಜಿಮ್‌

Follow Us:
Download App:
  • android
  • ios