ಶೀಘ್ರ ಜಿಮ್, ಫಿಟ್ನೆಸ್ ಕೇಂದ್ರಕ್ಕೆ ಮಾರ್ಗಸೂಚಿ: ಸಚಿವ ಸುಧಾಕರ್
* ನಟ ಪುನೀತ್ ನಿಧನದ ಬಳಿಕ ಸರ್ಕಾರದಿಂದ ಜಾಗೃತಿ
* ಜೀವನದಲ್ಲಿ ಬಹಳಷ್ಟು ಲವಲವಿಕೆಯಿಂದ ಇರಬೇಕು
* ನಾನೂ ಪುನೀತ್ ಒಂದೇ ಜಿಮ್‌ನಲ್ಲಿ ಅಭ್ಯಾಸ
ಚಿಕ್ಕಬಳ್ಳಾಪುರ(ನ.02): ನಟ ಪುನೀತ್(Puneeth Rajkumar) ಹಠಾತ್ ಹೃದಯಾಘಾತದಿಂದ(Heart Attack) ನಿಧನದ(Death) ಬಳಿಕ ಜಿಮ್, ಫಿಟ್ನೆಸ್ ಕೇಂದ್ರಗಳ ಕಾರ್ಯವೈಖರಿ ಬಗ್ಗೆ ಜಾಗೃತವಾಗಿರುವ ರಾಜ್ಯ ಸರ್ಕಾರ(Government of Karnataka) ಇದೀಗ ಈ ಬಗ್ಗೆ ಮಾರ್ಗಸೂಚಿ ತರಲು ನಿರ್ಧರಿಸಿದೆ.
ಜಿಮ್(Gym) ಫಿಟ್ನೆಸ್ ಕೆಂದ್ರಗಳಲ್ಲಿ(Fitness Center) ಯಾವ ತರಬೇತಿ(Training) ನೀಡುವುದು, ತೊಂದರೆಯಾದ ಸಂದರ್ಭದಲ್ಲಿ ಯಾವ ರೀತಿ ಎಚ್ಚರದಿಂದ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ಯಬಹುದು ಎಂಬಿತ್ಯಾದಿಗಳ ಕುರಿತು ತಜ್ಞರೊಂದಿಗೆ ಸಮಾಲೋಚಿಸಿ ಶೀಘ್ರದಲ್ಲಿಯೇ ಆರೋಗ್ಯ ಇಲಾಖೆಯಿಂದ(Department of Health) ಮಾರ್ಗಸೂಚಿ ಪ್ರಕಟಿಸಲಾಗುವುದೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್(K Sudhakar) ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವನದಲ್ಲಿ ಬಹಳಷ್ಟು ಲವಲವಿಕೆಯಿಂದ ಇರಬೇಕು. ಪುನೀತ್ ನಿಧನದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಜಿಮ್ ಮಾಡಬಹುದಾ, ಮಾಡಬಾರದಾ ಎಂದು ಕೇಳುತ್ತಿದ್ದಾರೆ. ಆದರೆ, ಒಂದೆರಡು ಪ್ರಕರಣದಲ್ಲಿ ಈ ರೀತಿ ಆಗಿರುವುದನ್ನು ನೋಡಿ ಜಿಮ್ ಮಾಡುವುದು ಬೇಡ ಎನ್ನುವುದು ತಪ್ಪು. ಸಂಪೂರ್ಣ ಮಾಹಿತಿಯೊಂದಿಗೆ ನಾನು ತಜ್ಞರಾದ ವಿವೇಕ್ ಜವಳಿ, ದೇವಿಶೆಟ್ಟಿ, ಸಿ.ಎನ್. ಮಂಜುನಾಥ್, ಡಾ.ರಂಗಧಾಮ್ ಮತ್ತಿತರ ತಜ್ಞರೊಂದಿಗೆ ಚರ್ಚೆ ಮಾಡಿದ್ದೇನೆ ಎಂದರು.
ಪುನೀತ್ ನಿಧನದ ಬೆನ್ನಲ್ಲೇ ಕೇರಳ ಸರ್ಕಾರದ ಮಹತ್ವದ ನಿರ್ಧಾರ!
ನಾನೂ ಪುನೀತ್ ಒಂದೇ ಜಿಮ್‌ನಲ್ಲಿ ಅಭ್ಯಾಸ:
ಪುನೀತ್ ರಾಜ್ ಕುಮಾರ್ ಹಾಗೂ ಅವರ ಕುಟುಂಬದೊಂದಿಗೆ ಸಂಪರ್ಕ ಇದೆ. ಇತ್ತೀಚೆಗೆ ಪುನೀತ್ ದಂಪತಿ ನಮ್ಮ ಮನೆಗೆ ಬಂದು ನಾವು ಒಟ್ಟಾಗಿ ಊಟ ಮಾಡಿದ್ದೆವು. 15, 16 ವರ್ಷದಿಂದ ನಾನು, ಪುನೀತ್, ರಾಘವೇಂದ್ರ ರಾಜಕುಮಾರ್(Raghavendra Rajkumar) ಒಂದೇ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದೆವು. ಪುನೀತ್ ಅವರು ದೇಹ ದಂಡಿಸುತ್ತಿದ್ದಂತ ವಿಧಾನ, ಚಟುವಟಿಕೆ, ಓಟ, ನೋಡಲು ಸಂತೋಷವಾಗುತ್ತಿತ್ತು. ಆರೋಗ್ಯದ(Health) ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಒಳ್ಳೆ ಊಟ ಮಾಡುತ್ತಿದ್ದರು. ದುರ್ಗುಣಗಳು ಅವರಲ್ಲಿ ಇರಲಿಲ್ಲ. ಆದರೂ, ವಿಧಿಬರಹ ಇಷ್ಟು ಬೇಗ ಪುನೀತ್ ನಮ್ಮನ್ನು ಅಗಲಿರುವುದು ಬೇಸರದ ವಿಷಯ ಎಂದರು.
ನಿನ್ನೆ ಕೋವಿಡ್‌ಗೆ 2 ಬಲಿ; 2ನೇ ಅಲೆಯಲ್ಲೇ ಕನಿಷ್ಠ
ರಾಜ್ಯದಲ್ಲಿ(Karnataka) ಕೋವಿಡ್-19(Covid19) ದೈನಂದಿನ ಪ್ರಕರಣಗಳಲ್ಲಿ ಭಾರಿ ಇಳಿಕೆ ದಾಖಲಾಗಿದೆ. ಸೋಮವಾರ 188 ಪ್ರಕರಣ ವರದಿಯಾಗಿದ್ದು ಇದು ಕಳೆದ ಹದಿನೇಳು ತಿಂಗಳಲ್ಲಿ ದಾಖಲಾದ ಕನಿಷ್ಠ ಪ್ರಕರಣವಾಗಿದೆ. ಇದೇ ವೇಳೆ ಇಬ್ಬರು ಮೃತರಾಗಿದ್ದು ಎರಡನೇ ಅಲೆ ಪ್ರಾರಂಭಗೊಂಡ ಬಳಿಕ ಒಂದು ದಿನದಲ್ಲಿ ವರದಿಯಾದ ಕನಿಷ್ಠ ಸಾವು ಇದಾಗಿದೆ.
2020ರ ಜೂನ್ 14 ರಂದು 176 ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಹೆಚ್ಚು ಕಡಿಮೆ ಒಂದೂವರೆ ವರ್ಷದ ಅವಧಿಯಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 200ಕ್ಕಿಂತ ಕೆಳಗೆ ಇಳಿದಿರಲಿಲ್ಲ. ಜೂನ್ ತಿಂಗಳ ಕೊನೆಗೆ ಮೊದಲ ಅಲೆ ಸೃಷ್ಟಿಯಾಗಿ ಅಕ್ಟೋಬರ್ ಹೊತ್ತಿಗೆ ಇಳಿಕೆ ಪ್ರವೃತ್ತಿ ಕಂಡುಬಂದಿತ್ತು. 2021ರ ಜನವರಿ, ಫೆಬ್ರವರಿ ಹೊತ್ತಿನಲ್ಲಿ ಕೋವಿಡ್ ಶಾಂತವಾಗಿದ್ದರೂ 300ಕ್ಕಿಂತ ಹೆಚ್ಚು ಪ್ರಕರಣ ವರದಿಯಾಗುತ್ತಿತ್ತು.
ಮಾರ್ಚ್‌ನಲ್ಲಿ ಎರಡನೇ ಅಲೆ ಸೃಷ್ಟಿಯಾಗಿ ಏಪ್ರಿಲ್, ಮೇ ಹೊತ್ತಿಗೆ ರಾಜ್ಯದಲ್ಲಿ ಅಲ್ಲೊಲ ಕಲ್ಲೊಲ ಸೃಷ್ಟಿಯಾಗಿತ್ತು. ದೈನಂದಿನ ಪ್ರಕರಣಗಳು 40 ಸಾವಿರ, 50 ಸಾವಿರ ತಲುಪಿದ್ದು ಒಂದೆಡೆಯಾದರೆ ಪ್ರತಿದಿನ 400-500 ಮಂದಿ ಕೋವಿಡ್‌ನಿಂದ ಸಾವನ್ನಪ್ಪುತ್ತಿದ್ದರು. ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷ ಮೀರಿತ್ತು. ಆದರೆ ಜೂನ್ ಬಳಿಕ ಸೋಂಕಿತರ ಸಂಖ್ಯೆ ಇಳಿಕೆ ಹಾದಿಯಲ್ಲಿ ಸಾಗಿದ್ದು ಸೋಂಕು ಸಾಂಕ್ರಾಮಿಕ ಸ್ವರೂಪ ಪಡೆದುಕೊಂಡ ಬಳಿಕದ ಕನಿಷ್ಠ ಪ್ರಕರಣ ದಾಖಲಾಗಿದೆ.
ಅತಿಯಾದ ಜಿಮ್ ವರ್ಕೌಟ್ ಅಪ್ಪುಗೆ ಮುಳುವಾಯಿತಾ?
ಇದೇ ವೇಳೆ ಮೈಸೂರಿನಲ್ಲಿ ಇಬ್ಬರು ಮೃತರಾಗಿದ್ದು ರಾಜ್ಯದ ಉಳಿದೆಡೆ ಕೋವಿಡ್‌ನಿಂದ ಮೃತಪಟ್ಟಿದ್ದು ವರದಿಯಾಗಿಲ್ಲ. 2021ರ ಮಾಚ್‌ರ್ 21ರಂದು ಸಹ ಇಬ್ಬರು ಮೃತರಾಗಿದ್ದರು. ಸೋಮವಾರ ಒಟ್ಟು 73,924 ಕೋವಿಡ್ ಪರೀಕ್ಷೆ ನಡೆದಿದ್ದು ಶೇ. 0.25ರ ಪಾಸಿಟಿವಿಟಿ ದಾಖಲಾಗಿದೆ. 318 ಮಂದಿ ಚೇತರಿಸಿಕೊಂಡಿದ್ದಾರೆ.
ಲಸಿಕೆ ಅಭಿಯಾನ:
ರಾಜ್ಯದಲ್ಲಿ ಸೋಮವಾರ 98,115 ಮಂದಿ ಕೋವಿಡ್-19ರ ವಿರುದ್ಧ ಲಸಿಕೆ(Vaccine) ಪಡೆದುಕೊಂಡಿದ್ದಾರೆ. ಈವರೆಗೆ ಒಟ್ಟು 6.54 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 4.25 ಕೋಟಿ ಮೊದಲ ಡೋಸ್ ಮತ್ತು 2.29 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಬೆಂಗಳೂರು(Bengaluru) ನಗರದಲ್ಲಿ 95, ಮೈಸೂರು 16, ದಕ್ಷಿಣ ಕನ್ನಡ 12, ಹಾಸನ 11, ಕೊಡಗು ಜಿಲ್ಲೆಯಲ್ಲಿ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆ, ಬೀದರ್, ಚಾಮರಾಜನಗರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಹೊಸ ಪ್ರಕರಣ ವರದಿಯಾಗಿದೆ.
ರಾಜ್ಯದಲ್ಲಿ ಈವರೆಗೆ ಒಟ್ಟು 29.88 ಲಕ್ಷ ಕೋವಿಡ್ ಪ್ರಕರಣ ಪತ್ತೆಯಾಗಿದ್ದು 29.41 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 8,512 ಸಕ್ರಿಯ ಪ್ರಕರಣಗಳಿವೆ. 38,084 ಮಂದಿ ಮರಣವನ್ನಪ್ಪಿದ್ದಾರೆ. 29 ಮಂದಿ ಕೋವಿಡ್ ಸೋಂಕಿತರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ಒಟ್ಟು 5.09 ಕೋಟಿ ಕೋವಿಡ್ ಪರೀಕ್ಷೆ ನಡೆದಿದೆ.