ಬೆಳಗಾವಿ(ಜ.29): ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪ ಮಠದ ನಿಜಗುಣಾನಂದ ಸ್ವಾಮೀಜಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ಬಹುಭಾಷಾ ನಟ ಪ್ರಕಾಶ್‌ ರೈ ಸೇರಿ 15 ಮಂದಿಗೆ ಅಪರಿಚಿತರಿಂದ ಜೀವಬೆದರಿಕೆ ಬಂದಿದೆ. 

ಜೀವಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ನಟ ಪ್ರಕಾಶ್  ರೈ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ ಟ್ವೀಟ್‌ ಮಾಡಿದ್ದಾರೆ. ಗಾಂಧಿಯನ್ನ ಕೊಂದವರೆ.. ಗೌರಿಯನ್ನ ಕೊಂದವರೆ.. ಕೊಲ್ಲಬಲ್ಲರಿ ನನ್ನನ್ನೂ, ನನ್ನಂತ ಇನ್ನೂ ಹಲವರನ್ನೂ  ಆದರೆ ಕೊಲ್ಲಲಾರಿರಿ. ನಮ್ಮ ಮನಃ ಸಾಕ್ಷಿಯನ್ನು.. ನಮ್ಮ ಸಂವಿಧಾನವನ್ನು.. ಎಲ್ಲರನ್ನೊಳಗೊಂಡ ಭಾರತೀಯತೆನ್ನ ನೋಡಿಬಿಡೋಣ ಎಂದು ಹೇಳುವ ಮೂಲಕ ಪೌರತ್ವ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

 

ಬೆದರಿಕೆ ಪತ್ರದಲ್ಲೇನಿದೆ?

ಶ್ರೀ ನಿಜಗುಣಾನಂದ ಸ್ವಾಮಿಗಳೇ, ನಿಮ್ಮನ್ನು ಮತ್ತು ನಿಮ್ಮ ಜೊತೆಗಿರುವ ಧರ್ಮದ್ರೋಹಿಗಳು, ದೇಶ ದ್ರೋಹಿಗಳ ಸಂಹಾರಕ್ಕೆ 2020ರ ಜನವರಿ 29 ರಿಂದ ಮುಹೂರ್ತ ನಿಶ್ಚಯವಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ಧರಾಗಿ. ನೀವು ಮಾತ್ರವಲ್ಲದೆ ಇನ್ನೂ 14 ಮಂದಿಯನ್ನೂ ಅಂತಿಮ ಯಾತ್ರೆಗೂ ಸಿದ್ಧಮಾಡಿ. ಅವರಿಗೆ ನೀವೇ ತಿಳಿಹೇಳಿ ಎಂದು ಎಚ್ಚರಿಸಲಾಗಿದೆ.

 

ಶ್ರೀಗಳಿಗೆ ಬಂದಿರುವ ಪತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಿಡುಮಾಮಿಡಿ ಶ್ರೀ, ಜ್ಞಾನಪ್ರಕಾಶ ಸ್ವಾಮೀಜಿ, ನಟರಾದ ಪ್ರಕಾಶ್‌ ರೈ, ಚೇತನ್‌ ಕುಮಾರ್‌, ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ಕೆ.ಎಸ್‌.ಭಗವಾನ್‌, ಬಿ.ಟಿ.ಲಲಿತಾ ನಾಯ್ಕ, ಸಿಪಿಎಂ ನಾಯಕಿ ಬೃಂದಾ ಕಾರಟ್‌, ಪತ್ರಕರ್ತ ಅಗ್ನಿ ಶ್ರೀಧರ್‌, ಮಾಜಿ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು, ಎಡಪಂಥೀಯರಾದ ಪ್ರೊ.ಮಹೇಶ ಚಂದ್ರಗುರು, ಬಜರಂಗದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್‌, ದುಂಡಿ ಗಣೇಶ್‌(ಯೋಗೇಶ್‌ ಮಾಸ್ಟರ್‌) ಹೆಸರೂ ಇದೆ. ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಎಡಪಂಥೀಯ ಚಿಂತಕರು.

ಬೆದರಿಕೆ ಕರೆಯೂ ಬಂದಿತ್ತು: 

ಎಚ್‌ಡಿಕೆ, ನಿಜಗುಣಾನಂದ ಶ್ರೀ ಸೇರಿ 15 ಜನರಿಗೆ ಜೀವಬೆದರಿಕೆ

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮಾತ್ರವಲ್ಲದೆ, ಮೂಢನಂಬಿಕೆ ವಿರೋಧಿ ಹೋರಾಟದಲ್ಲೂ ನಿಜಗುಣಾನಂದ ಶ್ರೀಗಳು ಮುಂಚೂಣಿಯಲ್ಲಿದ್ದವರು. ಪ್ರಖರ ವಾಗ್ಮಿಯಾಗಿರುವ ಶ್ರೀಗಳ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಕ್ರಾಂತಿಯಕಿಡಿಯನ್ನು ಹೊತ್ತಿಸಿವೆ. ಇವರ ಕೆಲ ಹೇಳಿಕೆಗಳು ಹಿಂದೂಗಳ ವಿರೋಧಕ್ಕೂ ಕಾರಣವಾಗಿತ್ತು. 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಬಳಿಕ ನಿಜಗುಣಾನಂದ ಸ್ವಾಮೀಜಿಗೆ ಗನ್‌ಮ್ಯಾನ್‌ ಒದಗಿಸಲಾಗಿತ್ತು. ಪರಿಸ್ಥಿತಿ ಸುಧಾರಿಸಿದ ಬಳಿಕ ಭದ್ರತೆ ಹಿಂಪಡೆಯಲಾಗಿತ್ತು. ಆದರೆ, ಕೆಲ ತಿಂಗಳ ಹಿಂದೆ ಹಿಂದಷ್ಟೇ ಶ್ರೀಗಳಿಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಬೆದರಿಕೆ ಕರೆ ಬಂದಿತ್ತು.