ಬೆಂಗಳೂರಲ್ಲಿ ಕನ್ನಡ ಕಲಿಸುವ 'ನಗರ ಮೀಟರ್ ಆಟೋ' ಚಾಲಕರನ್ನು ಶ್ಲಾಘಿಸಿದ ನಟ ಚೇತನ್ ಅಹಿಂಸಾ!
ಬೆಂಗಳೂರಿನಲ್ಲಿ ಮೀಟರ್ ಆಟೋಗಳು 'ನಮ್ಮ ಕೋಡ್' ಮೂಲಕ ಪುನರಾರಂಭಗೊಂಡಿವೆ. ಪ್ರಯಾಣಿಕರ ನಂಬಿಕೆ ಗಳಿಸುವುದು ಮತ್ತು ಕನ್ನಡ ಕಲಿಕೆಗೆ ಒತ್ತು ನೀಡುವುದು ಇದರ ಉದ್ದೇಶ. ಚೇತನ್ ಅಹಿಂಸಾ ಈ ಸೇವೆಯನ್ನು ಶ್ಲಾಘಿಸಿದ್ದಾರೆ.
ಬೆಂಗಳೂರು (ನ.01): ಬೆಂಗಳೂರಿನಲ್ಲಿ ಆರಂಭದಲ್ಲಿದ್ದ ಮೀಟರ್ ಹಾಕಿ ಓಡಿಸುವ ಆಟೋಗಳ ಮಾದರಿಯಲ್ಲಿಯೇ ಇದೀಗ ಪುನಃ ನಗರ ಮೀಟರ್ ಆಟೋ ಸಂಚಾರವನ್ನು ಆರಂಭಿಸಲಾಗಿದೆ. ಆದರೆ, ಈ ಆಟೋದಲ್ಲಿ ಕನ್ನಡ ಕಲಿಕೆಗೆ ಕೊಡಲಾಗಿರುವ ಆದ್ಯತೆಯನ್ನು ನೋಡಿದ ಹಲವರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಇದೀಗ ಬೆಂಗಳೂರಿನಲ್ಲಿ ಒಟ್ಟು 10 ಸಾವಿರ ಆಟೋಗಳು ಈ ಹಿಂದೆ ಜಾರಿಯಲ್ಲಿದ್ದ ಮೀಟರ್ ಆಟೋಗಳ ರೀತಿಯಲ್ಲಿ ಪುನಃ ಸಂಚಾರನ್ನು ಆರಂಭಿಸಿವೆ. ಇದನ್ನು ಹೊಸದಾಗಿ ಪುನಃ ಆರಂಭಿಸಲಾಗಿದ್ದು, ಇಲ್ಲಿ ಪ್ರಯಾಣಿಕರ ನಂಬಿಕೆ ಗಳಿಕೆ ಹಾಗೂ ಕನ್ನಡ ಕಲಿಸುವುಕ್ಕೆ ಆದ್ಯತೆ ನೀಡಲಾಗುತ್ತಿವೆ. ನಗರ ಮೀಟರ್ ಆಟೋ ಎಂಬುದು ಇದೀಗ ಬೆಂಗಳೂರಿನಲ್ಲಿ ಟ್ರೆಂಡಿಂಗ್‌ನಲ್ಲಿರುವ ಆಟೋ ಪ್ರಯಾಣವಾಗಿದೆ. ಇನ್ನು ಈ ಆಟೋದಲ್ಲಿ ಪ್ರಯಾಣ ಮಾಡಿದವರು ಮೊಬೈಲ್ ನಂಬನ್‌ನಲ್ಲಿ ಸಂದೇಶವನ್ನು ಕಳಿಸಿ ಬುಕಿಂಗ್ ಮಾಡಬೇಕಿದ್ದು, ಕೆಲವೊಮ್ಮೆ ಯಾವುದಾದರೂ ವಸ್ತುಗಳನ್ನು ಆಟೋದಲ್ಲಿ ಬಿಟ್ಟು ಬಂದರೆ ಅಥವಾ ಆಟೋದಲ್ಲಿ ಕಳೆದು ಹೋದರೆ ಅದನ್ನು ನೇರವಾಗಿ ಮನೆಗೆ ಬಂದು ತಲುಪಿಸಿ ಹೋಗಿರುವ ಉದಾಹರಣೆಗಳಿವೆ.
ಬೆಂಗಳೂರಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಆಟೋ ಚಾಲಕರನ್ನು ಹುಡುಕಿ ನಗರ ಮೀಟರ್ ಆಟೋಗೆ ಟೈಯಪ್ ಮಾಡಿಕೊಳ್ಳಲಾಗಿದೆ. ಈ ಆಟೋಗಳಲ್ಲಿ ಮೀಟರ್ ಎಷ್ಟು ಹಣವನ್ನು ತೋರಿಸುತ್ತದೆಯೋ ಅಷ್ಟೇ ಹಣವನ್ನು ಪಡೆಯಲಾಗುತ್ತದೆ. ಸರ್ಕಾರದ ನಿಯಮಾವಳಿಯಂತೆಯೇ ನಡೆದುಕೊಳ್ಳಲಾಗುತ್ತದೆ. ಇನ್ನು ಯಾರೊಬ್ಬರೂ ಪ್ರಯಾಣಿಕರಿಗೆ ತೊಂದರೆ ಕೊಡುವುದಾಗಲೀ, ಮೀಟರ್ ಮೇಲೆ ಹೆಚ್ಚುವರಿ ಹಣ ಕೇಳುವುದಾಗಲೀ ಮಾಡುವುದಿಲ್ಲ ಎಂದು ಆಟೋ ಡ್ರೈವರ್ ಹೇಳಿಕೊಂಡಿದ್ದಾರೆ. ಇನ್ನು ಆಟೋದಲ್ಲಿ ಕುಳಿತುಕೊಂಡು ಹೋಗುವ ಪ್ರಯಾಣಿಕರಿಗೆ ಕನ್ನಡ ಬಾರದಿದ್ದರೆ ಅವರಿಗೆ ಕನ್ನಡ ಕಲಿಯಲು ಅನುಕೂಲ ಆಗುವಂತಹ ಕೆಲವು ಪ್ರದರ್ಶನಾ ಫಲಕಗಳನ್ನು ತೋರಿಸುವ, ವಿಡಿಯೋ ತೋರಿಸುವ ಮತ್ತು ಆಡಿಯೋವನ್ನು ಕೇಳಿಸಲಾಗುತ್ತದೆ. ಈ ಮೂಲಕ ಬೆಂಗಳೂರಿನಲ್ಲಿರುವ ಅನ್ಯ ಭಾಷಿಕರಿಗೆ ಕನಿಷ್ಠ 4 ಕನ್ನಡ ಪದಗಳನ್ನು ಕಲಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಇದನ್ನೂ ಓದಿ: ಬೆಂಗಳೂರು: ಚಿನ್ನದ ಸರ ವಾಪಸ್ ಕೊಟ್ಟ ಪ್ರಾಮಾಣಿಕ ಆಟೋ ಚಾಲಕ
ನಗರ ಮೀಟರ್ ಆಟೋದಲ್ಲಿ ನಟ ಚೇತನ್ ಅಹಿಂಸಾ ಅವರು ಪ್ರಯಾಣ ಮಾಡಿದ್ದಾರೆ. ಈ ಮೂಲಕ ನಗರ ಮೀಟರ್ ಆಟೋದಲ್ಲಿ ಕುಳಿತುಕೊಂಡು ಚಾಲಕನೊಂದಿಗೆ ಮಾತನಾಡುತ್ತಾ, ಪ್ರಮಾಣಿಕ ಆಟೋ ಸೇವೆಯನ್ನು ಶ್ಲಾಘನೆ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನು ಆಟೋ ಚಾಲಕ ತನ್ನ ವಾಹನದಲ್ಲಿ ಅಳವಡಿಕೆ ಮಾಡಿಕೊಂಡಿರುವ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ನಗರ ಮೀಟರ್ ಆಟೋ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ 'ಕನ್ನಡ ರಾಜ್ಯೋತ್ಸವದ ಶುಭದಿನದಲ್ಲಿ ನಗರ ಮೀಟರ್ ಆಟೋ "ನಮ್ಮ ಕೋಡ್"ನ್ನು ಪ್ರಸ್ತುತಪಡಿಸುತ್ತಿದೆ. "ನಮ್ಮ ಕೋಡ್" ಅನ್ನು ಉದ್ಘಾಟಿಸಿದ ಚೇತನ್ ಅಹಿಂಸಾ ಅವರಿಗೆ ಮತ್ತು ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದಗಳು. ನಮ್ಮ ಕೋಡ್ ಅಂದರೆ ಏನು? ಬೆಂಗಳೂರು ನಗರದಲ್ಲಿ ಮೀಟರ್ ಆಧಾರಿತ ಆಟೋ ಸೇವೆ ಪಡೆಯಲು ವೃತ್ತಿಪರ ಚಾಲಕರು ರಚಿಸಿರುವ ವ್ಯವಸ್ಥೆಯೇ "ನಮ್ಮ ಕೋಡ್". ಈ ಕೋಡನ್ನು ಸುಲಭವಾಗಿ ವಾಟ್ಸಪ್ ಮೂಲಕ "Hi" ಎಂದು 9620020042 ಗೆ ಸಂದೇಶ ಕಳಿಸಿ ಪಡೆಯಬಹುದು.
ಇದನ್ನೂ ಓದಿ: Auto Kannadiga: ಪ್ರಯಾಣ ಮಾಡೋವಾಗ್ಲೆ ಕನ್ನಡ ಕಲಿಸುವ ಆಟೋ ಡ್ರೈವರ್ ಐಡಿಯಾಗೆ ನೆಟ್ಟಿಗರ ಮೆಚ್ಚುಗೆ
ಮೆಟ್ರೋದಿಂದ ಹೊರ ಬರುತ್ತಿದ್ದಂತೆಯೇ ನಗರ ಆಟೋದಲ್ಲಿ ಕುಳಿತು, ಚಾಲಕನಿಗೆ "ನಮ್ಮ ಕೋಡ್" ತಿಳಿಸಿ ಮೀಟರ್ ದರದಲ್ಲಿ ಸುಗಮವಾಗಿ ಪ್ರಯಾಣ ಮಾಡಬಹುದು. ಈ ವ್ಯವಸ್ಥೆಯು ಸದ್ಯ ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ ಹಾಗೂ ಹೊಸಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಈ ಸೌಲಭ್ಯವು ಎಲ್ಲಾ ಮೆಟ್ರೋ ಸ್ಟೇಷನ್ಗಳಲ್ಲಿಯೂ ಸುಲಭವಾಗಿ ದೊರೆಯುತ್ತದೆ' ಎಂದು ಆಟೋದಲ್ಲಿ ಪ್ರಯಾಣ ಮಾಡುವ ಬಗ್ಗೆ ತಿಳಿಸಿದ್ದಾರೆ.