ಗ್ರೀನ್ ಝೋನ್ ಆಗುವತ್ತ ದಿಟ್ಟ ಹೆಜ್ಜೆಯಿಡುತ್ತಿದ್ದ ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಮತ್ತೆ ದಿನದಿಂದ ದಿನಕ್ಕೆ ಹೆಚ್ಚಾಗಲಾರಂಭಿಸಿದೆ. ಸದ್ಯ ದಾವಣಗೆರೆಯಲ್ಲಿ 38 ಸಕ್ರಿಯ ಕೋವಿಡ್ 19 ಪ್ರಕರಣಗಳಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ದಾವಣಗೆರೆ(ಜೂ.23): ರಾಜನಹಳ್ಳಿಯಲ್ಲಿ 3, ಹರಿಹರದಲ್ಲಿ 6 ಸೇರಿ ಒಟ್ಟು 9 ಕೊರೋನಾ ಪಾಸಿಟಿವ್‌ ಪ್ರಕರಣ ಸೋಮವಾರ ಜಿಲ್ಲೆಯಲ್ಲಿ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ, ರಾಜನಹಳ್ಳಿಯ 12 ವರ್ಷದ ಬಾಲಕಿ (ಪಿ-9216), 55 ವರ್ಷದ ಮಹಿಳೆ (9217), 7 ವರ್ಷದ ಬಾಲಕಿ (9218), 50 ವರ್ಷದ ಪುರುಷ(9219), 40 ವರ್ಷದ ಮಹಿಳೆ(9220), 8 ವರ್ಷದ ಬಾಲಕಿ(9221), 16 ವರ್ಷದ ಬಾಲಕಿ(9222), 70 ವರ್ಷದ ಪುರುಷ(9223) ಸೋಂಕಿಗೆ ತುತ್ತಾಗಿದ್ದು, 24 ವರ್ಷದ ಮಹಿಳೆ(9224) ಈ ಎಲ್ಲರೂ 18 ವರ್ಷದ ಬಾಣಂತಿ(ಪಿ-8065) ಸಂಪರ್ಕಿತರು ಎಂದರು.

ಸದ್ಯಕ್ಕೆ ಇಂದಿನ ಪ್ರಕರಣ ಸೇರಿದಂತೆ ಒಟ್ಟು 38 ಸಕ್ರಿಯ ಕೇಸ್‌ಗಳು ಜಿಲ್ಲೆಯಲ್ಲಿವೆ. ಸೋಮವಾರ ದೃಢಪಟ್ಟ 9 ಪಾಸಿಟಿವ್‌ ಕೇಸ್‌ಗಳ ಪೈಕಿ ಹರಿಹರದ ಅಗಸರ ಬೀದಿಯ ಒಬ್ಬ ಗರ್ಭಿಣಿ ಇದ್ದು, ಎಎನ್‌ಸಿ ಪರೀಕ್ಷೆಗೆ ಬಂದಾಗ ಕೊರೋನಾ ಇರುವುದು ದೃಢಪಟ್ಟಿದೆ. ಗರ್ಭಿಣಿ ಕುಟುಂಬದವರ ಸ್ವಾಬ್‌ ಟೆಸ್ಟ್‌ ಮಾಡಿಸಿದಾಗ ಆ ಎಲ್ಲರಿಗೂ ಸೋಂಕು ದೃಢಪಟ್ಟಿದೆ, ಈ ಎಲ್ಲರ ಸೋಂಕಿನ ಮೂಲ ಪತ್ತೆ ಮಾಡಿದ್ದು, ಪ್ರಾಥಮಿಕ ವರದಿ ಪ್ರಕಾರ ದಾವಣಗೆರೆಯ ಬಾಷಾ ನಗರ, ಜಾಲಿ ನಗರಕ್ಕೆ ಬಂದು ಹೋಗುತ್ತಿದ್ದರು ಎಂಬ ವಿಚಾರ ಗೊತ್ತಾಗಿದೆ. ಸೋಂಕಿತರ ಮನೆ ಪ್ರದೇಶ ಕಂಟೈನ್‌ಮೆಂಟ್‌ ವಲಯವಾಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಚನ್ನಗಿರಿಯಲ್ಲಿ 2 ಕಂಟೈನ್‌ಮೆಂಟ್‌

ಚನ್ನಗಿರಿ ಪಟ್ಟಣದ ಗೌಡರ ಬೀದಿ ಹಾಗೂ ಕುಂಬಾರ ಬೀದಿಗಳಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ವರದಿಯಾದ ಹಿನ್ನೆಲೆಯಲ್ಲೂ ಎರಡೂ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವಾಗಿ ಘೋಷಣೆ ಮಾಡಲಾಗಿದೆ ಎಂದರು.

ಕೊರೋನಾ ನಡುವೆ ಸದ್ದಿಲ್ಲದೇ ಹರಡುತ್ತಿದೆ ಡೆಂಘೀ: ಮಾರಣಹೋಮ ಆರಂಭ!

ಹೃದ್ರೋಗವಿದ್ದ 18ರ ಸೋಂಕಿತ ಯುವತಿಗೆ ಚಿಕಿತ್ಸೆ ನೀಡಿ, ಗುಣಪಡಿಸಿದೆ. ಒಂದೇ ಕಿಡ್ನಿ ಹೊಂದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ 65 ವರ್ಷದ ಸೋಂಕಿತ ಮಹಿಳೆ ಗುಣಮುಖವಾಗಿದ್ದಾರೆ. ಕಾಲಲ್ಲಿ ಗ್ಯಾಂಗ್ರಿನ್‌ ಆಗಿದ್ದ 69 ವರ್ಷದ ವೃದ್ಧನಿಗೆ ಕೊರೋನಾದಿಂದ ಗುಣಪಡಿಸಿ, ಹುಬ್ಬಳ್ಳಿ ಆಸ್ಪತ್ರೆಗೆ ಕಳಿಸಿ, ಗ್ಯಾಂಗ್ರಿನ್‌ ತೆಗೆಸಲಾಗಿದೆ. ಹೈಪರ್‌ ಟೆನ್ಷನ್‌, ಹೃದ್ರೋಗದ 68 ವರ್ಷದ ವೃದ್ಧೆ, ಸೈಕೋಸಿಸ್‌ ಕಾಯಿಲೆಗೆ ತುತ್ತಾಗಿದ್ದ 26 ವರ್ಷದ ಯುವತಿ, ಗಂಭೀರ ನ್ಯುಮೋನಿಯಾ, ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿದ್ದ 73ರ ವೃದ್ಧೆಗೆ ಗುಣಪಡಿಸಿದೆ. ಅತ್ಯಂತ ಗಂಭೀರ ಸ್ಥಿತಿ ಹೊಂದಿದ್ದ 64 ರ್ಷದ ಆರೋಗ್ಯ ಕಾರ್ಯಕರ್ತರನ್ನು ಹೈಫ್ಲೋ ನೇಸಲ್‌ ಆಕ್ಸಿಜನ್‌ ಕೊಟ್ಟು ಗುಣಮುಖರಾಗಿಸಿದೆ. ಹೀಗೆ ಅನೇಕ ತೀವ್ರತರ ಕಾಯಿಲೆಗೆ ತುತ್ತಾಗಿದ್ದ ಸೋಂಕಿತರಿಗೆ ಗುಣಪಡಿಸಲಾಗಿದೆ ಎಂದು ತಿಳಿಸಿದರು.

ಡಿನೋಟಿಫೈ ಆದ ಝೋನ್‌ನಲ್ಲಿ ನಿರಂತರ ಸಕ್ರಿಯ ಸರ್ವೆಲೆನ್ಸ್‌ ಕಾರ್ಯ ಸಾಗಿದೆ. ಹೊಸ ಕಂಟೈನ್‌ಮೆಂಟ್‌ ಝೋನ್‌ಗಳ ಜನರ ಸ್ವಾಬ್‌ ಪರೀಕ್ಷೆ , ಸೋಂಕಿತರ ಮೂಲ ಪತ್ತೆ ಕಾರ್ಯ ಸಾಗಿದೆ. ಐಎಲ್‌ಐ, ಎಸ್‌ಎಆರ್‌ಐ ವ್ಯಾಪಕ ಪರೀಕ್ಷೆ ನಡೆಸಲಾಗುತ್ತಿದೆ. ಬಿಎಲ್‌ಓಗಳ ಮೂಲಕ ಸರ್ವೇ ಸಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳು, ಏರಿಯಾ ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತೆಯರ ಸರಪಳಿ ಮೂಲಕ ಸ್ವಾಬ್‌ ಸಂಗ್ರಹಿಸಲಾಗುತ್ತಿದೆ. ಹೊನ್ನಾಳಿ, ಚನ್ನಗಿರಿ ಕೊಳಗೇರಿಗಳಲ್ಲಿ ಸ್ವಾಬ್‌ ಸಂಗ್ರಹಿಸಿದ್ದೇವೆ ಎಂದು ಬೀಳಗಿ ಹೇಳಿದರು. ಜಿಲ್ಲಾ ಪೊಲೀಸ್‌ ವರಿಷ್ಟಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಡಿಎಚ್‌ಓ ಡಾ.ರಾಘವೇಂದ್ರ ಸ್ವಾಮಿ, ಡಿಎಸ್‌ ಡಾ.ನಾಗರಾಜ, ಡಿಎಸ್‌ಓ ಡಾ.ರಾಘವನ್‌ ಇದ್ದರು.