Asianet Suvarna News Asianet Suvarna News

ಇನ್ನು ನಕಲಿ ನಂಬರ್‌ ಪ್ಲೇಟ್‌ಗಳ ಬೇಟೆ; ದಂಡ ಕಟ್ಟಲು ಬಂದಾಗ ಹಲವು ನಕಲಿ ನಂಬರ್‌ ಪ್ಲೇಟ್‌ಗಳು ಪತ್ತೆ: ಸಲೀಂ

ನಕಲಿ ನಂಬರ್‌ ಪ್ಲೇಟ್‌ ವಿರುದ್ಧ ಪ್ರತ್ಯೇಕ ಪ್ರಕರಣ ಕೈಗೊಳ್ಳುವುದಾಗಿ ಎಂ.ಎ. ಸಲೀಂ ಹೇಳಿದ್ದಾರೆ. ದಂಡ ಕಟ್ಟಲು ಬಂದಾಗ ನಕಲಿ ಪ್ಲೇಟ್‌ಗಳು ಪತ್ತೆಯಾಗಿದ್ದು, ಈವರೆಗೆ 300 ಕೇಸ್‌ ವರದಿಯಾಗಿದೆ ಎಂದು ತಿಳಿಸಿದ್ದಾರೆ. 

action will be taken against fake number plates bengaluru traffic police special  commissioner m a saleem ash
Author
First Published Feb 9, 2023, 9:29 AM IST

ಕನ್ನಡಪ್ರಭ ವಾರ್ತೆ ಬೆಂಗಳೂರು: ಹಳೇ ಪ್ರಕರಣಗಳ ದಂಡ ಪಾವತಿ ವೇಳೆ ಬಯಲಾಗಿರುವ ‘ನಕಲಿ ನಂಬರ್‌ ಪ್ಲೇಟ್‌’ದಾರರ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ವಿಶೇಷ ಪೊಲೀಸ್‌ ಆಯುಕ್ತ (ಸಂಚಾರ) ಡಾ ಎಂ.ಸಲೀಂ ಸೂಚಿಸಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಸಲೀಂ ಅವರು, ನಕಲಿ ನಂಬರ್‌ ಬಳಸಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲಾಗುತ್ತದೆ. ಸಂಚಾರ ಉಲ್ಲಂಘನೆ ಪ್ರಕರಣಗಳ ಸಂಬಂಧ ದಂಡ ಪಾವತಿ ವೇಳೆ ತಮ್ಮ ವಾಹನಗಳ ನೋಂದಣಿ ಸಂಖ್ಯೆಯನ್ನು ಅಕ್ರಮವಾಗಿ ಬೇರೊಬ್ಬರು ಬಳಸಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಇದುವರೆಗೆ ಈ ರೀತಿ 200-300 ಪ್ರಕರಣಗಳು ವರದಿಯಾಗಿವೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಬೇರೊಬ್ಬರ ವಾಹನದ ನೋಂದಣಿ ಸಂಖ್ಯೆಯನ್ನು ಬಳಸಿ ಅಕ್ರಮ ಎಸಗಿರುವವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನು ಓದಿ: 6ನೇ ದಿನ ದಾಖಲೆಯ 9 ಕೋಟಿ ಟ್ರಾಫಿಕ್‌ ದಂಡ; ಈವರೆಗೆ 18 ಲಕ್ಷ ಪ್ರಕರಣ ಇತ್ಯರ್ಥ

ಪ್ರಸುತ್ತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಿಯಾಯಿತಿ ಹಿನ್ನಲೆಯಲ್ಲಿ ಸಂಚಾರ ಠಾಣೆಗಳಲ್ಲಿ ದಂಡ ಪಾವತಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೀಗಾಗಿ ದಂಡ ಸ್ವೀಕಾರ ಪ್ರಕ್ರಿಯೆ ಮುಗಿದ ಬಳಿಕ ನಕಲಿ ನಂಬರ್‌ ಪ್ಲೇಟ್‌ ಬಳಸುವವರ ಪತ್ತೆ ಕಾರ್ಯ ನಡೆಯಲಿದೆ. ಅಂಥ ವಾಹನಗಳು ನಗರದಲ್ಲಿ ಓಡಾಡಿದರೆ ಜಂಕ್ಷನ್‌ಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿರುತ್ತವೆ. ಆ ದೃಶ್ಯಾವಳಿ ಆಧರಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಲೀಂ ಹೇಳಿದರು.

ಕೆಲವರು ಬೇರೊಬ್ಬರ ವಾಹನ ನೋಂದಣಿ ಸಂಖ್ಯೆಯನ್ನು ಪೂರ್ಣವಾಗಿ ನಕಲು ಮಾಡಿದ್ದರೆ, ಮತ್ತೆ ಕೆಲವರು ಒಂದು ಅಥವಾ ಎರಡು ನಂಬರನ್ನು ತಮ್ಮ ಮೂಲ ನೋಂದಣಿ ಸಂಖ್ಯೆಗಳಿಗೆ ತಿದ್ದಿ ಬಳಸುತ್ತಿದ್ದಾರೆ. ಮೊದಲಿನಿಂದಲೂ ನಕಲಿ ನಂಬರ್‌ ಪ್ಲೇಟ್‌ ಬಳಕೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ವಾಹನ ತಪಾಸಣೆ ವೇಳೆ ಅಕ್ರಮವಾಗಿ ನಂಬರ್‌ ಪ್ಲೇಟ್‌ ಕೃತ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಬಯಲಾಗುತ್ತಿದ್ದವು. ಆದರೀಗ ದಂಡ ಪಾವತಿಗೆ ಜನರು ಮುಂದಾಗಿದ್ದರಿಂದ ನಂಬರ್‌ ಪ್ಲೇಟ್‌ಗಳು ಬೆಳಕಿಗೆ ಬಂದಿದೆ ಎಂದರು.
ಇದನ್ನೂ ಓದಿ: ನಕಲಿ ನಂಬರ್‌ ಪ್ಲೇಟ್‌ ಗೋಲ್ಮಾಲ್: ಟ್ರಾಫಿಕ್‌ ದಂಡ ಪಾವತಿಗೆ ಬಂದವರಿಗೆ ಶಾಕ್

Follow Us:
Download App:
  • android
  • ios