ಹೆಣ್ಣುಮಕ್ಕಳಿಗೆ ಉದ್ಯೋಗಾವಕಾಶ ದೊರಕಿಸಲು ಕ್ರಮ : ಸಚಿವ ರಾಜಣ್ಣ
ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿರುವ ಕೊಡಿಗೇನಹಳ್ಳಿ ಹೋಬಳಿ ತೆರಿಯೂರು ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ ಕೈಗಾರಿಕಾ ಕೇಂದ್ರ ತೆರೆಯಲು ಚಿಂತನೆ ನೆಡಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಮಧುಗಿರಿ : ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿರುವ ಕೊಡಿಗೇನಹಳ್ಳಿ ಹೋಬಳಿ ತೆರಿಯೂರು ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ ಕೈಗಾರಿಕಾ ಕೇಂದ್ರ ತೆರೆಯಲು ಚಿಂತನೆ ನೆಡಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಬುಧವಾರ ಇಲ್ಲಿನ ಬೆಸ್ಕಾಂ ನೌಕರರ ಸಮುದಾಯ ಭವನದಲ್ಲಿ ಬೆಸ್ಕಾಂನಿಂದ ಹಮ್ಮಿಕೊಂಡಿದ್ದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಬಹುತೇಕ ಹೆಣ್ಣುಮಕ್ಕಳು ಕುಟುಂಬಗಳ ಜೀವನ ನಿರ್ವಹಣೆಗೆ ಬೆಳಗಾದರೆ ಗಾರ್ಮೆಂಟ್ಸ್ ಕೆಲಸಕ್ಕಾಗಿ ಬೇರೆ ನಗರಗಳಿಗೆ ಆಟೋದಲ್ಲಿ ತೆರಳುತ್ತಿದ್ದು ಇದರಿಂದ ಬಹಳ ತೊಂದರೆ ಅನುಭವಿಸುವಂತಾಗಿದೆ. ಎರಡು ದಿನಗಳಿಂದಷ್ಟೇ ಆಟೋದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಹೆಣ್ಣುಮಕ್ಕಳು ರಸ್ತೆ ಅಪಘಾತ ಸಂಭವಿಸಿ ತೊಂದರೆ ಉಂಟಾಗಿದೆ. ಮುಂಬರುವ ದಿನಗಳಲ್ಲಿ ಈಗಾಗದಂತೆ ಎಚ್ಚರ ವಹಿಸಲಾಗುವುದು. ತಾಲೂಕಿನಲ್ಲಿ ಹೆಣ್ಣುಮಕ್ಕಳಿಗೆ ಉದ್ಯೋಗಾವಕಾಶಗಳು ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಚುನಾವಣಾ ವೇಳೆ ಏನೆಲ್ಲಾ ಗ್ಯಾರಂಟಿ ನೀಡಿದ್ದವೋ ಅವುಗಳನ್ನು ಈಡೇರಿಸಿದ್ದೇವೆ. ಗ್ರಾಮೀಣ ಪ್ರದೇಶದ ಜನರು ನೆಮ್ಮದಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು, ಬಡ ಜನರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಶ್ರೀ ಸಾಮಾನ್ಯರ ಅಭ್ಯುದಯ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಶಕ್ತಿ ಯೋಜನೆಯಿಂದ ಯಾತ್ರ ಸ್ಥಳಗಳಲ್ಲಿ ಶೇ.80ರಷ್ಟುಮಹಿಳೆಯರು ದೇವರ ದರ್ಶನ ಪಡೆಯುತ್ತಿದ್ದು, ಹೆಣ್ಣು ಮಕ್ಕಳ ಮೇಲೆ ಭರವಸೆಯಿಟ್ಟು ಸರ್ಕಾರ ಗ್ಯಾರಂಟಿ ಯೋಜನೆ ರೂಪಿಸಿದೆ. ಆ.20ರಿಂದ ಗೃಹಲಕ್ಷ್ಮೇ ಯೋಜನೆ ಕೂಡ ಜಾರಿಯಾಗಲಿದ್ದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರು. 2023ರಲ್ಲಿ ಪದವಿ ಪಡೆದ ಪದವಿಧರರಿಗೆ 3 ಸಾವಿರ ರು. ಅವರ ಖಾತೆಗೆ ಜಮೆ ಆಗಲಿದೆ. ಸರ್ಕಾರಿ ಸವಲತ್ತುಗಳನ್ನು ಅರ್ಹರು ಮಾತ್ರ ಪಡೆಯಬೇಕು.
ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸಿಎಂ ಮನವೂಲಿಸಿ ನಂದಿನಿ ಹಾಲಿನ ದರ ಏರಿಸಿ ಅದನ್ನು ರೈತರಿಗೆ ನೀಡಿದರೆ ಕೆಲವರು ಟಿಕೀಸುತ್ತಿದ್ದು, ಇವರೆಲ್ಲ ರೈತ ವಿರೋಧಿಗಳು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಸ್ಕಾಂ ಚಿತ್ರದುರ್ಗ ವಲಯದ ಮುಖ್ಯ ಎಂಜಿನಿಯರ್ ಗೋವಿಂದಪ್ಪ ಮಾತನಾಡಿ, ತಾಲೂಕಿನ ಎಲ್ಲ ಹಳ್ಳಿಗಳಿಗೆ ನಿರಂತರ ವಿದ್ಯುತ್ ಸಂಪರ್ಕ ನೀಡುವ ಅವಶ್ಯ ಅನುದಾನವನ್ನು ಈ ಹಿಂದೆ ಶಾಸಕರಾಗಿದ್ದ ವೇಳೆ ಬಿಡುಗಡೆ ಮಾಡಿಸಿದ್ದರು. ತಾಲೂಕಿಗೆ ಹೆಚ್ಚುವರಿಯಾಗಿ ಕವಣದಾಲ, ಗರಣಿ, ಬ್ರಹ್ಮದೇವರಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಉಪ ಸ್ಥಾವರಗಳನ್ನು ಪ್ರಾರಂಭಿಸಲು ಜಾಗ ಪತ್ತೆ ಮಾಡಿದ್ದು ಈಗಾಗಲೇ ಪ್ರಸ್ತಾವನೆ ಸಚಿವರಿಗೆ ಸಲ್ಲಿಸಲಾಗಿದೆ. ತಾಲೂಕಿನಲ್ಲಿ 70 ಸಾವಿರದ 907 ಗ್ರಾಹಕರು ಈ ಯೋಜನೆಗೆ ಅರ್ಹರಿದ್ದಾರೆ. ಈ ಪೈಕಿ ಅ.8ರವರೆಗೆ 59 ಸಾವಿರದ 138 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ತುಮಕೂರು ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಲೋಕೇಶ್ ಮಾತನಾಡಿ, ಗೃಹಜ್ಯೋತಿ ಯೋಜನೆ ಎಲ್ಲ ಅರ್ಹರಿಗೂ ದೊರೆಯುತ್ತದೆ. ಸೋಲಾರ್ ಪ್ಲಾಂಟ್ ಘಟಕವನ್ನು ಸ್ಥಾಪಿಸಲು 90 ಎಕರೆ ಜಮೀನು ಗುರುತಿಸ್ಸಿದ್ದು ಆ ಜಾಗವನ್ನು ಸರ್ಕಾರ ಮಂಜೂರು ಮಾಡಿದರೆ ಅಲ್ಲಿ ಸೋಲಾರ್ ಪ್ಲಾಂಟ್ ಘಟಕ ಸ್ಥಾಪಿಸಿ ಅಲ್ಲಿಂದ ಉತ್ಪಾದಿಸಿದ ವಿದ್ಯುತ್‌ನ್ನು ಈ ಯೋಜನೆಗೆ ಬಳಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಬೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ಜಗದೀಶ್, ಎಸಿ ರಿಷಿ ಆನಂದ್, ತಾಪಂ ಇಒ ಲಕ್ಷ್ಮಣ್, ಸಚಿವರ ಪುತ್ರಿ ಆರ್.ರಶ್ಮಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಕೆಎಂಎಫ್ ನಿರ್ದೇಶಕ ಕಾಂತರಾಜು, ಕೆಪಿಸಿಸಿ ಮೆಂಬರ್ ಎಂ.ಎಸ್.ಮಲ್ಲಿಕಾರ್ಜುನಯ್ಯ, ಜಿಪಂ ಮಜಿ ಸದಸ್ಯ ಕೆಂಪಚೌಡಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಎನ್.ಗಂಗಣ್ಣ, ಎಂ.ಕೆ.ನಂಜುಂಡಯ್ಯ, ಅಯೂಬ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ, ಚಂದ್ರಮ್ಮ, ಪ್ರಮೀಳಮ್ಮ, ಮಾಯಕಣ್ಣ ನಾಯಕ್, ಪ್ರಸನ್ನಕುಮಾರ್, ಪಿ.ರವೀಂದ್ರ, ನಾಗೇಂದ್ರ ಸೇರಿ ಇತರರಿದ್ದರು.
ನಿಮ್ಮೆಲ್ಲರ ಆಶೀರ್ವಾದಿಂದ ನಾನು ಸಚಿವನಾಗಿದ್ದು, ಕ್ಷೇತ್ರದ ಜನರ ಋುಣ ತಿರೀಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಿಕ್ಕ ಅಧಿ
ಕಾರವನ್ನು ಬಡವರ, ರೈತರ ಹಾಗೂ ಕೂಲಿಕಾರ್ಮಿಕರ ಒಳಿತಿಗೆ ವಿನಿಯೋಗಿಸಿದಾಗ ಮಾತ್ರ ಸಾರ್ಥಕತೆ ಸಿಗಲಿದೆ. ಮುಂದಿನ ದಿನಗಳಲ್ಲಿ ಬೆಸ್ಕಾಂ ಕಚೇರಿಯನ್ನು ಕಾರ್ಪೋರೇಟ್ ಮಾದರಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಕೆ.ಎನ್.ರಾಜಣ್ಣ ಸಹಕಾರ ಸಚಿವ