ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಕ್ರಮ- ಡಾ.ಕೆ.ವಿ. ರಾಜೇಂದ್ರ
ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಕ್ತ ಮತ್ತು ನಾಯಸಮ್ಮತವಾಗಿ ನಡೆಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ಮೈಸೂರು : ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಕ್ತ ಮತ್ತು ನಾಯಸಮ್ಮತವಾಗಿ ನಡೆಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸೋಮವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಚುನಾವಣೆ ಸಂಬಂಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸುಮಾರು 400 ಮಂದಿ ರೌಡಿ ಶೀಟರ್‌ಗಳನ್ನು ಗುರುತಿಸಿ, ಈ ಪೈಕಿ ಒಬ್ಬರನ್ನು ಗಡಿಪಾರು ಮಾಡಲಾಗಿದೆ. ಇನ್ನೂ ಮೂವರನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಜಿಲ್ಲೆಯ ಕೆಲವರ ಚಲನವಲನ ಪರಿಶೀಲಿಸಿ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕೆಲವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗತ್ತಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತ ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ವಯಸ್ಕರು ಮತದಾನಕ್ಕೆ ಮುಂದಾಗಬೇಕು
ಶತಾಯುಷಿಗಳು, ವಯಸ್ಕರು ಮತದಾನಕ್ಕೆ ತೋರುವ ಅಸಕ್ತಿಯನ್ನು ವಿದ್ಯಾವಂತ ಯುವಕರು ತೋರುತ್ತಿಲ್ಲ. ಹೀಗಾಗಿ ವಿದ್ಯಾವಂತರ ಮತದಾನ ಹೆಚ್ಚಳಕ್ಕಾಗಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ನಗರಪಾಲಿಕೆ ವ್ಯಾಪ್ತಿಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಇದರ ಜತೆಗೆ ವಿದ್ಯಾವಂತ ಯುವ ಸಮೂಹ ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಎರಡು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಮತಗಟ್ಟೆಯನ್ನು ಆಕರ್ಷಣೀಯಗೊಳಿಸುವುದು, ನಿರೀಕ್ಷಣಾ ಕೊಠಡಿ ನಿರ್ಮಿಸುವುದು, ಮತದಾನಕ್ಕೆ ಬಂದವರ ಮಕ್ಕಳ ಪಾಲನೆಗೆ ಅವಕಾಶ ನೀಡುವುದು, ವಾಕರ್ಸ್‌ಗಳಿಗೆ ಮತಗಟ್ಟೆಬಳಿ ವಾಕಿಂಗ್‌ಗೆ ಅವಕಾಶ ನೀಡಲಾಗುವುದು. ಮತದಾನ ಕಡಿಮೆಯಾದ ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಮತದಾನ ಜಾಗೃತಿ ಫಲಕ ಅಳವಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಎರಡು ಕಡೆ ದಾಖಲಾಗಿರುವ 80,000 ಮಂದಿಯ ಹೆಸರು ಇದೆ. ರುಗಳನ್ನು ಡಿಲಿಟ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೆಲವರ ಹೆಸರು ಡಿಲಿಟ್ ಆಗಿದೆ. ಇದನ್ನು ಮತಗಟ್ಟೆಯ ಅಧಿಕಾರಿಗಳ ಬಳಿಗೆ ತೆರಳಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಪ್ರತಿಯೊಬ್ಬರು ವೋಟರ್ ಹೆಲ್ಪ್‌ಲೈನ್ ಆ್ಯಪ್‌ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದರು.
ಪ್ರತಿಯೊಂದು ಮತಗಟ್ಟೆಯಲ್ಲಿಯೂ ಮತಗಟ್ಟೆಅಧಿಕಾರಿ ಹೆಸರು ಹಾಗೂ ಮೊಬೈಲ್ ನಂಬರ್ ಎಲ್ಲವನ್ನು ನೀಡಲಿದೆ. ಆ ಮೂಲಕ ನಿಮ್ಮ ಗೊಂದಲ ಪರಿಶೀಲಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
80 ವರ್ಷ ತುಂಬಿದವರು, ಹಾಸಿಗೆ ಹಿಡಿದಿರುವವರು, ಅಂಗವಿಕಲರ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು 80,000ಕ್ಕೂ ಹೆಚ್ಚು 80 ವರ್ಷ ಪೂರೈಸಿದವರು ಹಾಗೂ 30,000 ಅಂಗವಿಕಲರಿದ್ದಾರ. ಇವರೆಲ್ಲರಿಗೂ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯನ್ನು ಹಂತ ಹಂತವಾಗಿ ವರ್ಗಾಯಿಸಲಾಗುತ್ತಿದೆ. ಕೆಲವೊಂದು ಕಡತಗಳನ್ನು ಸ್ಥಳಾಂತರಿಸಬೇಕಿರುವುದರಿಂದ ತಡವಾಗಿದೆ. ಸದ್ಯದಲ್ಲಿಯೇ ಸಂಪೂರ್ಣ ವರ್ಗಾವಣೆಗೆ ಕ್ರಮವಹಿಸಲಾಗುವುದು ಎಂದರು.
ವಿವಿ ಪ್ಯಾಟ್ ಬಗ್ಗೆ ಅನುಮಾನಬೇಡ
ವಿವಿ ಪ್ಯಾಟ್ ಮತ್ತು ಇವಿಎಂ ಬಗ್ಗೆ ಜನರಲ್ಲಿ ಮೂಡಿರುವ ಅನುಮಾನ ನಿವಾರಣೆ ಮತ್ತು ಜಾಗೃತಿಗಾಗಿ ಈಗಾಗಲೇ 250 ಸೆಕ್ಟರ್ ಅಧಿಕಾರಿಗಳ ಮೂಲಕ ಬ್ಯಾಲೆಟ್ ಯೂನಿಟ್ ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ಪ್ರಾತ್ಯಕ್ಷತೆ ಮಾಡಲಾಗುತ್ತಿದೆ. ವಿವಿಪ್ಯಾಟ್ ನಿಜಕ್ಕೂ ಪಾರದರ್ಶಕವಾಗಿ ಕೆಲಸ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ. ಇದನ್ನು ಎಲ್ಲ ರಾಜಕೀಯ ಪಕ್ಷದ ಮುಖಂಡರ ಎದುರೇ ಪರಿಶೀಲಿಸಲಾಗುತ್ತದೆ. ಸಂದೇಹವಿದ್ದರೆ ಯಾರು ಬೇಕಾದರೂ ಜಿಪಂ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಬಹುದು ಎಂದು ಅವರು ಹೇಳಿದರು.
ವರ್ಷಪೂರ್ತಿ ಪ್ರವಾಸೋದ್ಯಮಕ್ಕೆ ಸಿದ್ಧತೆ
ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸ್ಮಾರ್ಚ್ ಸಿಟಿ ಪರಿಕಲ್ಪನೆ ಅಡಿ ಇಂಟಿಗ್ರೇಟೆಡ್ ಕಮಾಂಡೆಂಟ್ ಕಂಟ್ರೋಲ್ ವ್ಯವಸ್ಥೆ ಜಾರಿಗೊಳಿಸಿ ಮೈಸೂರಿನಲ್ಲಿ ವರ್ಷಪೂರ್ತಿ ಪ್ರವಾಸೋದ್ಯಮಕ್ಕೆ ಪೂರಕ ಕಾರ್ಯಕ್ರಮ ಆಯೋಜಿಸುವುದು. ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳೂ ಸಂಜೆ 5.30ರ ನಂತರ ಮುಚ್ಚಲ್ಪಡುತ್ತವೆ. ಹಾಗಾಗಿ ಸಂಜೆ ಬಳಿಕ ಪ್ರವಾಸಿಗರಿಗೆ ಯಾವುದೇ ರೀತಿಯ ಮನರಂಜನೆ ಇರುವುದಿಲ್ಲ. ಸ್ಮಾರ್ಚ್ ಸಿಟಿ ಪರಿಕಲ್ಪನೆಯಲ್ಲಿರುವ ಇಂಟಿಗ್ರೇಟೆಡ್ ಕಮಾಂಡೆಂಟ್ ಕಂಟ್ರೋಲ್ ಸಿಸ್ಟಮ್ ಜಾರಿಗೆ ತಂದು ವಾರಾಂತ್ಯಗಳಲ್ಲಿಯೂ ಕಾರ್ಯಕ್ರಮ ಆಯೋಜಿಸಲು ಪ್ರಯತ್ನಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ಮಹಿಳೆ, ವೃದ್ಧರು, ಮಕ್ಕಳು, ಹಿಂದುಳಿದ ವಿಭಾಗಗಳಿಗೆ ರಕ್ಷಣೆ, ಟ್ರಾಫಿಕ್ ಕಂಟ್ರೋಲ್ ಹಾಗೂ ಇನ್ನಿತರ ವಿಷಯಗಳಲ್ಲಿ ಬದಲಾವಣೆ ತಂದು ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಮೈಸೂರು- ಬೆಂಗಳೂರು ನಡುವೆ ದಶಪಥ ರಸ್ತೆ, ರೈಲ್ವೆ, ವಿಮಾನಯಾನ ಸೇವೆ ಸುಧಾರಿಸಿದೆ. ಹೀಗಾಗಿ ಮೈಸೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸಂಬಂಧ ಅನೇಕಾರು ಬದಲಾವಣೆ ತರಲು ಅವಕಾಶವಿದೆ ಎಂದು ಅವರು ಹೇಳಿದರು.
ಈ ವಿಶೇಷ ವ್ಯವಸ್ಥೆಯಿಂದ ರಾತ್ರಿ ವೇಳೆ ನಮ್ಮ ಪಾರಂಪರಿಕ ತಾಣಗಳನ್ನು ಜಗತ್ತಿಗೆ ತೋರಿಸಲಾಗುತ್ತದೆ. ಅದಕ್ಕಾಗಿ ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗುವುದು. ಕಡೇ ಪಕ್ಷ ವಾರಾಂತ್ಯದಲ್ಲಿಯಾದರೂ ರಾತ್ರಿ 10 ಗಂಟೆವರೆಗೆ ಪ್ರವಾಸಿಗರಿಗೆ ಕಾಲ ಕಳೆಯಲು ವೇದಿಕೆ ಸೃಷ್ಟಿಸಬೇಕು. 52 ವಾರಾಂತ್ಯಗಳಲ್ಲಿ ಥೀಮ್ ಬೇಸ್ಡ್ ಚಟುವಟಿಕೆ ನಡೆಸಲು ಚಿಂತಿಸಲಾಗುತ್ತಿದೆ. ಚಿತ್ರಕಲೆ, ಸಿರಿಧಾನ್ಯ, ಕೈಟ್ ಫೆಸ್ಟಿವಲ್ ಮುಂತಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಉಪಾಧ್ಯಕ್ಷ ಅನುರಾಗ್ ಬಸವರಾಜ್, ಪ್ರಧಾನ ಕಾರ್ಯದರ್ಶಿ ಸುಬ್ಬಹ್ಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.
ಖಾತೆ-ಕಂದಾಯಗಳನ್ನು ಮಾಡಿಕೊಡಲು ಅಧಿಕಾರಿಗಳು ಸಾರ್ವಜನಿಕರನ್ನು ಅಲೆಸಬಾರದು. ಈಗಾಗಲೇ ಇಂತಹ ವಿಚಾರಗಳು ಗಮನಕ್ಕೆ ಬಂದಿವೆ. ಪುರಸಭೆ, ನಗರಸಭೆ ಆಯುಕ್ತರು, ತಹಸೀಲ್ದಾರ್ ಅವರಿಗೆ ಖಡನ್ ಸೂಚನೆ ನೀಡಲಾಗಿದೆ. ಒಂದು ವೇಳೆ ಖಾತೆ-ಕಂದಾಯಗಳನ್ನು ಮಾಡಿಕೊಡಲು ಸತಾಯಿಸುವ ಅಧಿಕಾರಿ ವಿರುದ್ಧ ದೂರು ಬಂದರೆ ಅಂತಹವರನ್ನು ಅಮಾನತು ಮಾಡಲಾಗುವುದು.
-ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ