ಸಾರ್ವಜನಿಕರೊಂದಿಗೆ ಪೊಲೀಸರು ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಈಗಾಗಲೇ ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ಮೊಬೈಲ್ ನಂಬರ್ ಸಮೇತ ಫಲಕಗಳ ಅಳವಡಿಕೆಗೆ ಆದೇಶಿಸಲಾಗಿದೆ. ಅಲ್ಲದೆ ಠಾಣೆಗಳಿಗೆ ಪ್ರತಿ ದಿನ ಭೇಟಿ ನೀಡುವಂತೆ ಜಿಲ್ಲಾ ಎಸ್ಪಿಗಳು, ನಗರದ ಡಿಸಿಪಿ ಹಾಗೂ ಎಸಿಪಿಗಳಿಗೆ ಸಹ ಸೂಚಿಸಲಾಗಿದೆ. ಕೆಲವು ಕಡೆ ಫಲಕ ಹಾಕದ ಬಗ್ಗೆ ದೂರುಗಳು ಬಂದಿವೆ. ಈ ಉದಾಸೀನತೆ ಮುಂದುವರೆದರೆ ಪೊಲೀಸರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅಲೋಕ್ ಮೋಹನ್
ಬೆಂಗಳೂರು(ಜೂ.23): ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕಿಡಿಗೇಡಿಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳ ಮೇಲೆ ವಿಶೇಷ ನಿಗಾವಹಿಸಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಹೇಳಿದರು.
ಸುಳ್ಳು ಸುದ್ದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಸಮರ..!
ಸಾರ್ವಜನಿಕರೊಂದಿಗೆ ಪೊಲೀಸರು ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಈಗಾಗಲೇ ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ಮೊಬೈಲ್ ನಂಬರ್ ಸಮೇತ ಫಲಕಗಳ ಅಳವಡಿಕೆಗೆ ಆದೇಶಿಸಲಾಗಿದೆ. ಅಲ್ಲದೆ ಠಾಣೆಗಳಿಗೆ ಪ್ರತಿ ದಿನ ಭೇಟಿ ನೀಡುವಂತೆ ಜಿಲ್ಲಾ ಎಸ್ಪಿಗಳು, ನಗರದ ಡಿಸಿಪಿ ಹಾಗೂ ಎಸಿಪಿಗಳಿಗೆ ಸಹ ಸೂಚಿಸಲಾಗಿದೆ. ಕೆಲವು ಕಡೆ ಫಲಕ ಹಾಕದ ಬಗ್ಗೆ ದೂರುಗಳು ಬಂದಿವೆ. ಈ ಉದಾಸೀನತೆ ಮುಂದುವರೆದರೆ ಪೊಲೀಸರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಆಯುಕ್ತರಾದ ಸತೀಶ್ ಕುಮಾರ್, ರಮಣ ಗುಪ್ತ, ಜಂಟಿ ಆಯುಕ್ತರಾದ ಡಾ.ಎಸ್.ಡಿ.ಶರಣಪ್ಪ ಹಾಗೂ ಎಂ.ಎನ್.ಅನುಚೇತ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಆಯುಕ್ತರ ಕಚೇರಿಗೆ ತಿಂಗಳಲ್ಲಿ ಮೂರನೇ ಭೇಟಿ
ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಡಿಜಿಪಿ ಅಲೋಕ್ ಮೋಹನ್ ಅವರು ಅಧಿಕಾರಿಗಳ ಸಭೆ ನಡೆಸಿರುವುದು ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಸಂಚಾರ, ಅಪರಾಧ ಹಾಗೂ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ತಾವು ನೀಡಿದ ಸೂಚನೆಗಳ ಕಾರ್ಯಗತಗೊಳಿಸಿದ್ದ ಬಗ್ಗೆ ನಿಯಮಿತವಾಗಿ ವರದಿ ಸಲ್ಲಿಸುವಂತೆ ಡಿಜಿಪಿ ಸೂಚನೆ ನೀಡಿದ್ದಾರೆ. ಡಿಜಿಪಿಯಾದ ಎರಡನೇ ವಾರದಲ್ಲಿ ಬೆಂಗಳೂರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದ ಡಿಜಿಪಿ ಅಲೋಕ್ ಮೋಹನ್, ಇದೇ ತಿಂಗಳ 16 ರಂದು ಗೃಹ ಸಚಿವರ ಜತೆ ಮತ್ತೆ ನಗರ ಪೊಲೀಸ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆಯಲ್ಲಿ ನಡೆಸಿದ್ದರು. ಇದಾದ ಬಳಿಕ ಪುನಃ ಒಂದು ವಾರದ ಅಂತರದಲ್ಲೇ ಗುರುವಾರ ಮೂರನೇ ಬಾರಿಗೆ ಆಯುಕ್ತರ ಕಚೇರಿಗೆ ಆಗಮಿಸಿ ಡಿಜಿಪಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.
