ಬೆಂಗಳೂರು(ಫೆ.16): ಕ್ಯಾನ್ಸರ್‌ ಕಾಯಿಲೆ ಪತ್ತೆಹಚ್ಚಲು ಇರಾನ್‌ ದೇಶದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಜಯದೇವ ಆಸ್ಪತ್ರೆಗೆ ಬರುವ ಔಷಧಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಸಂಬಂಧ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆ ವೈದ್ಯ ಡಾ.ಕುಮಾರಸ್ವಾಮಿ ಜಿ.ಕಲ್ಲೂರ ಮತ್ತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸಲು ನಗರದ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಮೈಸೂರು ಮೂಲದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಸ್ನೇಹಮಣಿ ಕೃಷ್ಣ ಎಂಬುವರು ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ, ಇಬ್ಬರ ವಿರುದ್ಧ ತನಿಖೆ ನಡೆಸಿ 2020ರ ಮೇ 21ರ ಒಳಗೆ ವರದಿ ಸಲ್ಲಿಸಲು ತಿಲಕನಗರ ಠಾಣೆ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ.

ಔಷಧ ತರುವಾಗ ಗೋಲ್‌ಮಾಲ್‌:

ಜಯದೇವ ಆಸ್ಪತ್ರೆಗೆ ಬರುವ ಕೆಲವು ರೋಗಿಗಳ ಪರೀಕ್ಷೆಗೆ ಉಪಯೋಗಿಸುವ ನ್ಯೂಕ್ಲಿಯರ್‌ ಕಾಂಪೋನೆಂಟ್‌ (ಐಸೋಟಾಪ್‌) ಎಂಬ ಔಷಧಗಳು ವಿದೇಶದಿಂದ ವಿಮಾನದಲ್ಲಿ ಪ್ರತಿ ಸೋಮವಾರ ಬೆಳಗಿನ ಜಾವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತವೆ. ಈ ಔಷಧಗಳನ್ನು ನಿಲ್ದಾಣದಿಂದ ಜಯದೇವ ಆಸ್ಪತ್ರೆಯವರು ಪಡೆದುಕೊಳ್ಳುವ ಬದಲು ಸಂಸ್ಥೆಯ ನ್ಯೂಕ್ಲಿಯರ್‌ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್‌ ಆಗಿ ಕೆಲಸ ನಿರ್ವಹಿಸುತ್ತಾರೆನ್ನಲಾದ ಡಾ.ಕುಮಾರಸ್ವಾಮಿ ಗಂಗಾಧರಯ್ಯ ಕಲ್ಲೂರ ಎಂಬುವರ ಖಾಸಗಿ ಕಾರಿನ ಚಾಲಕ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಔಷಧಿಗಳಲ್ಲಿ ಕೆಲವು ಪ್ರಮಾಣವನ್ನು ಜಯದೇವ ಆಸ್ಪತ್ರೆಗೆ ತಲುಪಿಸುವ ಚಾಲಕ, ಉಳಿದವನ್ನು ಡಾ.ಕುಮಾರಸ್ವಾಮಿ ಷೇರುದಾರ ಆಗಿರುವ ಮತ್ತು ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌ಸಿಜಿ ಆಸ್ಪತ್ರೆಗೆ ಸಾಗಿಸುತ್ತಿದ್ದಾನೆ. ಆದರೆ, ವಿಮಾನದಲ್ಲಿ ಬರುವ ಔಷಧಿಗಳನ್ನು ಸಂಪೂರ್ಣವಾಗಿ ಜಯದೇವ ಆಸ್ಪತ್ರೆಯಲ್ಲೇ ಬಳಸಲಾಗುತ್ತಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಆರೋಪಗಳ ಕುರಿತು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ 2019ರ ಸೆ.16ರಂದು ದೂರು ನೀಡಿದ್ದೆ. ಮುಂದಿನ ಕ್ರಮಕ್ಕಾಗಿ ಠಾಣೆಗೆ ವರ್ಗಾಯಿಸಲಾಗಿತ್ತು. ಆದರೆ, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ನನ್ನ ಬಳಿ ಇರುವ ಸಾಕ್ಷಿ, ದಾಖಲೆ ಕೇಳಿದ್ದರು. ಅದನ್ನು ಒದಗಿಸಿದ್ದೆ. ಆದರೂ, ಕ್ರಮ ಕೈಗೊಂಡಿಲ್ಲ. ನಂತರ ಮುಖ್ಯಮಂತ್ರಿಯವರಿಗೂ ದೂರು ಅರ್ಜಿ ನೀಡಿದ್ದೆ. ಅಲ್ಲಿಂದಲೂ ಯಾವುದೇ ಮಾಹಿತಿ ಬಂದಿಲ್ಲ. ಆರೋಪಿಗಳು ಪ್ರಭಾವಿಗಳಾಗಿರುವ ಕಾರಣ ಪೊಲೀಸರು ತನಿಖೆ ನಡೆಸಲು ಹಿಂಜರಿಯುವ ಸಾಧ್ಯತೆ ಇದೆ. ಹೀಗಾಗಿ, ಖಾಸಗಿ ದೂರು ದಾಖಲಿಸಿದ್ದೆ ಎಂದು ದೂರುದಾರ ಕೃಷ್ಣ ಹೇಳಿದ್ದಾರೆ.