ಶಿವಮೊಗ್ಗ(ಜು.24): ಕಳೆದ ನಾಲ್ಕು ವರ್ಷದ ಹಿಂದೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ನಂತರ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಸನಗರ ಠಾಣೆಯ ಪ್ರಭಾರ ಪಿಎಸ್‌ಐ ಸೂರಪ್ಪ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.

ಶಿವಮೊಗ್ಗ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಜು.22ರೊಳಗೆ ಆರೋಪಿ ಬಂಧಿಸಿ ಕೋರ್ಟ್‌ ಮುಂದೆ ಹಾಜರು ಪಡಿಸುವಂತೆ ಆದೇಶಿಸಲಾಗಿತ್ತು. ಸೂರಪ್ಪ ನೇತೃತ್ವದ ಪೊಲೀಸರ ತಂಡ ಬಂಡೋಡಿಯ ದಟ್ಟಡವಿಯಲ್ಲಿ ಅಡಗಿದ್ದ ಆರೋಪಿ ಬಂಡೋಡಿ ಮೋಹನ್‌ ಎಂಬಾತವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಏನಿದು ಪ್ರಕರಣ?:

ಹಣದ ವ್ಯವಹಾರಕ್ಕೆ ಸಂಬಂಧಿಸಿ ಆರೋಪಿ ಬಂಡೋಡಿ ಮೋಹನ್‌ ಮತ್ತು ಆತನ ಮಗ ಚಂದ್ರಶೇಖರ್‌ ಎಂಬವರು ಮೀಸೆ ನಾರಾಯಣಪ್ಪ ಎಂಬರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಜಾತಿನಿಂದನೆ  ಮಾಡಿದ್ದರು. ಈ ಸಂಬಂಧ ಪ್ರಕರಣ 2015 ಜನವರಿ 1ರಂದು ದಾಖಲಾಗಿತ್ತು. ಆ ಸಂದರ್ಭದಲ್ಲಿ ನಗರ ಠಾಣೆ ಪಿಎಸ್‌ಐ ಸತೀಶ್‌ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿ ಕಸ್ಟಡಿಗೆ ನೀಡಿತ್ತು. ಆದರೆ ತೀರ್ಥಹಳ್ಳಿ ತಾಲೂಕಿನ ಹಿಷಣ ಧರ್ಮೇಗೌಡ ಎಂಬುವವರನ್ನು ಪುಸಲಾಯಿಸಿ ನಿಮ್ಮ ಮನೆಯಲ್ಲಿ ಸಾಯೋತನಕ ಕೆಲಸ ಮಾಡಿ ಬದುಕು ಸಾಗಿಸುತ್ತೇವೆ ಎಂದು ಆರೋಪಿಗಳು ನಂಬಿಸಿದ್ದರು. ಇದನ್ನು ನಂಬಿದ ಧರ್ಮೇಗೌಡರು ಇಬ್ಬರನ್ನೂ ಜಾಮೀನಿನ ಮೇಲೆ ಬಿಡಿಸಿದ್ದರು.

ನೆರವಾದವರಿಗೆ ಚಳ್ಳೆ ಹಣ್ಣು ತಿನ್ನಿಸಿ ಮತ್ತೆ ಪರಾರಿ:

ಜಾಮೀನಿನ ಮೇಲೆ ಬಿಡುಗಡೆಗೊಂಡ ಇಬ್ಬರನ್ನೂ ಧರ್ಮೇಗೌಡರು ಮನೆಗೆ ಕರೆದುಕೊಂಡು ಹೋಗಲು ಬಸ್ಸು ಹತ್ತುವ ವೇಳೆ, ಮೂತ್ರ ಮಾಡಬೇಕೆಂದು ಹೇಳಿ ಮತ್ತೆ ಪರಾರಿಯಾದ ಆರೋಪಿ ಮೋಹನ್‌ ಮತ್ತು ಚಂದ್ರಶೇಖರ್‌ ತಮ್ಮ ಸಹಾಯಕ್ಕೆ ಬಂದ ಧರ್ಮೇಗೌಡರಿಗೂ ಚಳ್ಳೆಹಣ್ಣು ತಿನ್ನಿಸಿದ್ದರು.

ಮಹಿಳಾಧಿಕಾರಿಯನ್ನೇ ದೊಣ್ಣೆಯಿಂದ ಹೊಡೆದ MLA ಚೇಲಾಗಳು

ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಗೆ ಪದೇ ಪದೆ ನ್ಯಾಯಾಲಯದಿಂದ ನೋಟೀಸ್‌ ಬರುವಂತಾಗಿತ್ತು. ನಗರ ಠಾಣೆಯಲ್ಲಿ ಪಿಎಸ್‌ಐ ಸತೀಶ ನೇತೃತ್ವದ ತಂಡ ಮತ್ತೆ ದಾಳಿ ನಡೆಸಿದ ವೇಳೆ ಆರೋಪಿ ಮೋಹನ್‌ ಕತ್ತಿ ಬೀಸಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಆದರೆ ಆತನ ಮಗ ಚಂದ್ರಶೇಖರ್‌ ಸಿಕ್ಕಿಬಿದ್ದಿದ್ದು, ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆತ ಕಳೆದ ಮೂರುವರ್ಷದಿಂದ ಜೈಲಿನಲ್ಲಿದ್ದಾನೆ. ಆದರೆ ಎ1 ಆರೋಪಿ ಮೋಹನ್‌ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದ.

ದಟ್ಟಡವಿಯಲ್ಲಿ ಶೆಡ್‌:

ಜುಲೈ 22ರೊಳಗೆ ಆರೋಪಿ ಮೋಹನ್‌ ಬಂಧನಕ್ಕೆ ಶಿವಮೊಗ್ಗ ಸೆಷನ್ಸ್‌ ನ್ಯಾಯಾಲಯ ಗಡುವು ವಿಧಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ನಗರ ಠಾಣೆಯ ಪ್ರಭಾರ ಪಿಎಸ್‌ಐ ಸೂರಪ್ಪ, ಎಎಸ್‌ಐ ಶ್ರೀಪಾದ್‌, ಉದಯಕುಮಾರ್‌, ಗಂಗಪ್ಪ ಬಟೋಳಿ, ಗಂಗಪ್ಪ ತುಂಗಳ್‌, ರಮೇಶ ನೇತೃತ್ವದ ತಂಡ ಖಚಿತ ಮಾಹಿತಿ ಮೇಲೆ ರಾತ್ರಿ ವೇಳೆ ಬಂಡೋಡಿಯ ದಟ್ಟಡವಿ ನುಗ್ಗಿ ಶೋಧಕಾರ್ಯ ನಡೆಸಿದೆ. ಕಾಡಿನ ಮಧ್ಯೆ ಶೆಡ್‌ ಕಂಡುಬಂದಿದ್ದು ಅದರ ಮೇಲೆ ದಾಳಿ ನಡೆಸಿದಾಗ ಆರೋಪಿ ಮೋಹನ್‌ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಸೋಮವಾರ ಹಾಜರು ಪಡಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಟ್ಟಡವಿಯಲ್ಲಿ ಕಾರ್ಯಾಚರಣೆ ಸವಾಲಿನ ಕೆಲಸ:

ಚರಶ್ರ- ಕೊಡಚಾದ್ರಿ ತಪ್ಪಲಿನ ದಟ್ಟಡವಿ ಬಂಡೋಡಿಯಲ್ಲಿ ಕಾರ್ಯಾಚರಣೆ ನಡೆಸುವುದು ಸುಲಭದ ಕೆಲಸವಲ್ಲ. ವಿಪರೀತ ಮಳೆ, ಇಂಬಳದ ರಾಶಿ, ದುರ್ಗಮ ಹಾದಿ, ಒಂದೂ ಚೂರು ಎಚ್ಚರ ತಪ್ಪಿದರೂ ನೇರವಾಗಿ ಲಿಂಗನಮಕ್ಕಿ ಹಿನ್ನೀರಿಗೆ ಬೀಳುವ ಅಪಾಯವಿದ್ದರೂ ಸೂರಪ್ಪ ನೇತೃತ್ವದ ತಂಡ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ಗಮನ ಸೆಳೆದಿದೆ.