ಅಪ್ರಾಪ್ತೆ ಮೇಲೆ ರೇಪ್, ಮನನೊಂದು ಬಾಲಕಿ ಆತ್ಮಹತ್ಯೆ ಕೇಸ್: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಆರೋಪಿತನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ರೂ.1,25 ಲಕ್ಷ ದಂಡ ವಿಧಿಸಿ FTSC -1 ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೇ ಮೃತ ಬಾಲಕಿ ಕುಟುಂಬಕ್ಕೆ ರೂ.17 ಲಕ್ಷ ಪರಿಹಾರ ನೀಡಲು ಸರ್ಕಾರಕ್ಕೆ ಆದೇಶಿಸಿದೆ.
ಶಿವಮೊಗ್ಗ(ನ.06): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರಿಂದ ಮನನೊಂದು ಅಪ್ರಾಪ್ತೆ ನೇಣುಹಾಕಿಕೊಂಡು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ರೂ.1,25 ಲಕ್ಷ ದಂಡ ವಿಧಿಸಿ FTSC -1 ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೇ ಮೃತ ಬಾಲಕಿ ಕುಟುಂಬಕ್ಕೆ ರೂ.17 ಲಕ್ಷ ಪರಿಹಾರ ನೀಡಲು ಸರ್ಕಾರಕ್ಕೆ ಆದೇಶಿಸಿದೆ.
2020ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 23 ವರ್ಷದ ಯುವಕನೊಬ್ಬನು 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಇದರಿಂದ ಮನನೊಂದ ಬಾಲಕಿಯು ನೇಣು ಹಾಕಿ ಕೊಂಡು ಮೃತಪಟ್ಟಿರುತ್ತಾಳೆಂದು ಮೃತ ಬಾಲಕಿಯ ತಂದೆ ದೂರು ನೀಡಿದ್ದರು. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು.
ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲಿ ಕೊಲೆಯಾದ್ರಾ ಸರ್ಕಾರಿ ಅಧಿಕಾರಿ ಪ್ರತಿಮಾ? ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ!
ತನಿಖಾಧಿಕಾರಿ ಗಿರೀಶ್ ಬಿ.ಸಿ, ಪೊಲೀಸ್ ವೃತ್ತ ನಿರೀಕ್ಷಕರು, ಹೊಸನಗರ ವೃತ್ತ ರವರು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹರಿಪ್ರಸಾದ್ ಮತ್ತು ಮಮತ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದರು. FTSC-1 ನ್ಯಾಯಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತು.
ಆರೋಪಿಯ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಲತಾ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1,25,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ತೀರ್ಪು ಹಾಗೂ ಮೃತ ಬಾಲಕಿಯ ಕುಟುಂಬಸ್ಥರಿಗೆ ಪರಿಹಾರವಾಗಿ ಸರ್ಕಾರದಿಂದ 17,00,000 ರೂ. ನೀಡಲು ಆದೇಶಿಸಿದ್ದಾರೆ.