ಕಾರವಾರದ ಪಿಕಳೆ ಆಸ್ಪತ್ರೆಯ ಔಷಧ ವಿತರಕ ರಾಜೀವ ಪಿಕಳೆ, ಅವಧಿ ಮೀರಿದ ಮಾತ್ರೆ ನೀಡಿದ ವಿಡಿಯೋ ವೈರಲ್ ಆದ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ 'ನನ್ನ ಸಾವಿಗೆ ನಾನೇ ಕಾರಣ' ಎಂದು ಬರೆದ ಡೆತ್ ನೋಟ್ ಪತ್ತೆಯಾಗಿದೆ.
ಅಂಕೋಲಾ: ಕಾರವಾರದ ಪಿಕಳೆ ಆಸ್ಪತ್ರೆಯಲ್ಲಿ ಔಷಧ ವಿತರಕರಾಗಿ ಕೆಲಸ ಮಾಡುತ್ತಿದ್ದ ರಾಜೀವ ಪಿಕಳೆ (67) ಶುಕ್ರವಾರ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠಾಕೇರಿಯ ತಮ್ಮ ಮನೆಯ ತುಳಸಿಕಟ್ಟೆಯ ಎದುರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಬಲ್ ಬ್ಯಾರಲ್ ಗನ್‌ನಿಂದ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾರೆ.
ಬೆಳಗ್ಗೆ ಕೆಲಸಕ್ಕೆ ಬಂದ ಮಹಿಳೆ ತುಳಸಿಕಟ್ಟೆಯ ಬಳಿ ಬಿದ್ದ ರಕ್ತಸಿಕ್ತ ಮೃತದೇಹ ನೋಡಿ ಸುತ್ತಮುತ್ತಲಿನ ಸಾರ್ವಜನಿಕರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಪೋಲಿಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ವೈರಲ್ ಆಗಿತ್ತು ಸುದ್ದಿ
ರಾಜೀವ ಅವರು ಆಸ್ಪತ್ರೆಗೆ ದಾಖಲಾದ ರೋಗಿಯೋರ್ವರಿಗೆ ಅವಧಿ ಮೀರಿದ ಮಾತ್ರೆ ನೀಡಿರುವ ವಿಚಾರವಾಗಿ ಸಾಮಾಜಿಕ ತಾಲತಾಣಗಳಲ್ಲಿ ವಿಡಿಯೋ ಭಾರಿ ವೈರಲ್ ಆಗಿತ್ತು. ಈ ಕುರಿತು ಸಾರ್ವಜನಿಕವಾಗಿ ಅವರು ಕ್ಷಮೆಯಾಚಿಸಿದ್ದರು ಎಂದು ತಿಳಿದು ಬಂದಿದೆ. ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೀವ ಪಿಕಳೆ, ಈ ಘಟನೆಯಿಂದ ನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಮೃತ ರಾಜೀವ ಅವರ ಸಹೋದರ ನಿತಿನ ಪಿಕಳೆ ಹೇಳಿದ್ದಾರೆ.
ಡೆತ್ ನೋಟ್:
ಪೊಲೀಸರು ಮನೆ ಪರಿಶೀಲಿಸುತ್ತಿರುವ ವೇಳೆ ಕೊಠಡಿಯ ಒಳಗೆ ಡೆತ್ ನೋಟ್ ದೊರೆತಿದ್ದು, ನನ್ನ ಸಾವಿಗೆ ನಾನೇ ಕಾರಣ ಹೊರತು ಮತ್ತೆ ಏನೂ ಇಲ್ಲ ಎಂದು ಬರೆದು ಸಹಿ ಹಾಕಿದ್ದಾರೆ.


