ಬೆಂಗಳೂರು(ಫೆ.19): ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಮತ್ತು ತಾಂತ್ರಿಕ ಸೀಟು ಕೊಡಿಸುವುದಾಗಿ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ವಂಚನೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೋಲ್ಕತ್ತಾ ಮೂಲದ ಶೈಲೇಶ್‌ ಕೋಥಾರಿ (48) ಬಂಧಿತ. ಆರೋಪಿಯಿಂದ ಎರಡು ಲಕ್ಷ ಹಣ ಮತ್ತು 10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪಿ 2019ರ ಅಕ್ಟೋಬರ್‌ನಲ್ಲಿ ಆಂಗ್ಲ ಭಾಷೆಯ ಪತ್ರಿಕೆಯೊಂದರಲ್ಲಿ ಎಂಬಿಎ, ಎಂಬಿಬಿಎಸ್‌, ಬಿ-ಟೆಕ್‌ ಸೀಟುಗಳಿಗಾಗಿ ಸಂಪರ್ಕಿಸುವಂತೆ ಮೊಬೈಲ್‌ ಸಂಖ್ಯೆ ನೀಡಿ ಜಾಹೀರಾತು ನೀಡಿದ್ದ. ಜಾಹೀರಾತು ನೋಡಿದ ಚೆನ್ನೈ ಮೂಲದ ಬೂಬೇಶ್‌ ಭಾರತಿ ಎಂಬುವರು ಸಂಬಂಧಿಯೊಬ್ಬರಿಗೆ ಬಿ-ಟೆಕ್‌ ಸೀಟು ಅಗತ್ಯ ಇದ್ದರಿಂದ ಆರೋಪಿಯನ್ನು ಸಂಪರ್ಕ ಮಾಡಿದ್ದರು. ಚೆನ್ನೈನ ಭಾರತ್‌ ವಿಶ್ವವಿದ್ಯಾಲಯದಲ್ಲಿ ಬಿ-ಟೆಕ್‌ ಎಂಜಿನಿಯರಿಂಗ್‌ ಸೀಟು ಕೊಡಿಸುವುದಾಗಿ ಹೇಳಿ ಎರಡು ಲಕ್ಷಕ್ಕೆ ಮಾತುಕತೆ ಮಾಡಿಕೊಂಡಿದ್ದರು. ಹಣ ಪಡೆದು ಕೆಲ ತಿಂಗಳಾದರೂ ಸೀಟು ಸಿಕ್ಕಿರಲಿಲ್ಲ. ಆರೋಪಿ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್‌ ಆಫ್‌ ಆಗಿತ್ತು. ಈ ಸಂಬಂಧ ಬೂಬೇಶ್‌ ಶ್ರೀರಾಂಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಕೊಲ್ಕತ್ತಾದಲ್ಲಿ ಬಂಧಿಸಿದ್ದಾರೆ.

2 ಆಧಾರ್‌ ಕಾರ್ಡ್‌: 

ಆರೋಪಿ ಬೆಂಗಳೂರು ಸೇರಿದಂತೆ ಏಳು ಜನಕ್ಕೆ ವಂಚನೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಬಳಿ ಬೆಂಗಳೂರು ಹಾಗೂ ಕೋಲ್ಕತ್ತಾ ವಿಳಾದಲ್ಲಿನ ಎರಡು ಆಧಾರ್‌ ಕಾರ್ಡ್‌ ಪತ್ತೆಯಾಗಿದೆ. ಒಂದು ಆಧಾರ್‌ ಕಾರ್ಡ್‌ನಲ್ಲಿ ಪಶ್ಚಿಮ ಬಂಗಾಳ ಮೂಲದ ಗೌರೇಶ್‌ ಕುಮಾರ್‌ ಹಾಗೂ ಶೈಲೇಶ್‌ ಎಂಬ ಹೆಸರಿನಲ್ಲಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.