*  ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್‌ ಸ್ಥಾವರ*  ವಿದ್ಯುತ್‌ ಸ್ಥಾವರದ ಟಿಪಿ-2 ಕಲ್ಲಿದ್ದಲು ಘಟಕದಲ್ಲಿ ನಡೆದ ಅವಘಡ*  ಅವಘಡದಿಂದ ಯಾವುದೇ ಆಸ್ತಿ ಹಾಗೂ ಜೀವ ಹಾನಿಯಾಗಿಲ್ಲ 

ಕೊಲ್ಹಾರ(ಜೂ.11): ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಶುಕ್ರವಾರ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.

ಶುಕ್ರವಾರ ಬೆಳಗ್ಗೆ 8​​.30ರ ಸುಮಾರಿಗೆ ವಿದ್ಯುತ್‌ ಸ್ಥಾವರದ ಟಿಪಿ-2 ಕಲ್ಲಿದ್ದಲು ಘಟಕದಲ್ಲಿ ಈ ಅವಘಡ ನಡೆದಿದ್ದು, ಕಲ್ಲಿದ್ದಲು ಸಾಗಣೆಯ ಯಂತ್ರ ಚಾಲನೆಯಲ್ಲಿ ಇರುವಾಗ ಬೇರಿಂಗ್‌ ತಿರುಗುತ್ತ ಶಾಖೋತ್ಪನ್ನ ಉಂಟಾಗಿ ಚಕ್ರದ ರಬ್ಬರ್‌ ಬೆಲ್ಟ್‌ಗೆ ಬೆಂಕಿ ತಗುಲಿ ಈ ಬೆಂಕಿ ದುರಂತ ಸಂಭವಿಸಿದೆ.

Vijayapura: ಆಸ್ತಿ ಮಾರಲು ಬಿಡದ ಪತ್ನಿ ಮೇಲೆ ಸಿಟ್ಟು: ಮಕ್ಕಳಿಗೆ ವಿಷ ಹಾಕಿದ ಅಪ್ಪ!

ಬೆಂಕಿ ತಗುಲುತ್ತಿದ್ದಂತೆಯೇ ಸ್ಥಾವರದ ಅಗ್ನಿ ಶಾಮಕ ದಳ ಸಿಬ್ಬಂದಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಕಾಲಿಕ ಕ್ರಮದಿಂದಾಗಿ ಭಾರಿ ಅನಾಹುತ ತಪ್ಪಿದೆ.

ಮೇ 5ರಂದು ಎನ್‌ಟಿಪಿಸಿ ಉಷ್ಣ ವಿದ್ಯುತ್‌ ಸ್ಥಾವರದ ಆವರಣದಲ್ಲಿ ನಿರುಪಯುಕ್ತ ವಸ್ತುಗಳಿಗೆ ಬೆಂಕಿ ತಗುಲಿತ್ತು. ಮತ್ತೆ ಒಂದು ತಿಂಗಳು ನಂತರ ಬೆಂಕಿ ಆಕಸ್ಮಿಕ ಸಂಭವಿಸಿದೆ. ಇದು ಚಿಕ್ಕ ಬೆಂಕಿ ಅವಘಡ. ಈ ಅವಘಡದಿಂದ ಯಾವುದೇ ಆಸ್ತಿ ಹಾಗೂ ಜೀವ ಹಾನಿಯಾಗಿಲ್ಲ ಎಂದು ಎನ್‌ಟಿಪಿಸಿ ಮೂಲಗಳು ತಿಳಿಸಿವೆ.