Vijayapura: ಆಸ್ತಿ ಮಾರಲು ಬಿಡದ ಪತ್ನಿ ಮೇಲೆ ಸಿಟ್ಟು: ಮಕ್ಕಳಿಗೆ ವಿಷ ಹಾಕಿದ ಅಪ್ಪ!
* ಎಗ್ ರೈಸ್‌ನಲ್ಲಿ ವಿಷಹಾಕಿ ಮಕ್ಕಳು, ಪತ್ನಿಗೆ ನೀಡಿದ ಪಾಪಿ ಪತಿ..!
* 2 ವರ್ಷದ ಗಂಡು ಮಗುಸಾವು, ಕಸ ಹೊಡೆಯಲು ಹೋದ ಪತ್ನಿ ಬಚಾವ್..!
* ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಒದ್ದಾಡ್ತಿರೋ ಪುತ್ರಿ..!
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಜೂ.09): ಮಾಡಿದ ಸಾಲ ತೀರಿಸಲು ತನ್ನ ಪಾಲಿನ ಆಸ್ತಿ ಮಾರಲು ಪತ್ನಿ ಅಡ್ಡವಾಗಿದ್ದಾಳೆಂದು ಹೇಳಿ ಎಗ್‌ರೈಸ್‌ನಲ್ಲಿ ವಿಷ ಬೆರೆಸಿ ಕುಟುಂಬದೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗೊನಾಳ ಎಸ್‌ಎಸ್ ಗ್ರಾಮದಲ್ಲಿ ಜೂನ್ 2ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಎಗ್ ರೈಸ್‌ನಲ್ಲಿ ವಿಷವಿಟ್ಟ ಹೆತ್ತ ತಂದೆ: ಆಸ್ತಿ ಮಾರಲು ಬಿಡದ ಪತ್ನಿಯ ಜೊತೆಗೆ ಜಗಳವಾಡಿದ ಆಸಾಮಿ ಮಕ್ಕಳಿಗೆ, ಪತ್ನಿಗೆ ಎಗ್ ರೈಸ್‌ನಲ್ಲಿ ವಿಷ ಹಾಕಿ ಕೊಟ್ಟಿದ್ದಾನೆ. ಎಗ್ ರೈಸ್ ತಿಂದ ಎರಡೂವರೆ ವರ್ಷದ ಮಗು ಮೃತಪಟ್ಟರೆ, ಐದು ವರ್ಷದ ಬಾಲಕಿ ತೀವ್ರ ಅಸ್ವತ್ಥಗೊಂಡಿದ್ದಾಳೆ. ನಿಡಗುಂದಿ ತಾಲೂಕಿನ ಇಟಗಿ ಗ್ರಾಮದವನಾದ ಚಂದ್ರಶೇಖರ ಶಿವಪ್ಪ ಅರನಾಳ ಪುತ್ರ ಶಿವರಾಜ (2 ವರೆ ವರ್ಷ) ಮೃತಪಟ್ಟರೆ, ರೇಣುಕಾ (5) ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾಳೆ.
ವಿಜಯಪುರದಲ್ಲಿದೆ ಜಗತ್ತಿನ ಅತಿದೊಡ್ಡ ಲಿಪಿ ಕಟ್ಟಡ: ಭೂಕಂಪನಕ್ಕೂ ಇದು ಜಗ್ಗಲ್ಲ..!
ಕಸ ಹೊಡೆಯಲು ಹೋಗಿ ಬಚಾವ್ ಆದ ಪತ್ನಿ: ಚಂದ್ರಶೇಖರ್ ಎಗ್ ರೈಸ್‌ನಲ್ಲಿ ವಿಷಹಾಕಿ ಕೊಟ್ಟಿದ್ದನ್ನ ಮಕ್ಕಳೇನೋ ತಿಂದಿವೆ. ಆದ್ರೆ ಅದೃಷ್ಟವಶಾತ್ ಈತನ ಪತ್ನಿ ಸಾವಿತ್ರಿ ಕಸ ಹೊಡೆದ ನಂತರ ತಿನ್ನುವೆ ಎಂದು ಹೇಳಿದ್ದರಿಂದ ಬದುಕುಳಿದಿದ್ದಾಳೆ. ಎಗ್ ರೈಸ್ ತಿಂದ ಮಕ್ಕಳು ನರಳಾಡೋಕೆ ಶುರು ಮಾಡಿದ್ದರಿಂದ ಪತ್ನಿಗೆ ಅನುಮಾನ ಬಂದು ಎಗ್ ರೈಸ್ ತಿನ್ನದೆ ಮೊದಲು ಮಕ್ಕಳನ್ನ ಆಸ್ಪತ್ರೆಗೆ ಕೊಂಡೊಯ್ದಿದ್ದಾಳೆ. ಆದ್ರೆ ದುರಾದೃಷ್ಟವಶಾತ್ ಒಂದು ಮಗು ಸಾವನ್ನಪ್ಪಿದೆ.
ಪತಿ ವಿರುದ್ಧ ಪತ್ನಿಯಿಂದ ದೂರು ದಾಖಲು: ಜೂನ್ 2 ರಂದೇ ಈ ಘಟನೆ ಜರುಗಿದ್ದು, ತನ್ನ ಪತಿಯೇ ಈ ಕೃತ್ಯ ನಡೆಸಿದ್ದು ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಂದ್ರಶೇಖರನ ಪತ್ನಿ ದೂರು ನೀಡಿದ್ದು, ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ತಂದೆಯೇ ಮಕ್ಕಳಿಗೆ ವಿಷವಿಟ್ಟ ಪ್ರಕರಣ?: ನಿಡಗುಂದಿ ತಾಲೂಕಿನ ಇಟಗಿ ಗ್ರಾಮದವನಾದ ಚಂದ್ರಶೇಖರ ಶಿವಪ್ಪ ಅರನಾಳನಿಗೆ ಗೋನಾಳ ಎಸ್.ಎಸ್ ಗ್ರಾಮದ ಸಾವಿತ್ರಿಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಇವರಿಗೆ ಪುತ್ರ, ಪುತ್ರಿ ಇದ್ದರು. ಆರೋಪಿ ಚಂದ್ರಶೇಖರ್ ಜನರಿಂದ ಕೈಗಡ ಸಾಲ ಪಡೆದಿದ್ದ. ಹೀಗಾಗಿ ಆತನ ಕಿರಿಕಿರಿಗೆ ಪತ್ನಿ ಸಾವಿತ್ರಿ ಎರಡು ಮಕ್ಕಳನ್ನು ಕರೆದುಕೊಂಡು ತಾಳಿಕೋಟೆ ತಾಲೂಕಿನ ಗೋನಾಳ ಎಸ್.ಎಸ್ ಗ್ರಾಮದ ತನ್ನ ತವರು ಮನೆಯಲ್ಲಿ ವಾಸವಿದ್ದಳು.
ಜೂ.2 ರಂದು ಚಂದ್ರಶೇಖರ ಮತ್ತು ಸಂಬಂಧಿಕರೆಲ್ಲರೂ ಕೂಡಿಕೊಂಡು ಗೋನಾಳದ ಮನೆಗೆ ಬಂದು ಸಾಲತೀರಿಸಲು ಆಸ್ತಿ ಮಾರಾಟದ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಇದಕ್ಕೆ ಸಾವಿತ್ರಿ ಒಪ್ಪಿಲ್ಲ. ಇದಕ್ಕೆ ಸಂಬಂಧಿಕರು ಸಾವಿತ್ರ ಮೇಲೆ ಸಿಟ್ಟು ಮಾಡಿಕೊಂಡು ಹೊರಹೋಗಿದ್ದಾರೆ. ಆದರೆ, ಸಾವಿತ್ರಿ ಪತಿ ಚಂದ್ರಶೇಖರ್ ಮನೆಯಲ್ಲಿಯೇ ಉಳಿದುಕೊಂಡ ನಂತರ ಮನೆಯಿಂದ ಹೊರಗೆ ಹೋಗಿ ಬರುವೆನೆಂದು ಹೇಳಿ ಸಂಜೆ ಮನೆಗೆ ವಾಪಸಾಗುವಾಗ ಎಗ್‌ರೈಸ್ ತೆಗೆದುಕೊಂಡು ಬಂದು ಪತ್ನಿಗೆ ಮತ್ತು ಮಕ್ಕಳಿಗೆ ತಿನ್ನಲು ನೀಡಿ ಹೊರಗೆ ಹೋಗಿದ್ದಾನೆ. ಆದರೆ, ಪತ್ನಿ ಸಾವಿತ್ರಿ ಅದನ್ನು ತಿನ್ನದೇ ಮಕ್ಕಳಿಗೆ ನೀಡಿ ಮನೆಯಲ್ಲಿ ಕಸಗೂಡಿಸುವ ಕೆಲಸದಲ್ಲಿ ತೊಡಗಿದ್ದಾಳೆ.
ಎಗ್ ರೈಸ್ ತಿಂದು ವಾಂತಿ ಮಾಡಿಕೊಂಡು ನರಳಾಡಿದ ಮಕ್ಕಳು: ಅಪ್ಪ ತಂದ ಎಗ್ ರೈಸ್ ತಿಂದ ಮಕ್ಕಳಿಬ್ಬರು ನೆಲಕ್ಕುರುಳಿ ಒದ್ದಾಡುತ್ತಿದ್ದಾರೆ. ಆ ಸಮಯದಲ್ಲಿ ಓಡಿ ಬಂದು ನೋಡುವಷ್ಟರಲ್ಲಿ ಎರಡೂ ಮಕ್ಕಳು ವಾಂತಿ ಮಾಡಿಕೊಳ್ಳುತ್ತಿದ್ದರು. ಆಗ ತಕ್ಷಣವೇ ಸಾವಿತ್ರಿ ಮತ್ತು ಅವರ ತಾಯಿ ಬಸಮ್ಮ ಹಾಗೂ ಸಂಬಂಧಿಕರು ವಾಹನದಲ್ಲಿ ಮಕ್ಕಳನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿಯೇ ಪುತ್ರ ಶಿವರಾಜ ಮೃತಪಟ್ಟಿದ್ದಾನೆ. ಇನ್ನೊಬ್ಬ ಮಗಳು ರೇಣುಕಾಗೆ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ವಿಜಯಪುರಕ್ಕೆ ರವಾನಿಸಿದರು.
ಬಸವ ಜನ್ಮಭೂಮಿಯಲ್ಲಿ Vijayapura DCಯಿಂದ ಸಾರ್ವಜನಿಕ ಅಹವಾಲು ಸ್ವೀಕಾರ!
ಚಿಕಿತ್ಸೆಗೆ ಹಣವಿಲ್ಲದೆ ತಾಯಿ ಪರದಾಟ: ಸದ್ಯ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಮಗಳು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ. ಪುತ್ರಿಯ ಆಸ್ಪತ್ರೆ ಖರ್ಚಿಗೆಂದು ಹಣ ಹೊಂದಿಸಲು ಸಾವಿತ್ರ ಗೊನಾಳ ಗ್ರಾಮಕ್ಕೆ ಬಂದಿದ್ದಾಳೆ. ಆಗ ಆಕೆಯ ಪತಿ ಚಂದ್ರಶೇಖರ ಮನೆಗೆ ಬಂದು ನನಗೆ ಸಾಲ ಬಹಳ ಆಗಿದೆ. ತೀರಿಸುವುದು ನನ್ನಿಂದ ಆಗುವುದಿಲ್ಲವೆಂದು ಅಂದು ಎಗ್‌ರೈಸ್‌ನಲ್ಲಿ ವಿಷ ಬೆರೆಸಿಕೊಂಡು ತಂದು ಕೊಟ್ಟೆ. ನಿಮಗೆಲ್ಲರಿಗೂ ತಿನ್ನಿಸಿ ಕೊನೆಗೆ ನಾನೂ ತಿಂದು ಸಾಯಬೇಕು ಎಂದು ಮಾಡಿದ್ದೆ ಎಂದು ಪತ್ನಿ ಎದುರು ಹೇಳಿಕೊಂಡಿದ್ದಾನೆ ಎಂದು ದೂರಿನಲ್ಲಿ ಸಾವಿತ್ರಿ ತಿಳಿಸಿದ್ದಾಳೆ. ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ವಿನೋದ ದೊಡಮನಿ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.