ಹಾವೇರಿ(ಜ.30): ಯುವತಿ ಮೇಲೆ ಆ್ಯಸಿಡ್‌ ದಾಳಿ ನಡೆಸಿ ಪರಾರಿಯಾಗಿದ್ದ ಯುವಕನನ್ನು ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ತಲೆಮರೆಸಿಕೊಂಡಿದ್ದ ಪ್ರಸಾದ ಚಿಕ್ಕಳ್ಳಿ (26) ಬಂಧಿತ ಆರೋಪಿಯಾಗಿದ್ದು, ಎಸ್‌ಪಿ ಕೆ.ಜಿ. ದೇವರಾಜು ಮಾರ್ಗದರ್ಶನದಲ್ಲಿ ಸಿಪಿಐ ಪ್ರಭಾವತಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬುಧವಾರ ಮಧ್ಯಾಹ್ನ ಆರೋಪಿಯನ್ನು ಬಂಧಿಸಿದ್ದಾರೆ.

https://kannada.asianetnews.com/haveriಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಂಧಿತ ಆರೋಪಿ ಹಾವೇರಿ ತಾಲೂಕು ಕೆರಿಮತ್ತಿಹಳ್ಳಿಯಲ್ಲಿರುವ ಕವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಕೆಲ ವರ್ಷಗಳ ಹಿಂದೆ ಎಂಎ ಪತ್ರಿಕೋದ್ಯಮ ಓದುತ್ತಿದ್ದ. ಇದೇ ಕೇಂದ್ರದಲ್ಲಿ ಯುವತಿಯು ಎಂಎಸ್‌ಡಬ್ಲ್ಯೂ ಅಧ್ಯಯನ ಮಾಡಲು ಸೇರಿದ್ದಳು. ಈ ಸಮಯದಲ್ಲಿ ಇಬ್ಬರು ಪರಿಚಿತರಾಗಿದ್ದರು. ಕಾಲೇಜು ಮುಗಿದ ಮೇಲೆಯೂ ಇಬ್ಬರಿಗೂ ಸ್ನೇಹವಿತ್ತು. ಇತ್ತೀಚೆಗೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತಾನು ಪಾಸಾಗಿದ್ದು, ಉನ್ನತ ಹುದ್ದೆಗೇರುತ್ತೇನೆ. ನನ್ನನ್ನು ಮದುವೆಯಾಗು ಎಂದು ಯುವಕ ಪೀಡಿಸುತ್ತಿದ್ದನಂತೆ. ಯುವತಿಯು ಅವನ ಹಿನ್ನೆಲೆ ವಿಚಾರಿಸಿದಾಗ ಅದು ಸುಳ್ಳು ಎಂದು ತಿಳಿದುಬಂದಿದೆ. ಇದರಿಂದ ಯುವತಿ ಆತನಿಂದ ದೂರವಾಗಿದ್ದಾಳೆ. ಆದರೂ ಪದೇ ಪದೇ ಪೀಡಿಸುತ್ತಿದ್ದ ಆರೋಪಿ ಪ್ರಸಾದನನ್ನು ಯುವತಿ ನಿರಾಕರಿಸಿದ್ದರಿಂದ ಆ್ಯಸಿಡ್‌ ಎರಚಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

ಆಗಿದ್ದೇನು?:

ಹಾವೇರಿ ನಗರದ ಯುವತಿಯಾದ ಸಂತ್ರಸ್ತೆ ಬ್ಯಾಡಗಿಯ ಗಾರ್ಮೆಂಟ್ಸ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಕೆಲಸ ಮುಗಿಸಿಕೊಂಡು ಮರಳಿ ಹಾವೇರಿಗೆ ಬಂದು ಬಸ್‌ ಇಳಿಯುವಾಗ ಆರೋಪಿಯು ಬೈಕ್‌ನಲ್ಲಿ ಬಂದು ಆ್ಯಸಿಡ್‌ ಎರಚಿ ಪರಾರಿಯಾಗಿದ್ದ. ಈ ವೇಳೆ ಯುವತಿ ಚೀರಾಡಿದ್ದಾಳೆ. ಸ್ಥಳದಲ್ಲಿದ್ದ ಸಾರ್ವಜನಿಕರು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಮುಖ, ಕೈ ಸೇರಿದಂತೆ ವಿವಿಧ ಅಂಗಾಂಗಳು ಸುಟ್ಟಿದ್ದು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಕುರಿತು ಹಾವೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು ಅವರು, ಆ್ಯಸಿಡ್‌ ದಾಳಿ ನಡೆಸಿದ್ದ ಯುವಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಜ. 30ರಂದು ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.