ಸಿಂಧನೂರು ನಗರಸಭೆ ಕಚೇರಿ ಮೇಲೆ ದಾಳಿ: ಮಹತ್ವದ ದಾಖಲೆಗಳು ಪತ್ತೆ
ಅಕ್ರಮದ ಆರೋಪ ಹಿನ್ನೆಲೆ ಸಿಂಧನೂರು ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ ಮಾಡಿದೆ. ಎಂಟು ಜಿಲ್ಲೆಯ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳು ಪತ್ತೆಯಾಗಿವೆ
ರಾಯಚೂರು, (ಜೂನ್.30): ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ಅನಗತ್ಯ ವಿಳಂಬ ಮಾಡುವುದರ ಜತೆಗೆ ಹಣ ಪಡೆದು ಕೆಲಸ ಮಾಡುತ್ತಿರುವ ಆರೋಪದಡಿ ಸಿಂಧನೂರು ನಗರಸಭೆ ಕಚೇರಿ ಸಿಬ್ಬಂದಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು (ಮಂಗಳವಾರ) ಸುಮಾರು 40ಕ್ಕೂ ಹೆಚ್ಚು ಅಧಿಕಾರಿಗಳು ಕಚೇರಿಗೆ ದಾಂಗುಡಿ ಇಟ್ಟಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಯ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಸಣ್ಣ ಕೆಲಸ ಮಾಡಿಕೊಡಲು ಪೀಡಿಸುವುದು, ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು ದಾಳಿ ನಡೆಸಲಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಲಂಚ ಹಾವಳಿ ಬಗ್ಗೆ ಎಸಿಬಿಗೆ ದೂರುಗಳು ಸಲ್ಲಿಕೆಯಾಗಿದ್ದವು ಎಂದು ತಿಳಿದು ಬಂದಿದೆ. ಡಿಎಸ್ಪಿ ಸಂತೋಷ ಬನಹಟ್ಟಿ ನೇತೃತ್ವದಲ್ಲಿ 10 ಜನ ಪಿಎಸ್ಐ 40 ಜನ ಸಿಬ್ಬಂದಿ ಇಡೀ ಕಚೇರಿಯನ್ನು ಜಾಲಾಡಿದೆ.
ಕಚೇರಿಯನ್ನೇ ಜಾಲಾಡಿದ ಅಧಿಕಾರಿಗಳು
ಹೌದು....ಎಂಟು ಜಿಲ್ಲೆಯ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಇಡೀ ನಗರಸಭೆ ಕಚೇರಿಯನ್ನೇ ಜಾಲಾಡಿದೆ. ದಾಖಲೆಗಳ ಪರಿಶೀಲನೆ ವೇಳೆ 45 ಸಾವಿರ ರೂ. ನಗದು ಹಣ ಮತ್ತು ಕಾಮಗಾರಿ ಮುಗಿದ್ದರೂ ಬಾಕಿ ಉಳಿಸಿಕೊಂಡ ಚೆಕ್‌ಗಳು ಪತ್ತೆಯಾಗಿವೆ.
ಲೇಔಟ್ ಮಂಜೂರಾತಿಗಾಗಿ ವಿನಾಕಾರಣ ಬಾಕಿ ಉಳಿಸಿಕೊಂಡ 14 ಫೈಲ್ ಪತ್ತೆ. ಅನಾವಶ್ಯಕವಾಗಿ ವಿಲೇವಾರಿ ಮಾಡದೇ ಉಳಿಸಿಕೊಂಡ ನೂರಾರು ಫೈಲ್‌ಗಳು ಪತ್ತೆಯಾಗಿವೆ.
ಸ-ಕಾಲದ ಯೋಜನೆಯಲ್ಲಿ 7 ದಿನಗಳಲ್ಲಿ ಕೆಲಸ ಮುಗಿಸಬೇಕು. ಆದ್ರೆ, ತಿಂಗಳು ಕಳೆದರೂ ಕೆಲಸ ಮಾಡದೇ ಹಾಗೇ ಉಳಿಸಿಕೊಂಡ ನೂರಾರು ದಾಖಲೆಗಳು ಸಿಕ್ಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.