ವಿಜಯಪುರ:ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ, 2.5 ಲಕ್ಷ ನಗದು ವಶ
ಮೋಟಾರ್ ವಾಹನ ಇನ್ಸಪೆಕ್ಟರ್ ವಶ, 20 ಜನ ಏಜಂಟ್ ವಿಚಾರಣೆ| ಎಸಿಬಿ ಎಸ್.ಪಿ. ಅಮರನಾಥ ಮಾರ್ಗದರ್ಶನದಲ್ಲಿ ಡಿಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ದಾಳಿ|ನಿಗದಿತ ಹಣಕ್ಕಿಂತ ಹೆಚ್ಚಿನ ಹಣವನ್ನು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪಡೆಯಲಾಗುತ್ತಿದೆ ಎಂದು ಸಾರ್ವಜನಕರಿಂದ ದೂರು|
ವಿಜಯಪುರ(ಡಿ.06): ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮೇಲೆ ಗುರುವಾರ ಸಂಜೆ ಎಸಿಬಿ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ಓರ್ವ ಮೋಟಾರ್ ವಾಹನ ಇನ್ಸಪೆಕ್ಟರ್ನ್ನು ವಶ ಪಡೆದು, 2.5 ಲಕ್ಷ ನಗದು, 5 ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.
ನಿಗದಿತ ಹಣಕ್ಕಿಂತ ಹೆಚ್ಚಿನ ಹಣವನ್ನು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಹಠಾತ್ ದಾಳಿ ನಡೆಸಿದ್ದಾರೆ. ಎಸಿಬಿ ಪೊಲೀಸರು, ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರವೇಶಿಸುತ್ತಿದ್ದಂತೆಯೇ ಕಚೇರಿ ವರಾಂಡದ ಗೇಟ್ ಬಂದ್ ಮಾಡಿ ಏಜಂಟ್‌ರನ್ನು ವಿಚಾರಣೆಗೆ ಒಳಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಸಿಬಿ ಎಸ್.ಪಿ. ಅಮರನಾಥ ಮಾರ್ಗದರ್ಶನದಲ್ಲಿ ಡಿಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ಈ ದಾಳಿ ನಡೆಸಿ ಮೋಟಾರ್ ವಾಹನ ಇನ್ಸಪೆಕ್ಟರ್ ರವಿಶಂಕರ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಅಲ್ಲದೆ 20 ಜನ ಎಜಂಟ್‌ರನ್ನೂ ವಿಚಾರಣೆ ನಡೆಸಲಾಯಿತು. ಈ ವೇಳೆ 20 ಜನ ಏಜಂಟ್‌ರ ಬಳಿಯಿದ್ದ 2.5 ಲಕ್ಷ ನಗದು, 5 ಮೊಬೈಲ್ ವಶ ಪಡೆದು, ಅವರ ಬಳಿಯಿದ್ದ ದಾಖಲಾತಿಗಳನ್ನೂ ಪರಿಶೀಲಿಸಿ, ಸುದೀರ್ಘ ವಿಚಾರಣೆ ನಡೆಸಲಾಯಿತು. ಸದ್ಯಕ್ಕೆ ತನಿಖೆ ನಡೆಯುತ್ತಿದೆ. ನಂತರ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು ಎಂದು ಎಸಿಬಿ ಎಸ್ಪಿ ಅಮರನಾಥ ತಿಳಿಸಿದರು.
ಎಸಿಬಿ ಇನ್ಸಪೆಕ್ಟರ್‌ಗಳಾದ ಎಸ್.ಆರ್. ಗಣಾಚಾರಿ, ಸಚಿನ ಚಲವಾದಿ, ಚಂದ್ರಶೇಖರ ಮಠಪತಿ, ಮಂಜುನಾಥ ಹಿರೇಮಠ, ರಾಘವೇಂದ್ರ ಹಳ್ಳೂರ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.