ಆಲಮಟ್ಟಿ: ACB ದಾಳಿ, ಲಂಚ ಸಮೇತ ಸಿಕ್ಕಿ ಬಿದ್ದ ಭ್ರಷ್ಟ ಅಧಿಕಾರಿ
ವಿಶೇಷ ಭೂಸ್ವಾಧೀನಾಧಿಕಾರಿ ಎಸಿಬಿ ಬಲೆಗೆ| ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ| ಬಾಕಿ ಕಡತಗಳ ಪರಿಶೀಲನೆ|
ಆಲಮಟ್ಟಿ(ಜು.02): ಇಲ್ಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮೇಲೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಒಬ್ಬ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ವಿಷಯ ನಿರ್ವಾಹಕ ಎ.ಎಂ.ಬಾಣಕಾರ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ವಕೀಲ ಆನಂದ ಚಂದ್ರಶೇಖರ ಕುಮಟಗಿ ಅವರಿಂದ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ದಾಳಿ ನಡೆಸಿದೆ. ಬಾಣಕಾರ 3 ಸಾವಿರ ರು. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ವಿಜಯಪುರ: ಮಹಿಳಾ ವಿವಿ ಸಿಬ್ಬಂದಿ ಕೊರೋನಾಗೆ ಬಲಿ, ಹೆಚ್ಚಿದ ಆತಂಕ
ಬಾಕಿ ಕಡತಗಳ ಪರಿಶೀಲನೆ ಮತ್ತು ತನಿಖಾ ಕಾರ್ಯ ಮುಂದುರೆದಿದೆ. ವಕೀಲ ಆನಂದ ಕುಮಟಗಿ ಅವರು ತಮ್ಮ ಕಕ್ಷಿದಾರರಿಗೆ ಸೇರಿದ ಬಸವನಬಾಗೇವಾಡಿ ತಾಲೂಕಿನ ದೇಗಿನಾಳ ಗ್ರಾಮದ ಜಮೀನುಗಳು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಸ್ವಾಧೀನ ಪಡಿಸಿಕೊಂಡಿದ್ದು ಅದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಭೂ ಪರಿಹಾರ ಕೋರಿ 2017ರಲ್ಲಿ ಅರ್ಜಿ ತಯಾರಿಸಿ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸಲ್ಲಿಸಿದ್ದರು.ಆದರೆ ಅರ್ಜಿಯನ್ನು ನ್ಯಾಯಾಲಯಕ್ಕೆ ಕಳುಹಿಸದೇ ಕಾರಣ ಆನಂದ ಅವರು ಎಸ್‌ಎಲ್‌ಒ ರಘು ಹಾಲನಹಳ್ಳಿ ಹಾಗೂ ಕೇಸ್ ವರ್ಕರ್ ಬಾಣಕಾರ ಅವರನ್ನು ಭೇಟಿ ಮಾಡಿದಾಗ ಬಾಣಕಾರ ಅವರು ಕಡತಗಳನ್ನು ತಯಾರಿ ಮಾಡಿ ಎಸ್‌ಎಲ್‌ಒ ಟೇಬಲ್‌ಗೆ ಇಡಲು 3 ಸಾವಿರ ರು.ಗಳ ಬೇಡಿ ಇಟ್ಟಿದ್ದಾರೆ ಎಂದು ಎಸಿಬಿ ಅಧಿಕಾರಿಗಳ ಬಳಿ ದೂರು ದಾಖಲಿಸಿದ್ದರು.
ಬೆಳಗಾವಿಯ ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ವಿಜಯಪುರ ಎಸಿಬಿ ಡಿಎಸ್ಪಿ ಎಲ್.ವೇಣುಗೋಪಾಲ ನೇತೃತ್ವದಲ್ಲಿ ಇನ್ಸಪೆಕ್ಟರ್‌ಗಳಾದ ಪಿ.ಜಿ.ಕವಟಗಿ, ಹರಿಶ್ಚಂದ್ರ, ವಿಶ್ವನಾಥ ಚೌಗಲೇ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.