ಹುಬ್ಬಳ್ಳಿ(ನ.11): 6 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಧಾರವಾಡ ಜಿಪಂ ಎಂಜನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ರೊಬ್ಬರು ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾರೆ. ಈ ನಡುವೆ ಈ ಅಧಿಕಾರಿಯ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ತಂಡಕ್ಕೆ 13.80 ಲಕ್ಷ ನಗದು, ಚಿನ್ನಾಭರಣ ಪತ್ತೆಯಾಗಿದ್ದು ವಶಕ್ಕೆ ಪಡೆದಿದ್ದಾರೆ. ಧಾರವಾಡದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಮನೋಹರ ಮಂದೋಲಿ ಎಂಬುವವರೇ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ.

ಆಗಿದ್ದೇನು?:

ಕಲಘಟಗಿ ತಾಲೂಕಿನ ಕಾಮದೇನು ಗ್ರಾಮದ ಕಲ್ಲಪ್ಪ ರಾಮಪ್ಪ ಶಿರಬಡಗಿ, ಚಂದ್ರಶೇಖರಯ್ಯ ಹಿರೇಮಠ, ನಾಗರಾಜ ನವಲೂರು ಈ ಮೂವರು ಸಿವಿಲ್‌ ಕಾಮಗಾರಿಗಾಗಿ ಕ್ಲಾಸ್‌ 4ನೆಯ ಗುತ್ತಿಗೆದಾರರ ಲೈಸನ್ಸ್‌ ಪಡೆಯಲು ಸೆ. 11ರಂದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ಲೈಸನ್ಸ್‌ ಮಾಡಿ ಕೊಡಲು ತಲಾ 2 ಸಾವಿರದಂತೆ  6 ಸಾವಿರ ನೀಡುವಂತೆ ಲಂಚ ಕೇಳಿದ್ದರು. ಈ ಬಗ್ಗೆ ಮೂವರು ಎಸಿಬಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮನೋಹರ ಮಂದೋಲಿಗೆ ಅವರ ಕಚೇರಿಯಲ್ಲಿ 6 ಸಾವಿರ ಲಂಚ ನೀಡುವಾಗ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ರೆಡ್‌ ಹ್ಯಾಂಡ್‌ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದೇ ರೀತಿ ಭ್ರಷ್ಟಾಚಾರದಲ್ಲಿ ಸಾಕಷ್ಟುಹಣ ಮಾಡಿದ್ದ ಮಾಡಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಶೆಟ್ಟರ್‌ ಕಾಲನಿಯಲ್ಲಿರುವ ಮನೋಹರ ಮಂದೋಲಿ ಅವರ ನಿವಾಸದ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 13.80 ಲಕ್ಷ ನಗದು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸೇರಿದಂತೆ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಎಲ್ಲವನ್ನು ಎಸಿಬಿ ಅಧಿಕಾರಿಗಳ ತಂಡ ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.

ಸರ್ಕಾರದಲ್ಲಿ KAS ಅಧಿಕಾರಿ ಸುಧಾ ಭಾರಿ ಪ್ರಭಾವಿ: ಅಬ್ರಹಾಂ

ಎಸಿಬಿ ಉತ್ತರ ವಲಯದ ಅಧೀಕ್ಷಕ ಬಿ.ಎಸ್‌. ನೇಮಗೌಡ, ಡಿಎಸ್‌ಪಿ ಎಲ್‌. ವೇಣುಗೋಪಾಲ ಮಾರ್ಗದರ್ಶನದಲ್ಲಿ ಎಸಿಬಿ ಪಿಐ ಮಂಜುನಾಥ ಹಿರೇಮಠ ನೇತೃತ್ವದ ತಂಡ ದಾಳಿ ನಡೆಸಿತ್ತು. ದಾಳಿಯಲ್ಲಿ ಜೆ.ಜಿ. ಕಟ್ಟಿ, ಶ್ರೀಶೈಲ ಕಾಜಗಾರ, ಶಿವಾನಂದ ಕೆಲವಡಿ, ಲೋಕೇಶ ಬೆಂಡಿಕಾಯಿ, ಕಾರ್ತಿಕ ಹುಯಿಲಗೋಳ, ಎಸ್‌.ಎಸ್‌. ನರಗುಂದ ಭಾಗವಹಿಸಿದ್ದರು. ಮನೆಯ ಶೋಧದ ಕಾರ್ಯಾಚರಣೆಯಲ್ಲಿ ಪಿಐಗಳಾದ ಬಿ.ಎ. ಜಾಧವ, ರವೀಂದ್ರಕುರುಬಗಟ್ಟಿ, ಅಯ್ಯನಗೌಡರ, ಗಣೇಶ ಶಿರಹಟ್ಟಿ, ಗಿರೀಶ ಮನಸೂರು, ರವಿ ಯರಗಟ್ಟಿ, ವೀರೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.