ಬೆಳಗಾವಿ(ಡಿ.08): ನಗರದ ಜಿಲ್ಲಾಸ್ಪತ್ರೆಯಲ್ಲಿ ಅಂಗವಿಕಲ ಪ್ರಮಾಣ ಪತ್ರ ನೀಡಲು 20 ಸಾವಿರ ರು. ಬೇಡಿಕೆಯಿಟ್ಟಿದ್ದ ದಿವ್ಯಾಂಗ ಪುನರ್ವಸತಿ ಜಿಲ್ಲಾ ಕೇಂದ್ರ ಕಚೇರಿಯ ಗುಮಾಸ್ತ ಶನಿವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. 

ನಗರದ ಜಿಲ್ಲಾಸ್ಪತ್ರೆಯಲ್ಲಿರುವ ದಿವ್ಯಾಂಗ ಪುನರ್ವಸತಿ ಜಿಲ್ಲಾ ಕೇಂದ್ರ ಕಚೇರಿಯ ಗುಮಾಸ್ತ ಉಮೇಶ ಮಧುಕರ ನೆವಗಿರಿ (40) ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ವ್ಯಕ್ತಿ. ಬೆಳಗಾವಿ ಭವಾನಿ ನಗರದ ನಿವಾಸಿ ಚಂದ್ರಕಾಂತ ಚವ್ಹಾಣ ಎಂಬುವವರು ತಮ್ಮ ಬುದ್ದಿಮಾಂದ್ಯ ಮೊಮ್ಮಗನಿಗೆ ಪಿಂಚಣಿ ಸೌಲಭ್ಯ ಪಡೆಯಲು ಅಂಗವಿಕಲ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಅಲೆದಾಡಿದರೂ ನಾಳೆ ಬನ್ನಿ ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪತ್ರಕ್ಕಾಗಿ ಒತ್ತಡ ಹಾಕಿದ ಸಂದರ್ಭದಲ್ಲಿ 20 ಸಾವಿರ ನೀಡಿದರೆ ಮಾತ್ರ ಪ್ರಮಾಣಪತ್ರ ನೀಡುವುದಾಗಿ ಬೇಡಿಕೆ ಇಟ್ಟಿದ್ದನು.ಈ ಹಿನ್ನೆಲೆಯಲ್ಲಿ ಚಂದ್ರಕಾಂತ ಚವ್ಹಾಣ ಅವರು ಗುಮಾಸ್ತ ಉಮೇಶ ನೆವಗಿರಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

ದೂರಿನನ್ವಯ ಗುಮಾಸ್ತನ ವಿರುದ್ಧ ಬಲೆ ಹೆಣೆದಿದ್ದ ಎಸಿಬಿ ಎಸ್‌ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಗುಮಾಸ್ತ 20 ಸಾವಿರ ಲಂಚ ಪಡೆಯುವ ವೇಳೆ ದಾಳಿ ನಡೆಸಿ ಬಂಧಿಸಿದ್ದಾರೆ. 

ಪ್ರಕರಣ ದಾಖಲಿಸಿ ಕೊಂಡ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಉಮೇಶ ನೆವಗಿರಿ ಕಚೇರಿಗೆ ಬರುವ ಸಾರ್ವಜನಿಕರಿಗೆ ತಾನು ಹಿರಿಯ ಅಧಿಕಾರಿ ಎಂದು ಹೇಳಿ ಪರಿಚಯಿಸಿಕೊಂಡಿದ್ದನು. ಪ್ರಮಾಣ ಪತ್ರ ನೀಡಲು ಹಣ ಪಡೆಯುತ್ತಿದ್ದ. ಹಣ ನೀಡಲು ನಿರಾಕರಿಸಿದರೆ ಪ್ರಮಾಣಪತ್ರ ನೀಡುತ್ತಿರಲಿಲ್ಲ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.