ಕೊಪ್ಪಳ: ಲಂಚಕ್ಕೆ ಬೇಡಿಕೆ, ಎಸಿಬಿ ಬಲೆಗೆ ಬಿದ್ದ ಬಿಇಒ, ಎಸ್‌ಡಿಸಿ
5 ಸಾವಿರ ಲಂಚದ ಬೇಡಿಕೆ| ಬಿಇಒ ಉಮಾದೇವಿ ಸೊನ್ನದ ವಿರುದ್ಧವೂ ಪ್ರಕರಣ ದಾಖಲು| ತಲೆಮರೆಸಿಕೊಂಡ | ಬಿಇಒ ಉಮಾದೇವಿ ಸೊನ್ನದ|
ಕೊಪ್ಪಳ(ಮಾ.04): ಮುಚ್ಚಿದ ಶಾಲೆಯ 10 ಸಾವಿರ ಠೇವಣಿ ಹಣವನ್ನು ವಾಪಸ್ ಪಡೆಯಲು ಬೇಡಿಕೆ ಇಟ್ಟಿದ್ದ 5 ಸಾವಿರ ಲಂಚದಲ್ಲಿ ಬುಧವಾರ ಮೂರೂವರೆ ಸಾವಿರ ರುಪಾಯಿ ಲಂಚ ಸ್ವೀಕಾರ ಮಾಡುವ ವೇಳೆ ಕೊಪ್ಪಳ ಕ್ಷೇತ್ರ \ ಶಿಕ್ಷಣಾಧಿಕಾರಿ ಕಚೇರಿ ಎಸ್‌ಡಿಸಿ ಅರುಂಧತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಲ್ಲದೇ ಇದರಲ್ಲಿ ಶಾಮೀಲಾಗಿರುವ ಬಿಇಒ ಉಮಾದೇವಿ ಸೊನ್ನದ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಭಾಗ್ಯನಗರದಲ್ಲಿ ಎಸ್‌ಎಸ್‌ಕೆ ಸರ್ಕಾರಿ ಪ್ರಾಥಮಿಕ ಶಾಲೆ 2002ರಲ್ಲಿ ಮುಚ್ಚಿತ್ತು. ಇದರ ಠೇವಣಿ ಹಣ ಹತ್ತು ಸಾವಿರ ರುಪಾಯಿ ಇತ್ತು. ಇದನ್ನು ಪಡೆಯಲು ಶಾಲೆಯ ಮಾಲೀಕ ಬಾಲು ಕಬಾಡಿಯಾ ಅವರು ಹಲವು ದಿನಗಳಿಂದ ಪ್ರಯತ್ನ ಮಾಡುತ್ತಲೇ ಇದ್ದರು. ಇದಕ್ಕೆ 5 ಸಾವಿರ ಲಂಚದ ಬೇಡಿಕೆ ಇಟ್ಟಿದ್ದನ್ನು ಎಸಿಬಿಗೆ ದೂರು ಸಲ್ಲಿಸಿ ಹಣ ನೀಡುವ ವೇಳೆ ದಾಳಿ ಮಾಡಲಾಗಿದೆ.
'ಅಗತ್ಯ ವಸ್ತುಗಳ ಬೆಲೆ ಏರಿಸಿದ್ದೇ ಬಿಜೆಪಿಯ ದೊಡ್ಡ ಸಾಧನೆ'
ಇದಕ್ಕೂ ಮೊದಲು ಬಿಇಒ ಅವರಿಗೆ ಕರೆ ಮಾಡಿ ಹಣ ವಾಪಸ್ ಪಡೆಯುವುದಕ್ಕೆ ಅನುಮತಿ ಕೋರಿದಾಗ 5 ಸಾವಿರ ಲಂಚವನ್ನು ಎಸ್‌ಡಿಸಿ ಅರುಂಧತಿ ಅವರ ಕೈಯಲ್ಲಿ ಕೊಡಿ ಎಂದು ಹೇಳಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಎಸಿಬಿಯ ಬಳ್ಳಾರಿ ಎಸ್ಪಿ ಗುರುನಾಥ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಿವಕುಮಾರ, ಎಸ್‌ಐ ಎಸ್.ಎಸ್. ಬೀಳಗಿ ಎಸ್‌ಐ ಬಾಳನಗೌಡ ಅವರ ತಂಡ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಸಿ ಅರುಂಧತಿ ಅವರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದರೆ, ಬಿಇಒ ಉಮಾದೇವಿ ಸೊನ್ನದ ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.