ಬೆಂಗಳೂರು(ನ.25): ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಒಳಗಾಗಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ. ಬಿ.ಸುಧಾ (ಕೆಎಎಸ್‌) ಆಸ್ತಿಯ ರಹಸ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಗೆ ತನಿಖೆಯ ಅಳಕ್ಕೆ ಇಳಿದಂತೆಲ್ಲಾ ಬಯಲಾಗುತ್ತಿದೆ.

ಸುಧಾ ಮತ್ತವರ ಕುಟುಂಬ ಸದಸ್ಯರ ಸ್ಥಳಗಳು, ನಿವಾಸದ ಮೇಲೆ ನಡೆದಿದ್ದ ದಾಳಿ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ಮಂಗಳವಾರ ಮತ್ತಷ್ಟು ಮಂದಿಯ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಸುಧಾ ಆಪ್ತರಿಗೆ ಸೇರಿದ ಆರು ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಂಡು ಮತ್ತಷ್ಟು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ತಡರಾತ್ರಿಯವರೆಗೆ ಮುಂದುವರಿಸಿದರು. ಈ ಮೂಲಕ ಆರೋಪಿ ಸುಧಾ ಅವರ ಮತ್ತಷ್ಟು ಅಕ್ರಮಗಳನ್ನು ಎಸಿಬಿ ಅಧಿಕಾರಿಗಳು ಬಯಲುಗೊಳಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಭೀಮನಕುಪ್ಪೆ ಗ್ರಾಮದಲ್ಲಿ ಪ್ರತ್ಯೇಕವಾಗಿ ಮೂರು ವಾಸದ ಮನೆ, ಮಲ್ಲತ್ತಹಳ್ಳಿ ಎನ್‌ಜಿಎಫ್‌ ಲೇಔಟ್‌ನ ನಿವಾಸ, ರಾಮಸಂದ್ರ ಸೂಲಿಕೆರೆಯಲ್ಲಿ ವಾಸದ ಮನೆ ಮತ್ತು ಕೆ.ಕೆ.ಲೇಔಟ್‌ನಲ್ಲಿನ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಆರು ಮನೆಯು ಸುಧಾಳ ಆಪ್ತರಿಗೆ ಸೇರಿದ್ದಾಗಿದೆ. ದಾಳಿ ನಡೆಸಿರುವ ಸುಧಾಳ ಆಪ್ತರ ಹೆಸರನ್ನು ಬಹಿರಂಗ ಪಡಿಸಲು ಎಸಿಬಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ, ಮೂಲಗಳ ಪ್ರಕಾರ ರಿಯಲ್‌ ಎಸ್ಟೇಟ್‌ ಉದ್ಯಮಿ ಪ್ರಭು ಮತ್ತು ರಿಯಲ್‌ ಎಸ್ಟೇಟ್‌ ಏಜೆಂಟ್‌ ಮಹೇಶ್‌ ಎಂಬುವರಿಗೆ ಸೇರಿದ ಭೀಮನಕುಪ್ಪೆಯಲ್ಲಿನ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಅಕ್ರಮಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮತ್ತಷ್ಟುಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಅಕ್ರಮದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಎಸಿಬಿ ಮೂಲಗಳು ಹೇಳಿವೆ.

ಕೆಎಎಸ್ ಅಧಿಕಾರಿ ಸುಧಾ ಪರಿಚಯದ ಬಗ್ಗೆ ರೇಣುಕಾ ರಿಯಾಕ್ಷನ್

ಕೆಎಎಸ್‌ ಅಧಿಕಾರಿ ಡಾ. ಬಿ.ಸುಧಾ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿಯಾಗುವ ಮುನ್ನ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದರು. ಈ ವೇಳೆ ಸಾರ್ವಜನಿಕರಿಂದ ಲಂಚ ವಸೂಲಿ ಮಾಡಲು ನಾಲ್ಕೈದು ಮಂದಿಯನ್ನು ಏಜೆಂಟ್‌ ಆಗಿ ಇಟ್ಟುಕೊಂಡಿದ್ದರು. ಲಂಚದ ಹಣ ಕೈ ಸೇರಿದ ಬಳಿಕವೇ ಕೆಲಸಗಳು ಆಗುತ್ತಿದ್ದವು ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೇ, ಲಂಚವಾಗಿ ಪಡೆದ ಹಣವನ್ನು ಹೆಚ್ಚಿನ ಬಡ್ಡಿಗೆ ಬೇರೆಯವರಿಗೆ ಸಾಲ ನೀಡುತ್ತಿದ್ದರು. ಈ ವಿಷಯವನ್ನು ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ ನೀಡಿರುವ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಾಗ ಪ್ರಾಥಮಿಕ ಹಂತದ ತನಿಖೆಯಲ್ಲಿ ಸುಧಾ ನಡೆಸುತ್ತಿರುವ ಅಕ್ರಮಗಳು ಬೆಳಕಿಗೆ ಬಂದಿದೆ. ಅಕ್ರಮ ನಡೆಸಲು ತನ್ನದೇ ತಂಡವನ್ನು ರಚಿಸಿಕೊಂಡಿದ್ದರು. ಅಕ್ರಮಗಳ ಬಗ್ಗೆ ಅಳವಾಗಿ ತನಿಖೆ ನಡೆಸಲಾಗುತ್ತಿದ್ದು, ಮತ್ತಷ್ಟುಅಕ್ರಮಗಳು ಬಯಲಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆಪ್ತರ ಖಾತೆಯಲ್ಲಿ 3.5 ಕೋಟಿ ಠೇವಣಿ

ಎಸಿಬಿ ಅಧಿಕಾರಿಗಳಿಗೆ ಸುಧಾ ಮತ್ತವರ ಕುಟುಂಬ ಸದಸ್ಯರು, ಆಪ್ತರ ನಿವಾಸ ಮೇಲೆ ದಾಳಿ ನಡೆಸಿದ ವೇಳೆ 200ಕ್ಕೂ ಹೆಚ್ಚು ಆಸ್ತಿಗೆ ಸಂಬಂಧಪಟ್ಟದಾಖಲೆಗಳು ಮತ್ತು 50 ಬ್ಯಾಂಕ್‌ಗಳು ಪತ್ತೆಯಾಗಿದ್ದವು. ಬೆಂಗಳೂರು, ಮೈಸೂರು, ಉಡುಪಿ ಸೇರಿದಂತೆ ಹಲವಡೆ ಆಸ್ತಿ ಮಾಡಿರುವ ಸಾಧ್ಯತೆ ಇದೆ. ಸುಧಾ ಮತ್ತವರ ಆಪ್ತರ ಬ್ಯಾಂಕ್‌ ಖಾತೆಯಲ್ಲಿ .3.5 ಕೋಟಿ ಠೇವಣಿ ಇಟ್ಟಿರುವುದು ಗೊತ್ತಾಗಿದೆ. ಎಲ್ಲವನ್ನೂ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.