ಬೆಂಗಳೂರು ನಗರದಲ್ಲಿ ಇದ್ದಾರೆ 2.36 ಲಕ್ಷ 80+ ಹಿರಿಯ ಮತದಾರರು, 24 ಸಾವಿರ ಅಂಗವಿಕಲರಿಗೆ ಪೋಸ್ಟಲ್‌ ಮತದಾನ ಅವಕಾಶ. 

ಬೆಂಗಳೂರು(ಏ.11): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 95.13 ಲಕ್ಷಕ್ಕೂ ಅಧಿಕ ಮಂದಿ ಮತದಾನದ ಹಕ್ಕು ಪಡೆದಿದ್ದಾರೆ. ಈ ಪೈಕಿ 2.36 ಲಕ್ಷಕ್ಕೂ ಹೆಚ್ಚು ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಇರುವುದರಿಂದ ಪೋಸ್ಟಲ್‌ ಮಾದರಿಯಲ್ಲಿ ಮತದಾನ ಪ್ರಕ್ರಿಯೆ ನಡೆಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ (ಪಿಡಬ್ಲ್ಯೂಡಿ) ಮನೆಯಿಂದಲೇ ಮತ ಹಾಕಲು ಅವಕಾಶ ನೀಡಿದೆ. ಈ ಮತದಾರರ ಮನೆ ಬಾಗಿಲಿಗೆ ಮತಗಟ್ಟೆಯನ್ನು ಕೊಂಡೊಯ್ಯುವ ಕಾರ್ಯವನ್ನು ಚುನಾವಣಾ ಆಯೋಗ ಮಾಡಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರವಾರು ಮನೆಗಳಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟಮತದಾರರನ್ನು ಗುರುತಿಸಿ, ಮಾಹಿತಿ ಪಡೆಯುವ ಕಾರ್ಯ ಆರಂಭಿಸಲಾಗಿದೆ.

ಮತ ಚಲಾಯಿಸುವಂತೆ ಪೋಷಕರಿಗೆ ಪತ್ರ ಬರೆದ ಶಾಲಾ ವಿದ್ಯಾರ್ಥಿಗಳು!

ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 24,754 ಅಂಗವಿಕಲರು, 2,36,719 ಜನ 80 ವರ್ಷಕ್ಕಿಂತ ಮೇಲ್ಪಟ್ಟಮತದಾರರು ಇದ್ದಾರೆ. ಬಿಬಿಎಂಪಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟವರೇ ನಿರ್ಣಯಕ ಮತದಾರರಾಗಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ನೀಡಿರುವ ಅವಕಾಶ ಬಳಸಿಕೊಂಡು ಎಲ್ಲರೂ ಮತದಾನ ಮಾಡುವಂತೆ ಅನುಕೂಲ ಕಲ್ಪಿಸಲಾಗುತ್ತಿದೆ.

ಕಳೆದ ಬಾರಿ ಬೆಂಗಳೂರಿನಲ್ಲಿ ಶೇ.50ರಿಂದ 60ಕ್ಕಿಂತ ಹೆಚ್ಚು ಮತದಾನ ನಡೆದಿಲ್ಲ. ಆದ್ದರಿಂದ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಮತಗಟ್ಟೆಗಳಿಗೆ ಬರುವಂತೆ ಮಾಡಲು ಆಯೋಗ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಮುಖ್ಯವಾಗಿ ಮತಕೇಂದ್ರಗಳಿಗೆ ಬರಲು ಸಾಧ್ಯವಾಗದ ಹಿರಿಯ ನಾಗರಿಕರು, ಅಂಗವಿಕಲರಿಗೆ ಮನೆಗಳಿಂದಲೇ ಮತದಾನ ಮಾಡಲು ಅವಕಾಶವನ್ನೂ ಸಹ ನೀಡಿದೆ. ಈ ಎಲ್ಲ ಅವಕಾಶಗಳನ್ನು ಬಳಕೆ ಮಾಡಿಕೊಂಡು ಮತದಾನದ ಪ್ರಮಾಣ ಶೇ.90ರಿಂದ 100ರಷ್ಟು ಮಾಡಬೇಕೆಂಬ ಗುರಿ ಹೊಂದಲಾಗಿದೆ.