ನಾರಾಯಣ ಹೆಗಡೆ

ಕೊರಳು ತುಂಬಾ ಒಣ ಕೊಬ್ಬರಿ ಹಾರ ಕಟ್ಟಿಕೊಂಡು ಶರವೇಗದಲ್ಲಿ ಓಡುವ ಕೊಬ್ಬಿದ ಹೋರಿಗಳು, ಅವನ್ನು ಹಿಡಿಯಲು ಒಮ್ಮೆಲೆ ಮುಂದಕ್ಕೆ ಬರುವ ಸಾಹಸಿ ಯುವಕರ ದಂಡು, ಹೋರಿ ಹಿಡಿದು ಪೌರುಷ ಮೆರೆಯುವ ಪೈಲ್ವಾನರು. ಆಗ ಅಲ್ಲಿ ಮುಗಿಲು ಮಟ್ಟುವ ಸಂಭ್ರಮ, ಕೇಕೆ, ಸಿಳ್ಳೆಗಳಿಗೆ ಪಾರವೇ ಇರುವುದಿಲ್ಲ.

ಉತ್ತರ ಕರ್ನಾಟಕ ಭಾಗದಲ್ಲಿ ದೀಪಾವಳಿಯಿಂದ ಆರಂಭವಾಗಿ ಸಂಕ್ರಾಂತಿ ತನಕವೂ ಗ್ರಾಮೀಣ ಭಾಗದಲ್ಲಿ ಕಾಣುವ ಕೊಬ್ಬರಿ ಹೋರಿ ಬೆದರಿಸುವ ಕ್ರೀಡೆಯ ಝಲಕ್‌. ‘ಹೋರಿ ಬಂತು ಹಿಡೀರಲೇ..’ ಎನ್ನುತ್ತಲೇ ನಾಗಾಲೋಟದಲ್ಲಿ ನಾಲ್ಕೂ ಕಾಲುಗಳನ್ನು ಮೇಲಕ್ಕೆತ್ತಿ ಓಡುವ ಹೋರಿಗಳ ಮೇಲೆ ಮುಗಿಬೀಳುವ ಯುವಕರ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ಜಾನಪದ ಕ್ರೀಡೆಯನ್ನಾಗಿ ಕೊಬ್ಬರಿ ಹೋರಿ ಸ್ಪರ್ಧೆ ಆಚರಿಸಲಾಗುತ್ತದೆ. ಬೆಳಗ್ಗೆಯಿಂದ ಆರಂಭವಾಗುವ ಹೋರಿಗಳ ಓಟ ಸಂಜೆವರೆಗೂ ನಡೆಯುತ್ತದೆ.

ಭಾರತದ ಏಕೈಕ ಸುಲ್ತಾನ ಈ ಹೋರಿ!

ಕೊಂಬಲ್ಲಿ ರಿಬ್ಬನ್ನು, ಬೆಲೂನು

ಈ ಕ್ರೀಡೆಯಲ್ಲಿ ಹೋರಿಗಳ ಸಿಂಗಾರ ಕಣ್ಣಿಗೆ ಹಬ್ಬ. ರಿಬ್ಬನ್ನು, ಕೊಂಬುಗಳಿಗೆ ಐದಾರು ಅಡಿ ಎತ್ತರದ ಬಣ್ಣಬಣ್ಣದ ಬಲೂನು, ಕಾಲಿಗೆ ಗೆಜ್ಜೆ ಕಟ್ಟಿಸಿಂಗಾರಗೊಂಡ ಹೋರಿಗಳನ್ನು ಒಂದೊಂದಾಗಿ ಓಟಕ್ಕೆ ಬಿಡಲಾಗುತ್ತದೆ. ಅಖಾಡಕ್ಕೆ ಇಳಿಯುವ ಹೋರಿಗಳು ಮಿಂಚಿನ ಓಟದಲ್ಲಿ ಯಾರ ಕೈಗೂ ಸಿಗದೇ ಗಮ್ಯ ತಲುಪಿದರೆ ಆ ಹೋರಿ ಗೆದ್ದಂತೆ. ಮಧ್ಯೆ ಹತ್ತಾರು ಯುವಕರು ಕೆಲವು ಹೋರಿಗಳ ಕೊರಳಿಗೆ ಕೈ ಹಾಕಿ ಕೊಬ್ಬರಿ ಹರಿಯುವಲ್ಲಿ ಸಫಲರಾಗುತ್ತಾರೆ. ಹೋರಿಗಳು ಓಡುವ ಭರದಲ್ಲಿ ಇರಿಯುತ್ತಲೇ ಮುನ್ನುಗ್ಗುತ್ತವೆ. ಸಿಕ್ಕವರನ್ನು ಉರುಳಿಸಿ ಹಾಕುತ್ತವೆ. ಹಿಡಿಯಲು ಬಂದವರನ್ನು ತಿವಿದು ಕೆಳಕ್ಕೆ ಹಾಕಿ ಮುನ್ನುಗ್ಗುತ್ತವೆ.

ಲಕ್ಷಾಂತರ ರು. ಬೆಲೆಬಾಳುವ ಹೋರಿಗಳು

ಸುತ್ತ ಹತ್ತಾರು ಹಳ್ಳಿಗಳಿಂದ ಪ್ರಸಿದ್ಧಿ ಪಡೆದಿರುವ ನೂರಾರು ಹೋರಿಗಳು ರಾಜಗಾಂಭೀರ್ಯದಿಂದಲೇ ಸ್ಪರ್ಧೆಗೆ ಬರುತ್ತವೆ. ಉಳುಮೆ ಎತ್ತಿಗೂ ಕೊಬ್ಬರಿ ಹೋರಿಗೂ ವ್ಯತ್ಯಾಸವಿದೆ. ಸ್ಪರ್ಧೆಗೆಂದೇ ಹೋರಿಗಳನ್ನು ಪಳಗಿಸಲಾಗುತ್ತದೆ. ಲಕ್ಷ, ಒಂದೂವರೆ ಲಕ್ಷ ರೂಪಾಯಿ ಬೆಲೆ ಬಾಳು ಹೋರಿಗಳು ಸ್ಪರ್ಧೆಗೆ ಬರುತ್ತವೆ. ಅಖಾಡದ ಓಟ ಆರಂಭಿಸುವುದಕ್ಕಿಂತ ಮುನ್ನವೇ ಈ ಹೋರಿಗಳು ಕಣ್ಣು ಕೆಂಪಾಗಿಸಿಕೊಂಡು ದುರುಗುಟ್ಟಿನೋಡುತ್ತಿದ್ದರೆ ಯುವಕರು ಅದರ ಹತ್ತಿರ ಹೋಗಲು ಹೆದರುತ್ತಾರೆ. ಈ ಹೋರಿಗಳು ಯಾರನ್ನೂ ಹತ್ತಿರ ಬಿಟ್ಟಿಕೊಳ್ಳದೇ ಓಡುತ್ತವೆ. ಅದಕ್ಕಾಗಿಯೇ ‘ದಮ್‌ ಇದ್ದಾಂವ ದನ ಬೆದರಸ್ತಾನ’ ಎಂಬ ಮಾತು ಈ ಭಾಗದಲ್ಲಿ ಚಾಲ್ತಿಯಲ್ಲಿದೆ. ಹೆಚ್ಚು ಕೊಬ್ಬರಿಗಳನ್ನು ಹರಿದುಕೊಂಡ ವ್ಯಕ್ತಿಗೆ ಸಂಘಟಕರು ಉತ್ತಮ ಹಿಡಿತಗಾರನೆಂಬ ಪ್ರಶಸ್ತಿ ನೀಡಿದರೆ, ಯಾರ ಕೈಗೂ ಸಿಗದೇ ಕೊಬ್ಬರಿ ಸರವನ್ನು ಹರಿಸಿಕೊಳ್ಳದೇ ಓಡಿದ ಹೋರಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ರೆಬಲ್‌ ಸ್ಟಾರ್‌, ಸಾಹಸಸಿಂಹ ಹೋರಿಗಳು

ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳನ್ನು ಅಲಂಕರಿಸುವುದು ಜತೆಗೆ ಅವುಗಳಿಗೆ ವಿಶೇಷವಾಗಿ ನಾಮಕರಣ ಮಾಡಲಾಗುತ್ತದೆ. ಪೈಲ್ವಾನ್‌, ಕರ್ನಾಟಕ ರತ್ನ, ಕದಂಬ, ನಾಗರಹಾವು, ಟೈಗರ್‌, ರೆಬಲ್‌ಸ್ಟಾರ್‌, ಸಾಹಸಸಿಂಹ, ಡಾ.ರಾಜ್‌, ಚಾಮುಂಡಿ ಎಕ್ಸ್‌ಪ್ರೆಸ್‌, ಹಾವೇರಿ ಸ್ಟಾರ್‌, ಕರ್ನಾಟಕ ಎಕ್ಸ್‌ಪ್ರೆಸ್‌ ಸೇರಿದಂತೆ ಸಿನಿಮಾ, ಕ್ರಿಕೆಟ್‌ ತಾರೆಗಳ ಹಾಗೂ ರಾಜಕಾರಣಿಗಳ ಹೆಸರು ಹೀಗೆ ತಮ್ಮ ನೆಚ್ಚಿನವರ ಹೆಸರುಗಳು ಹೋರಿಗಳ ಮೈಮೇಲೆ ರಾರಾಜಿಸುತ್ತಿರುತ್ತವೆ. ಅಲ್ಲದೇ ಅವುಗಳನ್ನು ಅದೇ ಹೆಸರಿನಿಂದ ಧ್ವನಿವರ್ಧಕದ ಮೂಲಕ ಅನೌನ್ಸ್‌ ಮಾಡುವುದು, ಕಾಮೆಂಟರಿ ಕೇಳುವುದೇ ಒಂದು ಖುಷಿ.

ಸ್ಪರ್ಧೆ ಗೆದ್ದು ಸಿರಿವಂತರಾಗೋ ಜನ

ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಹೋರಿಗಳಿಗೆ ಬಂಗಾರ, ಬೆಳ್ಳಿ ಆಭರಣಗಳು, ಬೈಕ್‌, ಚಿನ್ನದ ಉಂಗುರ, ಟೀವಿ, ಫ್ರಿಡ್ಜ್‌ ಹೀಗೆ ಹಲವಾರು ರೀತಿಯ ಬೆಲೆ ಬಾಳುವ ವಸ್ತುಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಒಂದೊಂದು ಕೊಬ್ಬರಿ ಹೋರಿ ಸ್ಪರ್ಧೆ ವೀಕ್ಷಿಸಲು ಸಹಸ್ರಾರು ಜನರು ಆಗಮಿಸಿರುತ್ತಾರೆ. ಒಂದೊಂದು ಹೋರಿ ಓಡುವಾಗಲು ಬಾಜಾ ಭಜಂತ್ರಿ, ಹಲಗೆ, ಕೇಕೆ, ಸಿಳ್ಳೆಗಳಿಂದ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಕೆಲವು ಹೋರಿಗಳು ಸ್ಪರ್ಧೆಗೆ ಹೋದಲ್ಲೆಲ್ಲ ಬಹುಮಾನ ಗೆದ್ದೇ ವಾಪಸಾಗುತ್ತವೆ. ಅಂಥ ಹೋರಿಗಳು ಗೆದ್ದ ಬಹುಮಾನದಿಂದಲೇ ಮಾಲೀಕ ಶ್ರೀಮಂತನಾದ ಉದಾಹರಣೆಯೂ ಇದೆ.

ಪ್ರತಿಕ್ಷಣವೂ ರೋಮಾಂಚನಗೊಳಿಸುವ ಕೊಬ್ಬರಿ ಹೋರಿಗಳ ಹಾಗೂ ಹೋರಿ ಹಿಡಿಯುವವರ ಸಾಹಸ ಸಂಭ್ರಮ ಒಂದೆಡೆಯಾದರೆ, ಇದರಿಂದ ಅಪಾಯ ಒಡ್ಡುವಂತಹ ಕ್ಷಣಗಳನ್ನು ಸಹ ಮರೆಯುವಂತಿಲ್ಲ. ಹೋರಿಗಳ ಕೊರಳಲ್ಲಿರುವ ಕೊಬ್ಬರಿ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸುವ ಹಲವಾರು ಯುವಕರು ಹೋರಿಗಳ ಇರಿತದಿಂದ ಅಪಾಯಕ್ಕೆ ಸಿಕ್ಕ ನಿದರ್ಶನಗಳು ಸಾಕಷ್ಟಿವೆ. ದೀಪಾವಳಿ ಪಾಡ್ಯದಿಂದ ಆರಂಭವಾಗಿ ಸಂಕ್ರಾಂತಿ ತನಕವೂ ನಿತ್ಯವೂ ಒಂದಿಲ್ಲೊಂದು ಗ್ರಾಮದಲ್ಲಿ ಈ ಜಾನಪದ ಕ್ರೀಡೆ ಇದ್ದೇ ಇರುತ್ತದೆ. ಅಲ್ಲೆಲ್ಲ ಅಂದು ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.